ಬೆಂಗಳೂರು:ದೇಶವಿಲ್ಲದೇ ಸಂವಿಧಾನ ಇರಲು ಸಾಧ್ಯವಿಲ್ಲ. ರಾಷ್ಟ್ರ ಮತ್ತು ಸಮಾಜ ವಿರೋಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಜನರಿಂದ ದೇಶವನ್ನು ರಕ್ಷಿಸುವುದು ಸಾಂವಿಧಾನಿಕವಾಗಿ ರಚನೆಯಾಗಿರುವ ನ್ಯಾಯಾಲಯಗಳ ಕರ್ತವ್ಯ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ನಿಷೇಧಿತ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದೆ.
ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿಯಲ್ಲಿ ಆರೋಪ ಎದುರಿಸುತ್ತಿರುವ ಮಜೀನ್ ಅಬ್ದುಲ್ ರೆಹಮಾನ್ ಎಂಬವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್ ಮತ್ತು ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ. ರಾಷ್ಟ್ರದ ಸೌರ್ವಭೌಮತೆ, ಏಕತೆಗೆ ಅಪಾಯ ಉಂಟುಮಾಡುವವರ ರಕ್ಷಣೆಗೆ ಸಂವಿಧಾನದ ಕಲಂ 21 (ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಜೀವನದ ಹಕ್ಕು) ಬಳಕೆ ಮಾಡಲಾಗದು ಎಂದು ತಿಳಿಸಿ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಕಾನೂನಿನ ಕುರಿತಂತೆ ಕಾಳಜಿ ನೀಡದವರಿಗೆ ಮತ್ತು ದೇಶದ ಸಾರ್ವಭೌಮತ್ವ ಹಾಗೂ ಸಮಗ್ರತೆಗೆ ಅಪಾಯವೊಡ್ಡುವವರ ರಕ್ಷಣೆ ಮಾಡುವುದಕ್ಕಾಗಿ ಸಂವಿಧಾನದ ಪರಿಚ್ಛೇದ 21 ಅನ್ನು ಬಳಕೆ ಮಾಡುವುದಕ್ಕೆ ಸಾಧ್ಯವಿಲ್ಲ. ಸಂವಿಧಾನದ ಪರಿಚ್ಛೇದ 51 (ಎ)(ಎ) ಪ್ರಕಾರ ಭಾರತ ದೇಶದ ಪ್ರತಿಯೊಬ್ಬರೂ ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಳ್ಳಬೇಕು ಮತ್ತು ಅದರ ತತ್ವಗಳು ಮತ್ತು ಸಂಸ್ಥೆಗಳನ್ನು, ರಾಷ್ಟ್ರೀಯ ಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸಬೇಕು. ಅದೇ ಕಲಂನ ಸಿ ವಿಭಾಗದಲ್ಲಿ ದೇಶದ ಸಾರ್ವಭೌಮತೆ, ಏಕತೆ ಮತ್ತು ಘನತೆಯನ್ನು ಎತ್ತಿಹಿಡಿದು ರಕ್ಷಿಸಬೇಕು. ಇವು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಕರ್ತವ್ಯಗಳಾಗಿವೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಈ ಪ್ರಕರಣದಲ್ಲಿ ಅರ್ಜಿದಾರ ಭಾರತ ಪ್ರಜೆಯಾಗಿದ್ದರೂ ತಮ್ಮ ಕರ್ತವ್ಯಗಳನ್ನು ಪಾಲಿಸುವುದನ್ನು ಬಿಟ್ಟು, ನಿಷೇಧಿತ ಸಂಘಟನೆಯೊಂದರ ಸದಸ್ಯರಾಗಿ ಭಾರತದ ವಿರುದ್ಧ ಸಮರ ಹೂಡಿದ್ದಾರೆ. ಸಂವಿಧಾನಕ್ಕೆ ಅಗೌರವ ತೋರಿದ್ದಾರೆ. ಆದರೂ ಸಂವಿಧಾನದಡಿ ರಕ್ಷಣೆ ಕೋರುತ್ತಿರುವುದು ಅಚ್ಚರಿ ಮೂಡಿಸಿದೆ ಎಂದು ಪೀಠ ಹೇಳಿದೆ.