ಬೆಂಗಳೂರು: ಕಡಿಮೆ ಬೆಲೆಗೆ ಆಕರ್ಷಕ ಫ್ಲ್ಯಾಟ್ ಕೊಡಿಸುವುದಾಗಿ ನಂಬಿಸಿ ಗ್ರಾಹಕರಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ ಆರೋಪ ಸಂಬಂಧ, ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಎಂಟು ಕಡೆ ದಾಳಿ ನಡೆಸಿ 11.25 ಕೋಟಿ ನಗದು ಜಪ್ತಿ ಮಾಡಿಕೊಂಡಿದ್ದಾರೆ.
ಹಲವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪದಡಿ ದಾಖಲಾಗಿದ್ದ ಪ್ರಕರಣ ಸಂಬಂಧ ಫೆ.29 ಹಾಗೂ ಮಾ.1 ರಂದು ಎಂಟು ಕಡೆಗಳಲ್ಲಿ ದಾಳಿ ನಡೆಸಿ ಒಟ್ಟು 11.25 ಕೋಟಿ ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿಗಳಿಗೆ ಸಂಬಂಧಿಸಿದ ಸಂಚಯ ಲ್ಯಾಂಡ್ ಅಂಡ್ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್, ಬಿಸಿಸಿ ಕನ್ಸ್ಟ್ರಕ್ಷನ್, ಆಕಾಶ್ ಎಜುಕೇಷನ್ ಅಂಡ್ ಡೆವಲಪ್ಮೆಂಟ್ ಹಾಗೂ ಎಸ್ವಿ ಕ್ರಾನ್ ಕ್ರಿಯೇಟ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ದಾಳಿ ನಡೆಸಿ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನ ಸೀಜ್ ಮಾಡಲಾಗಿದೆ. ದಾಳಿ ವೇಳೆ ಕಂಪನಿಗಳಿಗೆ ಸಂಬಂಧಿಸಿದ ಚರಾಸ್ತಿ ಹಾಗೂ ಸ್ಥಿರಾಸ್ತಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಇದರ ಮೌಲ್ಯ ಸುಮಾರು 120 ಕೋಟಿ ಮೌಲ್ಯದಾಗಿದೆ. ಅಲ್ಲದೇ ಡಿಜಿಟಲ್ ಸಾಕ್ಷ್ಯಾಧಾರಗಳನ್ನ ವಶಕ್ಕೆ ಪಡೆಯಲಾಗಿದೆ. ಮೇಲಿರುವ ಕಂಪನಿಗಳ ವಿರುದ್ಧ ಕಡಿಮೆ ಬೆಲೆಗೆ ಆಕರ್ಷಕ ಫ್ಲ್ಯಾಟ್ ಕೊಡಿಸುವುದಾಗಿ ನಂಬಿಸಿ ಗ್ರಾಹಕರಿಂದ ಕೋಟ್ಯಂತರ ರೂಪಾಯಿ ಪಡೆದು ಫ್ಲ್ಯಾಟ್ ನೀಡದೇ ವಂಚಿಸುತ್ತಿದ್ದರು ಎಂದು ಇಡಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಐಟಿ ದಾಳಿ: ತಂಬಾಕು ಉದ್ಯಮಿ ಮನೆಯಲ್ಲಿ ₹60 ಕೋಟಿ ಮೌಲ್ಯದ ಕಾರು, ನಗದು ಪತ್ತೆ