ಶಿವಮೊಗ್ಗ:ನಟ ಶಿವರಾಜ್ ಕುಮಾರ್ ಅವರು ವಿಶ್ವದ ಬೆಸ್ಟ್ ಡಾಕ್ಟರ್ ಬಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಅಭಿಮಾನಿಗಳು ಭಯಪಡುವ ಅಗತ್ಯವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಈ ಕುರಿತು ಜಿಲ್ಲೆಯ ಕುಬಟೂರಿನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವರಾಜ್ ಕುಮಾರ್ ಈಗಾಗಲೇ ಅಮೆರಿಕದ ಮಿಯಾಮಿಯನ್ನು ತಲುಪಿದ್ದಾರೆ. ಡಿಸೆಂಬರ್ 24 ರಂದು ಅವರಿಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ. ನಾನು ನಾಳೆ (ಭಾನುವಾರ) ಸಂಜೆ ಮಿಯಾಮಿಗೆ ತೆರಳಿ ಶಸ್ತ್ರ ಚಿಕಿತ್ಸೆ ವೇಳೆ ಅವರ ಜೊತೆಗೆ ಇರಲಿದ್ದೇನೆ. ಆಸ್ಪತ್ರೆಯಲ್ಲಿ ಅವರು 10 ದಿನಗಳ ಕಾಲ ಇರಲಿದ್ದಾರೆ. ಶಿವಣ್ಣ ಒಂದು ತಿಂಗಳ ಕಾಲ ಮಿಯಾಮಿನಲ್ಲಿಯೇ ಇರುತ್ತಾರೆ. ಸುಮಾರು ಒಂದೂವರೆ ತಿಂಗಳ ನಂತರ ಶಿವಣ್ಣ ಬೆಂಗಳೂರಿಗೆ ಬರುತ್ತಾರೆ. ಅಭಿಮಾನಿಗಳ ಆಶೀರ್ವಾದವೇ ಅವರಿಗೆ ಶ್ರೀ ರಕ್ಷೆ ಎಂದು ಹೇಳಿದರು.
ಬಿಜೆಪಿಯವರ ಬಗ್ಗೆ ಟೀಕೆ; ಬಿಜೆಪಿಯವರ ಹಣೆಬರಹ ರಾಜ್ಯದ ಜನತೆಗೆ ಗೊತ್ತಾಗಿದೆ. ಈ ರಾಜ್ಯದಲ್ಲಿ ಕಾನೂನು ಇದೆ, ಅದಕ್ಕೆ ಸಿ. ಟಿ ರವಿ ಬಂಧನವಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಪೊಲೀಸರು ಕ್ರಮವನ್ನು ಸಮರ್ಥಿಸಿಕೊಂಡರು.
ಅಂಬೇಡ್ಕರ್ ಅವರ ಬಗ್ಗೆ ಚರ್ಚೆ ಆಗಬಾರದು ಎಂದು ಸಿ. ಟಿ ರವಿ ಆ ರೀತಿ ವರ್ತನೆ ಮಾಡಿದ್ದಾರೆ. ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವೆ, ನಮಗೆಲ್ಲ ಬಾಬಾಸಾಹೇಬ ಅಂಬೇಡ್ಕರ್ ಅವರೇ ದೇವರು ಎಂದರು.