ಬೆಳಗಾವಿ:ಶ್ರಮ ವಹಿಸಿ ದುಡಿಯುವ ಮನಸ್ಸುಗಳಿಗೆ, ದುಡಿದೇ ತಿನ್ನಬೇಕು ಎನ್ನುವವರಿಗೆ ವಯಸ್ಸಿನ ಮಿತಿ ಇಲ್ಲ. ಕೆಲಸ ಮಾಡದೇ ಸುಮ್ಮನೆ ಓಡಾಡುತ್ತಿರುವ ಅದೆಷ್ಟೋ ಜನರ ನಡುವೆ, ನಮಗೆ ವಯಸ್ಸಾಯಿತು ಅಂತಾ ಈ ಹಿರಿಯ ಜೀವಗಳು ಮನೆಯಲ್ಲಿ ಕುಳಿತಿಲ್ಲ. ಕಷ್ಟಪಟ್ಟು ಕೆಲಸ ಮಾಡುವ ಇವರಿಗೆ ನರೇಗಾ ಯೋಜನೆ ಕೈ ಹಿಡಿದಿದೆ. ಇವರ ಕಾಯಕ ಇತರರಿಗೂ ಮಾದರಿಯಾಗಿದೆ. ಇದು ಕಾಯಕಯೋಗಿ ದಂಪತಿಗಳ ಕುರಿತ ವಿಶೇಷ ವರದಿ.
ಕೈಯಲ್ಲಿ ಗುದ್ದಲಿ ಹಿಡಿದು ಅಜ್ಜ ಭೂಮಿ ಅಗೆಯುತ್ತಿದ್ದರೆ, ಸಲಿಕೆ, ಬುಟ್ಟಿಯಲ್ಲಿ ಮಣ್ಣು ತುಂಬಿ ಅಜ್ಜಿ ವಡ್ಡಿಗೆ ಹಾಕುತ್ತಿದ್ದರು. ಕಿರಿಯ ವಯಸ್ಸಿನವರ ಜೊತೆಗೆ ಪೈಪೋಟಿ ಎನ್ನುವಂತೆ ಕೆಲಸದ ಮೇಲೆ ಅವರಿಗಿರುವ ಅದಮ್ಯ ಉತ್ಸಾಹ ಎಂಥವರನ್ನೂ ಬೆರಗುಗೊಳಿಸುತ್ತಿತ್ತು. ಈ ದೃಶ್ಯ ಕಂಡು ಬಂದಿದ್ದು ಖಾನಾಪುರ ತಾಲೂಕಿನ ಶೇಡೆಗಾಳಿ ತೋಟಗಾರಿಕಾ ಕ್ಷೇತ್ರದಲ್ಲಿ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಯಡಿ ಶೇಡೆಗಾಳಿ ತೋಟಗಾರಿಕಾ ಕ್ಷೇತ್ರದಲ್ಲಿ ಟ್ರೆಂಚ್ ಕಮ್ ಬದು ನಿರ್ಮಾಣ ಕೆಲಸ ನಡೆಯುತ್ತಿದೆ. ಈ ವೇಳೆ, ಶೇಡೆಗಾಳಿ ಗ್ರಾಮದ 80 ವರ್ಷದ ನಾಗಪ್ಪ ಕುಂಬ್ರದವಾಡ್ಕರ್ ಮತ್ತು 75 ವರ್ಷದ ಆನಂದಾ ದಂಪತಿ ಕೆಲಸ ಮಾಡುತ್ತಿರುವುದು ಗಮನ ಸೆಳೆದಿದೆ.
ಈ ವೃದ್ಧ ದಂಪತಿಗೆ ಅಲ್ಪಪ್ರಮಾಣದ ಜಮೀನಿದ್ದು, ಮಕ್ಕಳೂ ಇದ್ದಾರೆ. ಆದ್ರೆ ಯಾರಿಗೂ ಹೊರೆಯಾಗದೇ ಈ ಅಜ್ಜ-ಅಜ್ಜಿ ಸ್ವತಂತ್ರ ಜೀವನ ನಡೆಸುತ್ತಿರುವುದು ವಿಶೇಷವಾಗಿದ್ದು, ಇವರ ಸ್ವಾವಲಂಬಿ ಬದುಕು ನಮಗೆಲ್ಲಾ ಪ್ರೇರಣೆ ಎನ್ನುತ್ತಾರೆ ಗ್ರಾಮಸ್ಥರು.
ದುಡಿದು ತಿನ್ನುವುದರಲ್ಲಿ ಖುಷಿ ಇದೆ : 'ಈಟಿವಿ ಭಾರತ' ಈ ದಂಪತಿಗಳನ್ನು ಮಾತನಾಡಿಸಿದಾಗ, ''ಕುಳಿತು ತಿನ್ನುವುದು ಏಕೆ. ಮೈಯಲ್ಲಿ ಶಕ್ತಿ ಇರೋವರೆಗೂ ದುಡಿಯುವುದೇ. ಅಲ್ಲದೇ ಕೆಲಸಕ್ಕಾಗಿ ಅಲ್ಲಿ, ಇಲ್ಲಿ ಅಲೆದಾಡುವ ಬದಲು ಈ ನರೇಗಾ ಯೋಜನೆಯ ಕೆಲಸ ಮಾಡಲು ಬಂದಿದ್ದೇವೆ. ಇನ್ನೊಬ್ಬರ ಮೇಲೆ ಅವಲಂಬಿತವಾಗದೆ, ಹೀಗೆ ದುಡಿದು ತಿನ್ನುವುದರಲ್ಲಿ ಖುಷಿ ಇದೆ. ಹಾಗಾಗಿ, ಇಲ್ಲಿ ಕೆಲಸ ಮಾಡುತ್ತಿದ್ದೇವೆ. ನರೇಗಾ ನಮಗೆ ಅನುಕೂಲ ಆಗಿದೆ'' ಎಂದರು.
ಅಲ್ಲಿಯೇ ಕೆಲಸ ಮಾಡುತ್ತಿದ್ದ ರೇಖಾ ಗುರವ ಅವರು ಮಾತನಾಡಿ, ''ಇಳಿ ವಯಸ್ಸಿನ ಅಜ್ಜ-ಅಜ್ಜಿ ಕೆಲಸ ಪ್ರೇರಣೆ ಆಗಿ, ನಾವು ಮನೆಯಲ್ಲಿ ಖಾಲಿ ಕುಳಿತುಕೊಳ್ಳಬಾರದು ಅಂತಾ ನರೇಗಾ ಕೆಲಸಕ್ಕೆ ಬಂದಿದ್ದೇವೆ. ನರೇಗಾ ಕೂಲಿ ಹಣದಿಂದ ಮಕ್ಕಳ ಶಾಲೆ ಖರ್ಚು, ಮನೆ ನಿರ್ವಹಣೆಗೆ ಬಳಸುತ್ತಿದ್ದೇವೆ. ಅಲ್ಲದೇ ಇದ್ದ ಊರಲ್ಲೇ ಕೆಲಸ ಸಿಗುತ್ತಿದೆ. ನರೇಗಾ ನಮ್ಮ ಕೈ ಹಿಡಿದಿದೆ'' ಎಂದು ತಿಳಿಸಿದರು.