ಬೆಂಗಳೂರು: ಮುಸ್ಲಿಮರ ಪವಿತ್ರ ಹಬ್ಬ ಈದ್ ಮಿಲಾದ್ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 16ರಂದು ನಗರದ ವಿವಿಧ ಮೈದಾನಗಳಲ್ಲಿ ಕಾರ್ಯಕ್ರಮಗಳು ಹಾಗೂ ವಿವಿಧ ಭಾಗಗಳಿಂದ ಸ್ತಬ್ಧಚಿತ್ರಗಳ ಮೆರವಣಿಗೆ ಆಯೋಜನೆಯಾಗಿದ್ದು, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಕೆಲ ಕಟ್ಟುನಿಟ್ಟಿನ ಸೂಚನೆಗಳನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ನೀಡಿದ್ದಾರೆ.
ಮೆರವಣಿಗೆಗಳ ಆಯೋಜಕರು ತಾವು ಸಾಗುವ ಮಾರ್ಗದಲ್ಲಿ ಸಾರ್ವಜನಿಕರಿಗೆ, ಸುಗಮ ಸಂಚಾರಕ್ಕೆ ಆಡಚಣೆಗಳು ಉಂಟಾಗದಂತೆ ಸ್ವಯಂಸೇವಕರ ಮೂಲಕ ರಸ್ತೆಯ ಎರಡು ಬದಿಯಲ್ಲಿ ನಿಂತು ಸೂಕ್ತ ನಿರ್ದೇಶನಗಳನ್ನು ನೀಡಬೇಕು. ಮೆರವಣಿಗೆ ಶಾಂತ ರೀತಿಯಲ್ಲಿ ಸಾಗುವಂತೆ ಸಹಕರಿಸಬೇಕು. ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರು ಯಾವುದೇ ಹರಿತವಾದ ವಸ್ತುಗಳನ್ನು ಹೊಂದಿರಬಾರದು. ಮೆರವಣಿಗೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಡಿಜೆಗಳನ್ನು ಬಳಸಬಾರದು. ಮೆರವಣಿಗೆಯಲ್ಲಿ ಬಳಸುವ ಸ್ತಬ್ಧಚಿತ್ರಗಳು ಯಾವುದೇ ಪ್ರಚೋದನಾತ್ಮಕ ಅಂಶಗಳನ್ನೊಳಗೊಂಡಿರಬಾರದು. ಮೆರವಣಿಗೆಯ ಸಂದರ್ಭದಲ್ಲಿ ಯಾವುದೇ ಪೂಜಾ ಸ್ಥಳಗಳು (ದೇವಸ್ಥಾನ/ಚರ್ಚ್ಗಳ) ಮುಂಭಾಗದಲ್ಲಿ ಘೋಷಣೆಗಳನ್ನು ಕೂಗಬಾರದು.