ಕರ್ನಾಟಕ

karnataka

ETV Bharat / state

ಗಂಗಾವತಿ: ಆಸ್ತಿ ವಿವಾದ ಹಿನ್ನೆಲೆ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ - Election boycott

ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಆಸ್ತಿ ವರ್ಗಾವಣೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಕೊಪ್ಪಳ ಜಿಲ್ಲೆಯ ಆನೆಗೊಂದಿ ಪಂಚಾಯ್ತಿ ವ್ಯಾಪ್ತಿಯ ಚಿಕ್ಕರಾಂಪೂರ 1 ಮತ್ತು 2ರ ಗ್ರಾಮಸ್ಥರು ಲೋಕಸಭಾ ಚುನಾವಣೆ ಬಹಿಷ್ಕರಿಸಲು ನಿರ್ಣಯ ಕೈಗೊಂಡಿದ್ದಾರೆ.

property dispute  ELECTION BOYCOTT  Koppal
ಆಸ್ತಿ ವಿವಾದ ಹಿನ್ನೆಲೆ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ

By ETV Bharat Karnataka Team

Published : Apr 5, 2024, 10:25 AM IST

ಗಂಗಾವತಿ:ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಆಸ್ತಿ ವರ್ಗಾವಣೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ತಾಲೂಕಿನ ಆನೆಗೊಂದಿ ಪಂಚಾಯಿತಿ ವ್ಯಾಪ್ತಿಯ ಚಿಕ್ಕರಾಂಪೂರ 1 ಮತ್ತು 2ರ ಗ್ರಾಮಸ್ಥರು ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡಲು ತೀರ್ಮಾನ ಕೈಗೊಂಡಿದ್ದಾರೆ.

ಗ್ರಾಮದ ನೂರಾರು ಜನ ಸಭೆ ಸೇರಿ ಚುನಾವಣೆ ಬಹಿಷ್ಕರಿಸುವ ನಿರ್ಧಾರ ಮಾಡಿರುವ ಕುರಿತು ಜಿಲ್ಲಾಧಿಕಾರಿಗೆ ಲಿಖಿತ ಮನವಿ ಸಲ್ಲಿಸಲಿದ್ದಾರೆ. ವಾಸ ಸ್ಥಳಕ್ಕೆ ಹಕ್ಕುಪತ್ರ ನೀಡಬೇಕು, ಖಾತಾ ಪುಸ್ತಕದಲ್ಲಿ ಆಸ್ತಿ ನೋಂದಣಿ ಮಾಡಬೇಕು ಎನ್ನುವುದು ಗ್ರಾಮಸ್ಥರ ಪ್ರಮುಖ ಬೇಡಿಕೆಯಾಗಿದೆ.

ಸುಮಾರು 600ಕ್ಕೂ ಹೆಚ್ಚು ಕುಟುಂಬಗಳಿರುವ ಗ್ರಾಮದ ಸಮಸ್ಯೆಗಳ ಬಗ್ಗೆ ಈ ಹಿಂದೆ ಹಲವು ಬಾರಿ ಗಂಗಾವತಿ ತಹಶೀಲ್ದಾರ್​ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದನ್ನು ಮನಗಂಡಿರುವ ಗ್ರಾಮಸ್ಥರು ಚುನಾವಣಾ ಬಹಿಷ್ಕಾರದ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಗ್ರಾಮದಲ್ಲಿ ಅಗತ್ಯ ಸೌಲಭ್ಯಗಳಾದ ಸಿಸಿ ರಸ್ತೆ, ಕುಡಿಯುವ ನೀರು, ವಿದ್ಯುತ್, ಸರ್ಕಾರಿ ಶಾಲೆ, ಅಂಗನವಾಡಿ ಸೇರಿದಂತೆ ನಾನಾ ಸೌಲಭ್ಯಗಳಿಲ್ಲ. ಕುಟುಂಬಗಳು ವಾಸಿಸುವ ಸ್ಥಳಕ್ಕೆ ಪಂಚಾಯ್ತಿ ಪ್ರತಿ ವರ್ಷ ಕಂದಾಯ ವಿಧಿಸುತ್ತಿದೆ. ಆದರೆ, ಹಕ್ಕು ಪತ್ರ ನೀಡದ ಹಿನ್ನೆಲೆ ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇತ್ತೀಚಿನ ಘಟನೆ, ರೈಲ್ವೆ ಮೇಲ್ಸೇತುವೆ ನಿರ್ಮಿಸದಿದ್ದರೆ ಮತದಾನ ಬಹಿಷ್ಕಾರ:ರೈಲ್ವೆ ಮೇಲ್ಸೇತುವೆ ನಿರ್ಮಿಸದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಅನಂತವಾಡಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಅನಂತವಾಡಿ ಗ್ರಾಪಂನಲ್ಲಿ ಕೊಂಕಣ ರೈಲ್ವೆ ಹಳಿ ಹಾದು ಹೋಗಿದೆ. ಇದರಿಂದ ಕೋಟ, ತುಂಬೆಬೀಳು ಹಾಗೂ ಇತರ ಗ್ರಾಮಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿನ ರೈಲ್ವೆ ಗೇಟ್ ಯಾವಾಗಲೂ ಮುಚ್ಚಿಯೇ ಇರುತ್ತದೆ. ಶಾಲೆಗೆ ತೆರಳುವ ಮಕ್ಕಳಿಗೆ ಸೇರಿದಂತೆ ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗುತ್ತಿದೆ. ಲೋಕಸಭೆ ಚುನಾವಣೆಗೂ ಮುನ್ನ ರೈಲ್ವೆ ಮೇಲ್ಸೇತುವೆ ನಿರ್ಮಿಸಲು ಕ್ರಮವಹಿಸದಿದ್ದರೆ ಚುನಾವಣೆ ಬಹಿಷ್ಕಾರ ಮಾಡಲಾಗುವುದು ರೈಲ್ವೆ ಮೇಲ್ಸೇತುವೆ ಹೋರಾಟ ಸಮಿತಿಯ ಸದಸ್ಯರು ಎಚ್ಚರಿಕೆ ಕೊಟ್ಟಿದ್ದಾರೆ.

''ಇಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ಅಧಿಕಾರಿಗಳಿಗೆ ಹಾಗೂ ಕೊಂಕಣ ರೈಲ್ವೆ ಮುಖ್ಯ ಕಚೇರಿಗೆ ಕಳೆದ 5 ವರ್ಷಗಳಿಂದ ಸತತವಾಗಿ ಮನವಿ ಸಲ್ಲಿಸುತ್ತಿದ್ದೇವೆ. ಪ್ರಧಾನಮಂತ್ರಿ ಕಚೇರಿಗೂ ಪತ್ರ ಬರೆಯಲಾಗಿದೆ. ಸರಿಯಾದ ಉತ್ತರ ಬಂದಿಲ್ಲ. ಸಂಸದರಿಗೂ ಮನವಿ ಕೊಡಲಾಗಿದೆ. ಇದಕ್ಕೆ ಯಾವುದೇ ಸ್ಪಂದನೆಯನ್ನೂ ಕೊಟ್ಟಿಲ್ಲ. ಮೇಲ್ಸೇತುವೆ ನಿರ್ಮಾಣವಾಗುವವರೆಗೂ ಯಾವುದೇ ಚುನಾವಣೆಗಳಲ್ಲಿ ಮತದಾನ ಮಾಡುವುದಿಲ್ಲ'' ಎಂದು ರೈಲ್ವೆ ಮೇಲ್ಸೇತುವೆ ಹೋರಾಟ ಸಮಿತಿ ಅಧ್ಯಕ್ಷ ಗಜಾನನ ನಾಯ್ಕ ಕಿಡಿಕಾರಿದರು.

ಇದನ್ನೂ ಓದಿ:ಲೋಕಸಮರ ಅಕ್ರಮ: ರಾಜ್ಯದಲ್ಲಿ 187.85 ಕೋಟಿ ಮೌಲ್ಯದ ನಗದು, ಮದ್ಯ, ಇತರ ವಸ್ತುಗಳು ಜಪ್ತಿ - Lok Sabha Election

ABOUT THE AUTHOR

...view details