ಕರ್ನಾಟಕ

karnataka

ETV Bharat / state

ಅಂಜನಾದ್ರಿಯಲ್ಲಿ ಮಂಗಗಳ ಆಹಾರಕ್ಕಾಗಿ ವಾನರವನ ನಿರ್ಮಾಣಕ್ಕೆ ಚಾಲನೆ - Plantation in Kishkinda Forest

ಗಂಗಾವತಿಯ ಸಮಾನ ಮನಸ್ಕ ಯುವಕರು ಸೇರಿ, ಅಂಜನಾದ್ರಿ ಮಂಗಗಳ ಆಹಾರಕ್ಕೆ ಸಹಾಯವಾಗಲಿ ಎಂದು ಕಿಷ್ಕಿಂಧ ವನದಲ್ಲಿ ವಿವಿಧ ಬಗೆಯ ಹಣ್ಣಿನ ಸಸಿಗಳನ್ನು ನೆಡುವ ಅಭಿಯಾನವನ್ನು ಕೈಗೊಂಡಿದ್ದಾರೆ.

Drive for construction of Vanaravana to feed monkeys of Anjanadri
ಅಂಜನಾದ್ರಿಯ ಮಂಗಗಳ ಆಹಾರಕ್ಕಾಗಿ ವಾನರವನ ನಿರ್ಮಾಣಕ್ಕೆ ಚಾಲನೆ (ETV Bharat)

By ETV Bharat Karnataka Team

Published : Jun 18, 2024, 9:49 AM IST

Updated : Jun 18, 2024, 1:28 PM IST

ಗಂಗಾವತಿ: ಹನುಮ ಜನಿಸಿದ ನಾಡೆಂದು ಖ್ಯಾತಿ ಪಡೆದ ಮತ್ತು ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಅಂಜನಾದ್ರಿ ಸುತ್ತಲಿನ ಪರಿಸರದಲ್ಲಿರುವ ಮಂಗಗಳ ಆಹಾರದ ಕೊರತೆ ನೀಗಿಸಲು ಇದೀಗ ಗಂಗಾವತಿಯ ಸಮಾನ ಮನಸ್ಕ ಯುವಕರ ಪಡೆ ಮುಂದಾಗಿದೆ.

ಅಂಜನಾದ್ರಿಯ ಮಂಗಗಳ ಆಹಾರಕ್ಕಾಗಿ ವಾನರವನ ನಿರ್ಮಾಣಕ್ಕೆ ಚಾಲನೆ (ETV Bharat)

ಅಂಜನಾದ್ರಿ - ಆನೆಗೊಂದಿ ಸುತ್ತಲಿನ ನೂರಾರು ಹೆಕ್ಟೇರ್​ ಪ್ರದೇಶದಲ್ಲಿರುವ ಬೆಟ್ಟಗುಡ್ಡಗಳ ನೈಸರ್ಗಿಕ ತಾಣ, ಸಾವಿರಾರು ಕೋತಿಗಳ ಆವಾಸ ಸ್ಥಾನಕ್ಕೆ ಹೇಳಿ ಮಾಡಿಸಿದಂತಿದೆ. ಬೇಸಿಗೆ ಸೇರಿದಂತೆ ನಾನಾ ಸಂದರ್ಭದಲ್ಲಿ ಈ ವಾನರ ಸೇನೆಗೆ ಆಹಾರದ ಸಮಸ್ಯೆ ಎದುರಾಗುತ್ತಿದೆ. ಇದನ್ನು ಮನಗಂಡ ಗಂಗಾವತಿಯ ಸಮಾನ ಮನಸ್ಕ ಯುವಕರು, ಲಿವ್ ವಿಥ್ ಹ್ಯುಮಾನಿಟಿ, ಕಿಷ್ಕಿಂಧ ಯುವ ಚಾರಣ ಬಳಗ, ಚಾರಣ ಬಳಗ, ಕಿಷ್ಕಿಂಧ ಯುವ ಸೇನೆ ಹಾಗೂ ಕೊಪ್ಪಳದ ಸರ್ವೋದಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಹಣ್ಣಿನ ಮರಗಿಡಗಳ ಪೋಷಣೆಗೆ ಮುಂದಾಗಿದೆ.

ಇದಕ್ಕಾಗಿ 'ಕಿಷ್ಕಿಂಧ ವನ ಅಭಿಯಾನ' ದಡಿ ವಾನರ ವನ ನಿರ್ಮಾಣಕ್ಕೆ ಹನುಮನಹಳ್ಳಿಯಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ. ವಿವಿಧ ಬಗೆಯ ಹಣ್ಣು-ಕಾಯಿಗಳನ್ನು ನೀಡುವ ಎಂಟು ನೂರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಪೋಷಣೆ ಮಾಡುವ ಅಭಿಯಾನ ಆರಂಭವಾಗಿದೆ. ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಅಂಜನಾದ್ರಿ ಸಮೀಪ ಇರುವ ಹನುಮನಹಳ್ಳಿಯ ಋಷಿಮುಖ ಪರ್ವತದಲ್ಲಿ ವಾನರ ವನ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಈ ಅಭಿಯಾನದಲ್ಲಿ ಸುಮಾರು 50ಕ್ಕೂ ಹೆಚ್ಚು ಯುವಕರು ಭಾಗಿಯಾಗಿ ಒಂದೇ ದಿನದಲ್ಲಿ 226 ಗುಂಡಿಗಳನ್ನು ತೆಗೆದು ಸಸಿನೆಟ್ಟರು.

ಈ ಬಗ್ಗೆ ಮಾತನಾಡಿದ ಅಭಿಯಾನದ ಸಂಚಾಲಕ ಅರ್ಜುನ್ ಜಿ.ಆರ್., "ಪ್ರತಿ ಶನಿವಾರ ಮತ್ತು ಭಾನುವಾರ ಎರಡು ದಿನಗಳಂತೆ ಒಟ್ಟು ಎರಡು ತಿಂಗಳು ಕಾಲ ಅಭಿಯಾನ ನಡೆಯಲಿದೆ. ಆಸಕ್ತರು ನಮ್ಮ ಅಭಿಯಾನದಲ್ಲಿ ಭಾಗಿಯಾಗಬಹುದು. ಕಿಷ್ಕಿಂಧ ಗುಡ್ಡಗಾಡು ಪ್ರದೇಶದಲ್ಲಿ ಹಣ್ಣಿನ ಗಿಡಗಳು ಕಡಿಮೆ ಇದ್ದು, ವಾನರ ಸಂತತಿ ಉಳಿಸಲು ಈ ಪ್ರಯತ್ನ ಮಾಡಲಾಗುತ್ತಿದೆ. ಅಂಜನಾದ್ರಿಯ ಹನುಮಪ್ಪನ ದರ್ಶನಕ್ಕೆಂದು ಬರುವ ಭಕ್ತರು, ಪ್ರವಾಸಿಗರು ನೀಡುವ ಆಹಾರವಷ್ಟೇ ಕೋತಿಗಳಿಗೆ ಆಹಾರವಾಗಿದೆ. ಹೀಗಾಗಿ ವಾನರ ವನ ನಿರ್ಮಿಸಲು ನಾವು ಯೋಜನೆ ರೂಪಿಸಿದ್ದೇವೆ" ಎಂದು ತಿಳಿಸಿದರು.

ಇದನ್ನೂ ಓದಿ:ಶ್ರೀಲಂಕಾದ ಸೀತಾದೇವಿ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ, ಮಣ್ಣು - Anjanadri

Last Updated : Jun 18, 2024, 1:28 PM IST

ABOUT THE AUTHOR

...view details