ಮೈಸೂರು: ನಿವೇಶನ ಹಂಚಿಕೆ ಅಕ್ರಮ ಪ್ರಕರಣ ಸಂಬಂಧ ದೂರು ದಾಖಲಾದ ಹಿನ್ನೆಲೆಯಲ್ಲಿ ಎರಡನೇ ದಿನವೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಮುಡಾಗೆ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಶುಕ್ರವಾರ ಬೆಳಗ್ಗೆ 11 ಗಂಟೆಗೆ ಇಡಿ ಅಧಿಕಾರಿಗಳು, ಸಿಆರ್ಪಿಎಫ್ ಯೋಧರ ಭದ್ರತೆಯೊಂದಿಗೆ ಸುಮಾರು 9 ಜನ ಇ.ಡಿ ಅಧಿಕಾರಿಗಳು ಮುಡಾಗೆ ಆಗಮಿಸಿದ್ದರು. ರಾತ್ರಿ 11.30ರ ವರೆಗೂ ಮುಡಾದಲ್ಲಿ ದಾಖಲಾತಿಗಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಕೆಲವು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದರು. ಬಳಿಕ ಶನಿವಾರವೂ ಸಹ ಇ.ಡಿ ಅಧಿಕಾರಿಗಳು ಬೆಳಗ್ಗೆ 10 ಗಂಟೆ ಸುಮಾರಿಗೆ ಮುಡಾಗೆ ಬಂದು ದಾಖಲೆಗಳ ಪರಿಶೀಲನೆ ಮುಂದುವರೆಸಿದ್ದಾರೆ. ಮುಡಾ ಆಯುಕ್ತ ರಘುನಂದನ್ ಬೆಳಗ್ಗೆಯೇ ಆಗಮಿಸಿದ್ದು, ಆ ನಂತರ ಇ.ಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ EDಯಿಂದ ದಾಖಲೆಗಳ ಪರಿಶೀಲನೆ (ETV Bharat) ಮುಡಾದ ಪ್ರಕರಣಗಳ ಬಗ್ಗೆ ತನಿಖೆ ನಡೆಸುವಂತೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ್ದರು. ಆ ಬಳಿಕ ಕೆಲವು ಮಾಹಿತಿಗಳನ್ನು ನೀಡುವಂತೆ ಇ.ಡಿ ಮುಡಾಕ್ಕೆ ಪತ್ರ ಬರೆದಿತ್ತು. ಆದರೆ, ಪತ್ರಕ್ಕೆ ಉತ್ತರ ನೀಡದ ಹಿನ್ನೆಲೆಯಲ್ಲಿ ಕಚೇರಿಗೆ ಆಗಮಿಸಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.
ಮೈಸೂರು ತಾಲೂಕು ಕಚೇರಿಯಲ್ಲೂ ಪರಿಶೀಲನೆ:ಇದೇ ವೇಳೆ, ಮೂವರು ಇ.ಡಿ ಅಧಿಕಾರಿಗಳು ಮುಡಾದ ಮೈಸೂರು ತಾಲೂಕು ಕಚೇರಿಯಲ್ಲೂ ಶುಕ್ರವಾರ ದಾಖಲೆ ಪರಿಶೀಲಿಸಿದ್ದಾರೆ. ಕೆಸರೆ ಗ್ರಾಮದ ಆ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆ ಹೇಗೆ ನಡೆಸಲಾಯಿತು. ಅರ್ಜಿ ಸಲ್ಲಿಸಿದವರು ಯಾರು? ಎಂಬ ಎಲ್ಲಾ ವಿವರಗಳನ್ನು ಅಧಿಕಾರಿಗಳು ಮುಡಾ ತಾಲೂಕು ಕಚೇರಿಯಲ್ಲಿ ಪಡೆದಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೆ, ಶನಿವಾರವೂ ಕೂಡ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದಾರೆ.
ದೇವರಾಜು ಹೇಳಿಕೆ ದಾಖಲು:ಈ ಮಧ್ಯೆ ಶುಕ್ರವಾರ ಬೆಂಗಳೂರಿನ ಕೆಂಗೇರಿಯಲ್ಲಿರುವ ಪ್ರಕರಣದಲ್ಲಿ ಜಮೀನು ಮಾರಿರುವ ದೇವರಾಜು ಮನೆಗೆ ಇಡಿ ಅಧಿಕಾರಿಗಳು ಆಗಮಿಸಿ, ಕೆಲವು ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೆ, ದೇವರಾಜು ಅವರಿಂದ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಬಿಗಿ ಭದ್ರತೆ:ಶುಕ್ರವಾರದಿಂದ ಇಡಿ ಅಧಿಕಾರಿಗಳು ಮುಡಾಗೆ ಆಗಮಿಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಸಿಆರ್ಪಿಎಫ್ ಯೋಧರು ಭದ್ರತೆ ನೀಡಿದ್ದಾರೆ. ಮುಡಾ ಕಚೇರಿಯ ಮುಖ್ಯದ್ವಾರವನ್ನು ಬಂದ್ ಮಾಡಿ ಬೀಗ ಹಾಕಲಾಗಿದೆ. ಮುಡಾ ಕಚೇರಿಗೆ ತಮ್ಮ ಕೆಲಸಕ್ಕೆ ಬಂದ ಸಾರ್ವಜನಿಕರನ್ನು ವಾಪಸ್ ಕಳುಹಿಸಲಾಗುತ್ತಿದೆ. ಇಂದೂ ಸಹ ಸಾರ್ವಜನಿಕರಿಗೆ ಮುಡಾ ಕಚೇರಿಗೆ ನಿರ್ಬಂಧ ಹೇರಲಾಗಿದೆ.
ಇದನ್ನೂ ಓದಿ:ಮುಡಾ ಪ್ರಕರಣ: ತಾರ್ಕಿಕ ಅಂತ್ಯದವರೆಗೆ ನನ್ನ ಹೋರಾಟ- ಸ್ನೇಹಮಯಿ ಕೃಷ್ಣ