ಕರ್ನಾಟಕ

karnataka

ETV Bharat / state

ಬೆಳಗಾವಿ 'ದುರ್ಗಾ ಮಾತಾ ದೌಡ್'​ಗೆ 26 ವರ್ಷ: ಮಳೆ ನಡುವೆಯೂ ಭಕ್ತಿಯ ಓಟದಲ್ಲಿ ಮಿಂದೆದ್ದ ಭಕ್ತರು

ಬೆಳಗಾವಿಯಲ್ಲಿ ದುರ್ಗಾ ಮಾತಾ ದೌಡ್​ ಸಂಭ್ರಮ ಎಲ್ಲರ ಗಮನ ಸೆಳೆಯಿತು. ವರ್ಷದಿಂದ ವರ್ಷಕ್ಕೆ ದೌಡ್​ನಲ್ಲಿ ಭಾಗಿಯಾಗುವ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದು ವಿಶೇಷವಾಗಿದೆ.

Durga-mata-daud
ದುರ್ಗಾ ಮಾತಾ ದೌಡ್​ (ETV Bharat)

By ETV Bharat Karnataka Team

Published : Oct 10, 2024, 6:19 PM IST

ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ಎಲ್ಲ ಹಬ್ಬಗಳನ್ನೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ‌. ನಾಡಹಬ್ಬ ದಸರಾ ಕೂಡಾ ಅದ್ಧೂರಿಯಾಗಿ ನಡೆಯುತ್ತದೆ. 9 ದಿನ ನಗರದ ವಿವಿಧೆಡೆ ನಡೆಯುವ 'ದುರ್ಗಾ ಮಾತಾ ದೌಡ್' ಎಲ್ಲರ ಗಮನ ಸೆಳೆಯುತ್ತದೆ. ಈ ಭಕ್ತಿಯ ಓಟಕ್ಕೀಗ 26 ವರ್ಷಗಳ ಸಂಭ್ರಮ. ವರ್ಷದಿಂದ ವರ್ಷಕ್ಕೆ ದೌಡ್​ನಲ್ಲಿ ಭಾಗಿಯಾಗುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವುದು ವಿಶೇಷ.

ಕುಂದಾನಗರಿ ಬೆಳಗಾವಿ ಹಲವು ಭಾಷೆ, ಧರ್ಮ, ಜಾತಿ, ಜನಾಂಗಗಳ ಬೀಡು. ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಹಿನ್ನೆಲೆಯಲ್ಲಿ ಅಲ್ಲಿನ ಆಚರಣೆ, ಸಂಸ್ಕೃತಿಗಳ ಪ್ರಭಾವ ಬೆಳಗಾವಿ ಮೇಲೂ ಆಗುತ್ತದೆ. ಈ ಪೈಕಿ ಅದ್ಧೂರಿ ಸಾರ್ವಜನಿಕ ಗಣೇಶೋತ್ಸವ ಒಂದಾದರೆ, ಮತ್ತೊಂದು ದುರ್ಗಾ ಮಾತಾ ದೌಡ್. ಮಹಾರಾಷ್ಟ್ರದಲ್ಲಿ ಶುರುವಾದ ಈ ಓಟ ಬೆಳಗಾವಿಯಲ್ಲೂ ನಡೆಯುತ್ತಿರುವುದು ಇದಕ್ಕೆ ಸಾಕ್ಷಿ.

ದುರ್ಗಾ ಮಾತಾ ದೌಡ್: ಭಕ್ತರ ಹೇಳಿಕೆಗಳು (ETV Bharat)

ನವರಾತ್ರಿ ಹಬ್ಬ ಸಮೀಪಿಸುತ್ತಿದ್ದಂತೆ ಇಲ್ಲಿನ ಶಿವಪ್ರತಿಷ್ಠಾನದ ಪದಾಧಿಕಾರಿಗಳು ದುರ್ಗಾ ಮಾತಾ ದೌಡ್ ಮಾರ್ಗವನ್ನು ಗುರುತಿಸುತ್ತಾರೆ. ದಸರಾ ಹಬ್ಬದ ಒಂಬತ್ತು ದಿನಗಳ ಕಾಲ ಬೆಳಗ್ಗೆ 5 ಗಂಟೆಗೆ ಬಿಳಿ ಬಟ್ಟೆ ತೊಟ್ಟು, ತಲೆ ಮೇಲೆ ಕೇಸರಿ ಪೇಟ, ಹೊಟ್ಟೆಗೆ ಕೇಸರಿ ಶಾಲು ಕಟ್ಟಿಕೊಂಡು, ಕೈಯಲ್ಲಿ ಖಡ್ಗ ಮತ್ತು ಭಗವಾ ಧ್ವಜ ಹಿಡಿದು ಒಂದೊಂದು ದಿನ ಇಂತಿಷ್ಟು ಪ್ರದೇಶವೆಂದು ನಿಗದಿಪಡಿಸಿರುವ ಆಯಾ ಮಾರ್ಗಗಳಲ್ಲಿ ಎಲ್ಲರೂ ಭಕ್ತಿಯಿಂದ ಓಡುತ್ತಾರೆ. ಈ ವೇಳೆ ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ್ ಜೈ ಭವಾನಿ-ಜೈ ಶಿವಾಜಿ, ಜೈ ಚನ್ನಮ್ಮ-ಜೈ ರಾಯಣ್ಣ ಎಂದು ಘೋಷಣೆ ಕೂಗುತ್ತಾ ಉತ್ಸಾಹದಿಂದ ಜನರು ಓಡುವುದನ್ನು ನೋಡುವುದೇ ಸಂಭ್ರಮ.

ದೌಡ್ ಸಾಗುವ ರಸ್ತೆಗಳನ್ನು ನೀರಿನಿಂದ ಸ್ವಚ್ಛಗೊಳಿಸಿ ಅಲಂಕರಿಸಲಾಗುತ್ತದೆ. ಬಣ್ಣಬಣ್ಣದ ರಂಗೋಲಿ ಬಿಡಿಸಿ, ಹೂಗಳಿಂದ ಅಲಂಕರಿಸಲಾಗುತ್ತದೆ. ದೌಡ್​ನಲ್ಲಿ ಓಡಿ ಬರುವ ಸಾವಿರಾರು ಭಕ್ತರಿಗೆ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸುತ್ತಾರೆ. ದಾರಿಯುದ್ಧಕ್ಕೂ ಪುಷ್ಪವೃಷ್ಟಿಗೈದು ಹುರಿದುಂಬಿಸುತ್ತಾರೆ. ಪುಟ್ಟಪುಟ್ಟ ಮಕ್ಕಳು ಜೀಜಾಮಾತಾ, ಛತ್ರಪತಿ ಶಿವಾಜಿ ವೇಷ ಧರಿಸಿ ಸಂಭ್ರಮಿಸುತ್ತಾರೆ.

ದುರ್ಗಾ ಮಾತಾ ದೌಡ್​ ಸಂಭ್ರಮ (ETV Bharat)

ಪ್ರತಿದಿನ ಕೆಲವು ಪ್ರದೇಶಗಳಂತೆ ಒಂಬತ್ತು ದಿನ ಇಡೀ ಬೆಳಗಾವಿ ನಗರದ ಪ್ರತಿಯೊಂದು ಪ್ರದೇಶಗಳಲ್ಲೂ ದುರ್ಗಾ ಮಾತಾ ದೌಡ್ ಹಾದು ಹೋಗುತ್ತದೆ. ಬರೀ ನಗರದಲ್ಲಿ ಮಾತ್ರವಲ್ಲದೆ, ಗ್ರಾಮೀಣ ಭಾಗಗಳು ಹಾಗೂ ತಾಲೂಕು ಕೇಂದ್ರಗಳಲ್ಲೂ ಕೂಡ ಇದೇ ಮಾದರಿಯಲ್ಲಿ ಜನರು ದೌಡ್​ ಆಯೋಜಿಸುತ್ತಿದ್ದಾರೆ.

ಮಹಾರಾಷ್ಟ್ರದ ಸಾಂಗಲಿಯಲ್ಲಿ ಶಿವಪ್ರತಿಷ್ಠಾನ ಹಿಂದೂಸ್ತಾನದ ಸಂಸ್ಥಾಪಕ ಸಂಭಾಜೀರಾವ್ ಭೀಡೆ ಅವರು ಧರ್ಮ ಜಾಗೃತಿ ಮೂಡಿಸುವ ಉದ್ದೇಶದಿಂದ 1985ರಂದು ದುರ್ಗಾ ಮಾತಾ ದೌಡ್ ಆರಂಭಿಸಿದ್ದರು. ಇದಾದ 13 ವರ್ಷಗಳ ಬಳಿಕ ಬೆಳಗಾವಿಯಲ್ಲೂ ದೌಡ್ ಶುರುವಾಯಿತು. ಅಂದಿನಿಂದ ಇಂದಿನವರೆಗೂ ನಿರಂತರವಾಗಿ 26 ವರ್ಷಗಳಿಂದ ಆಯೋಜಿಸುತ್ತಾ ಬರಲಾಗುತ್ತಿದೆ.

ಮಳೆಯಲ್ಲೂ ಭಕ್ತಿಯ ಓಟ:ಇಂದು ಬೆಳಗ್ಗೆ ಭಾರಿ ಮಳೆ ಸುರಿಯುತ್ತಿತ್ತು. ಮಳೆಗೆ ಒಂದಿಷ್ಟೂ ಅಳುಕದೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೌಡ್​ನಲ್ಲಿ ಭಾಗಿಯಾಗಿ ಭಕ್ತಿ ಮೆರೆದರು. ನಗರದ ಧರ್ಮವೀರ ಸಂಭಾಜಿ ವೃತ್ತದಿಂದ ಆರಂಭವಾದ ದೌಡ್​ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ, ಸಂಯುಕ್ತ ಮಹಾರಾಷ್ಟ್ರ ಚೌಕ್​ನಲ್ಲಿ ಮುಕ್ತಾಯವಾಯಿತು.

ಈ ವೇಳೆ 'ಈಟಿವಿ ಭಾರತ'ದ ಜೊತೆಗೆ ಮಾತನಾಡಿದ ಶಿವಪ್ರತಿಷ್ಠಾನದ ಪದಾಧಿಕಾರಿ ಲಕ್ಷ್ಮಣ ಪಾಟೀಲ, "ಮೊದಲ ವರ್ಷ ದುರ್ಗಾ ಮಾತಾ ದೌಡ್ ಆರಂಭಿಸಿದಾಗ 23 ಜನರು ಮಾತ್ರ ಇದ್ದೆವು. ಈಗ 30 ಸಾವಿರ ಜನ ಸೇರುತ್ತಾರೆ. ದೇವರು, ದೇಶ, ಧರ್ಮ ಉಳಿಸುವ ಉದ್ದೇಶದಿಂದ ದೌಡ್ ನಡೆಸಲಾಗುತ್ತದೆ. ಜಾತಿ, ಮತ, ಪಂಗಡ, ಭಾಷೆಗಳ ಬೇಧ-ಭಾವ ಇಲ್ಲದೇ ಎಲ್ಲರೂ ಭಾಗವಹಿಸುತ್ತಾರೆ. ಭೀಡೆ ಗುರೂಜಿಗಳ ಪ್ರೇರಣೆಯಿಂದ ಹಿಂದೂ ಧರ್ಮದ ಮಾರ್ಗದಲ್ಲಿ ನಾವೆಲ್ಲ ನಡೆಯುತ್ತಿದ್ದೇವೆ" ಎಂದು ಹೇಳಿದರು.

ದುರ್ಗಾ ಮಾತಾ ದೌಡ್​ನಲ್ಲಿದ್ದ ಭಕ್ತರು (ETV Bharat)

ದೌಡ್​ನಲ್ಲಿ ಭಾಗಿಯಾಗಿದ್ದ ಭಕ್ತರಾದ ಪೂಜಾ ರೋಹಿತ್ ಕೇಕರೆ ಮಾತನಾಡಿ, "ಧರ್ಮ ಮತ್ತು ದೇವರ ಮೇಲಿನ ಭಕ್ತಿ ನಮ್ಮನ್ನು ಇಲ್ಲಿಗೆ ಕರೆತಂದಿದೆ. ನಾವೆಲ್ಲ ನಮ್ಮ ಮಕ್ಕಳೊಂದಿಗೆ ಭಕ್ತಿಯಿಂದ ಬಂದಿದ್ದೇವೆ. ಮಕ್ಕಳಿಗೆ ದುರ್ಗಾಮಾತಾ, ಜೀಜಾಮಾತಾ, ಶಿವಾಜಿ ಮಹಾರಾಜರ ವೇಷಭೂಷಣ ತೊಡಿಸಿ ಸಂಭ್ರಮಿಸಿದ್ದೇವೆ' ಎಂದರು.

ದುರ್ಗಾ ಮಾತಾ ದೌಡ್​ನಲ್ಲಿ ಭಾಗವಹಿಸಿದ ಮಕ್ಕಳು (ETV Bharat)

"ಶಿವಾಜಿ ಮಹಾರಾಜರ ಮೇಲಿನ ಭಕ್ತಿಯಿಂದ ಬೆಳಗ್ಗೆ ಬೇಗ ಎದ್ದು, ಮಕ್ಕಳನ್ನು ರೆಡಿ ಮಾಡಿಸಿ ದೌಡ್‌ನಲ್ಲಿ ಭಾಗಿಯಾಗೋದೆಂದರೆ ಏನೋ ಒಂಥರಾ ಖುಷಿ. ಮಳೆಯಲ್ಲೂ ಓಡುವುದು ನೋಡಿದರೆ ಪಾವನ್ ಕಿಂಡ್(ಶಿವಾಜಿ ಮಹಾರಾಜರ ಸೇನಾ ಮುಖ್ಯಸ್ಥ ಬಾಜಿಪ್ರಭು ದೇಶಪಾಂಡೆ ಶೌರ್ಯ) ನೆನಪಿಗೆ ಬಂತು" ಎಂದು ಇನ್ನೋರ್ವ ಭಕ್ತರಾದ ಪ್ರಣಾಲಿ ನಾಕಾಡೆ ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ:ಬೆಳಗಾವಿಯಲ್ಲಿ 'ದುರ್ಗಾ ಮಾತಾ ದೌಡ್'​ಗೆ ಅದ್ಧೂರಿ ಸ್ವಾಗತ

ABOUT THE AUTHOR

...view details