ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜ್ ಮಾಹಿತಿ ನೀಡಿದರು. ಬೆಂಗಳೂರು:ತಲಘಟ್ಟಪುರ ಸಂಚಾರ ಠಾಣಾ ಪೊಲೀಸ್ ವ್ಯಾಪ್ತಿಯಲ್ಲಿ ಇತ್ತೀಚಿಗೆ ನಡೆದಿದ್ದ ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಘಟನೆಯಲ್ಲಿ ವ್ಯಕ್ತಿಯ ಕೊಲೆಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಕೋಣನಕುಂಟೆ ಹರಿನಗರ ನಿವಾಸಿ ಗೋಪಿ ಕೊಲೆಯಾದವರು. ಇವರ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಕನಕಪುರ ರಸ್ತೆಯ ರಘುವನಹಳ್ಳಿ ನಿವಾಸಿ ಮುನಿಕೃಷ್ಣ ಎಂಬಾತನನ್ನು ಅರೆಸ್ಟ್ ಮಾಡಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಮೃತನ ಸ್ನೇಹಿತ ಉಮಾಪತಿ ಭಯಗೊಂಡು ತನ್ನೂರು ಮಾಲೂರಿನಲ್ಲಿ ಆತ್ಮಹತ್ಯೆ ಯತ್ನಿಸಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸ್ಚಾರ್ಜ್ ಆದ ಬಳಿಕ ಅವರ ಹೇಳಿಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 23ರಂದು ಕನಕಪುರ ರಸ್ತೆಯ ವಾಜರಹಳ್ಳಿ ಬಳಿ ಅಪಘಾತವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಗೋಪಿ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ಬಂದ ಸಂಚಾರ ಪೊಲೀಸರು ತೆರಳಿ ಪರಿಶೀಲಿಸಿ ಹಿಟ್ ಆ್ಯಂಡ್ ರನ್ ಕೇಸ್ ದಾಖಲಿಸಿಕೊಂಡಿದ್ದರು. ಸುತ್ತಮುತ್ತಲಿನ ರಸ್ತೆ ಬದಿಯಲ್ಲಿ ಅಳವಡಿಸಲಾಗಿದ್ದ 15ರಿಂದ 20 ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಪೊಲೀಸರಿಗೆ ಮಹತ್ವ ಮಾಹಿತಿ ತಿಳಿದು ಬಂದಿತ್ತು. ಆರೋಪಿ ಮುನಿಕೃಷ್ಣ, ಗೋಪಿಗೆ ಬಲವಾಗಿ ಹೊಡೆದು ಕಾರು ಹತ್ತಿಸಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ಕಾರು ನೋಂದಣಿ ಸಂಖ್ಯೆ ಆಧಾರದ ಮೇರೆಗೆ ಪತ್ತೆ ಮಾಡಿ ಆರೋಪಿ ಮುನಿಕೃಷ್ಣ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಂದು ನಡೆದಿದ್ದೇನು?:ಉಮಾಪತಿ ಹಾಗೂ ಗೋಪಿ ಸ್ನೇಹಿತರು. ಮಾರ್ಚ್ 23ರ ರಾತ್ರಿ ಮದ್ಯ ಸೇವನೆಗಾಗಿ ಬಾರ್ಗೆ ಹೋಗಿದ್ದರು. ಈ ವೇಳೆ ಮುನಿಕೃಷ್ಣನ ಪರಿಚಯವಾಗಿದೆ. ಮೂವರು ಒಟ್ಟಾಗಿ ಮದ್ಯ ಸೇವಿಸಿದ್ದಾರೆ. ಬಾರ್ ಮುಚ್ಚುವ ಹಿನ್ನೆಲೆಯಲ್ಲಿ ಕಾರ್ನಲ್ಲಿ ಕುಳಿತು ಮದ್ಯ ಸೇವಿಸಿದ್ದಾರೆ. ಈ ಸಂದರ್ಭದಲ್ಲಿ ನಶೆ ಏರಿಸಿಕೊಂಡಿದ್ದ ಗೋಪಿ ಹಾಗೂ ಮುನಿಕೃಷ್ಣನ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಅಮಲಿನಲ್ಲಿ ಮುನಿಕೃಷ್ಣನಿಗೆ ಅವಾಚ್ಯ ಶಬ್ಧಗಳಿಂದ ಗೋಪಿ ನಿಂದಿಸಿದ್ದಾನೆ.
ಹೀಗಾಗಿ ಮುನಿಕೃಷ್ಣ, ಉಮಾಪತಿ ಹಾಗೂ ಗೋಪಿಯನ್ನು ಅರ್ಧ ದಾರಿಯಲ್ಲಿ ಇಳಿಸಿದ್ದ. ಇದರಿಂದ ಮತ್ತೆ ಸಿಟ್ಟಿಗೆದ್ದ ಗೋಪಿ ಮುನಿಕೃಷ್ಣನ ಮೇಲೆ ಚಪ್ಪಲಿ ಎಸೆದಿದ್ದಾನೆ. ಇದರಿಂದ ಕೋಪಗೊಂಡ ಮುನಿಕೃಷ್ಣ ತನ್ನ ಕಾರ್ ಅನ್ನು ಯೂ ಟರ್ನ್ ಮಾಡಿಕೊಂಡು ಗೋಪಿ ಮೈಮೇಲೆ ಹತ್ತಿಸಿ ಪರಾರಿಯಾಗಿದ್ದ. ಇತ್ತ ತನ್ನ ಸ್ನೇಹಿತನ ಕೊಲೆಯನ್ನು ಕಣ್ಣಾರೆ ನೋಡಿದ್ದ ಉಮಾಪತಿ ಮಾಲೂರಿಗೆ ಹೋಗಿ ಅಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತ ಯಾವ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದ ಎಂಬುದು ಕುಟುಂಬಸ್ಥರಿಗೆ ಗೊತ್ತಿರಲಿಲ್ಲ. ಪೊಲೀಸರು ಮನೆಗೆ ಬಂದಾಗ ಅಸಲಿ ಸಂಗತಿ ಹೊರಬಿದ್ದಿತ್ತು. ಸದ್ಯ ಮಾಲೂರಿನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದರು.
ಇದನ್ನೂ ಓದಿ:ಪತಿಯ ಕ್ರಿಕೆಟ್ ಬೆಟ್ಟಿಂಗ್ನಿಂದ ಸಾಲಗಾರರ ಕಿರುಕುಳ ಆರೋಪ: ಮನನೊಂದು ಪತ್ನಿ ಆತ್ಮಹತ್ಯೆ - Cricket Betting