ಬೆಂಗಳೂರು: ರಾಜ್ಯ ರಾಜಧಾನಿಗೆ ಜಲಕ್ಷಾಮ ಎದುರಾಗಿದೆ. ಒಂದೆಡೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ, ಮತ್ತೊಂದೆಡೆ ಅಂತರ್ಜಲ ಮಟ್ಟ ಕುಸಿದು ಬೋರ್ವೆಲ್ಗಳು ಬತ್ತಿಹೋಗುತ್ತಿವೆ. ಮಹದೇವಪುರ, ಕೆ.ಆರ್.ಪುರ, ಯಶವಂತಪುರ, ಯಲಹಂಕ, ದಾಸರಹಳ್ಳಿ, ಬ್ಯಾಟರಾಯನಪುರ ವಿಧಾನಸಭಾ ವ್ಯಾಪ್ತಿಯ 110 ಹಳ್ಳಿಗಳು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾಗಿ ಸರಿಸುಮಾರು 16 ವರ್ಷಗಳೇ ಕಳೆದಿವೆ. ಹೀಗಿದ್ದರೂ ಇಲ್ಲಿ ವಾಸಿಸುವ ನಿವಾಸಿಗಳಿಗೆ ಸಮರ್ಪಕ ಕುಡಿಯುವ ನೀರು ಸಿಗುತ್ತಿಲ್ಲ.
ಮಹದೇವಪುರ ವರದಿ:ಪಾಲಿಕೆಗೆ ಶೇ.50ರಷ್ಟು ಆದಾಯ ತಂದುಕೊಡುವ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೀರನ ಬವಣೆ ತೀವ್ರವಾಗಿದೆ. ಐಟಿಬಿಟಿ ಕ್ಷೇತ್ರ ಎಂದೇ ಕರೆಸಿಕೊಳ್ಳುವ ಮಹದೇವಪುರದ ಪ್ರತಿ ವಾರ್ಡ್‌ನಲ್ಲೂ ನೀರಿನ ಅಭಾವದಿಂದಾಗಿ ಜನ ಹೈರಾಣಾಗಿದ್ದಾರೆ. ಈ ಕ್ಷೇತ್ರಕ್ಕೊಳಪಡುವ ವರ್ತೂರು, ಹಗದೂರು ಮತ್ತಿತರ ವಾರ್ಡ್‍ಗಳಲ್ಲಿ ಬೋರ್ಗಳು ಬತ್ತಿ ಹೋಗಿವೆ.
ಇಲ್ಲಿನ ಜನರು ನಿತ್ಯ ಟ್ಯಾಂಕರ್ ನೀರನ್ನೇ ಅವಲಂಬಿಸಬೇಕಿದೆ. ಪ್ರತಿ ಮನೆಗೂ ಟ್ಯಾಂಕರ್ ನೀರೇ ಗತಿ ಎಂಬಂತಾಗಿದೆ. ತಿಂಗಳಲ್ಲಿ 4ರಿಂದ 5 ಸಾವಿರ ರೂಪಾಯಿ ನೀರಿಗೆ ಕೊಡಬೇಕಿದೆ. ಒಂದು ವೇಳೆ ಟ್ಯಾಂಕರ್ ನೀರು ಬುಕ್ ಮಾಡಿದರೆ ಅದು ಬರಲು ಒಂದು ವಾರ ಬೇಕು ಎಂದು ಜನರು ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೆ.ಆರ್.ಪುರ ವರದಿ: ಕೆ.ಆರ್.ಪುರದಲ್ಲೂ ಇದೇ ಪರಿಸ್ಥಿತಿ. ಕ್ಷೇತ್ರದ ದೇವಸಂದ್ರ ವಾರ್ಡ್‍ನ ಕತೆ ಚಿಂತಾಜನಕವೆನ್ನಬಹುದು. ಈ ವಾರ್ಡ್‍ನ ಜನರು ಪ್ರತಿನಿತ್ಯ ಕುಡಿಯುವ ನೀರಿಗೆ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಮೊದಲು ವಾರಕ್ಕೆರಡು ದಿನ ನೀರು ಬಿಡುತ್ತಿದ್ದ ಬಿಬಿಎಂಪಿ, ಈಗ ವಾರಕ್ಕೆ ಒಂದು ಬಾರಿ, ಅದೂ ಅರ್ಧ ಗಂಟೆ ಮಾತ್ರ ನೀರು ಸರಬರಾಜು ಮಾಡುತ್ತಿದೆ.
ವಾರಕ್ಕೊಮ್ಮೆ ನೀರು ಬಿಡುವುದರಿಂದ ಕೂಲಿ ಕೆಲಸ ಮಾಡುವ ಮಹಿಳೆಯರು ಕೆಲಸಕ್ಕೆ ರಜೆ ಹಾಕಿ ನೀರು ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಇಲ್ಲದಿದ್ದರೆ ವಾರಪೂರ್ತಿ ಕುಡಿಯಲು ನೀರೇ ಇಲ್ಲದೆ ಪರದಾಡಬೇಕು. ಕ್ಯಾನ್ ವಾಟರ್ಗೆ ಪ್ರತಿದಿನ 100 ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಬಟ್ಟೆ ಒಗೆಯಲು, ಸ್ನಾನಕ್ಕೆ, ಪಾತ್ರೆ ತೊಳೆಯಲು ಟ್ಯಾಂಕರ್ ನೀರು ಹಾಕಿಸಿಕೊಳ್ಳಬೇಕು. ಇದಕ್ಕೆ ತಿಂಗಳಿಗೆ ಮೂರರಿಂದ ನಾಲ್ಕು ಸಾವಿರ ರೂ. ತೆರಬೇಕು ಎಂಬುದು ಇಲ್ಲಿನ ಜನರ ಅಳಲು.
ಯಶವಂತಪುರ ವರದಿ: ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಪ್ರತಿನಿಧಿಸುವ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಂತೂ ಜನ ನೀರಿಗಾಗಿ ಪರದಾಡುವಂತಾಗಿದೆ. ಕ್ಷೇತ್ರದ ಹೇರೋಹಳ್ಳಿ ವಾರ್ಡ್‍ನ ವಿಘ್ನೇಶ್ವರ ನಗರ, ಮಹದೇಶ್ವರ ನಗರ, ದೊಡ್ಡಬಿದರಕಲ್ಲು ವಾರ್ಡ್, ಉಲ್ಲಾಳು ವಾರ್ಡ್, ಕೆಂಗೇರಿ ಮತ್ತಿತರ ಕಡೆಗಳಲ್ಲೂ ಜನರಿಗೆ ನೀರು ಸಿಗುತ್ತಿಲ್ಲ. ಈ ಕ್ಷೇತ್ರದಲ್ಲಿ ಇದುವರೆಗೂ ನೀರಿನ ಸಮಸ್ಯೆ ಬಗೆಹರಿದಿಲ್ಲ. ಹೀಗಾಗಿ ಬಾಡಿಗೆ ಮನೆಗಳಿಗೆ ಬರಲು ಜನ ಹಿಂದೇಟು ಹಾಕುತ್ತಿದ್ದಾರೆ. ನೀರಿನ ಅಭಾವ ತೀವ್ರಗೊಂಡಾಗ ಸ್ಥಳೀಯ ಪ್ರತಿನಿಧಿಗಳು ಟ್ಯಾಂಕರ್ ಮೂಲಕ ಸ್ವಲ್ಪ ಪ್ರಮಾಣದ ನೀರು ನೀಡಿ, ಮತ್ತೆ ಆ ಕಡೆ ಮುಖ ಕೂಡ ಹಾಕುವುದಿಲ್ಲ ಎಂದು ಜನ ಹೇಳಿದ್ದಾರೆ.
ಲಕ್ಕಸಂದ್ರ ವರದಿ:ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಮನೆ ಇರುವ ವಾರ್ಡ್ ಲಕ್ಕಸಂದ್ರ. 8 ಬಾರಿ ಶಾಸಕರಾಗಿ, 5 ಬಾರಿ ಮಂತ್ರಿಯಾಗಿ ರೆಡ್ಡಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಿದ್ದರೂ ಈ ಪ್ರದೇಶದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ತಪ್ಪಿಲ್ಲ. ಇದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಲಕ್ಕಸಂದ್ರ ವಾರ್ಡ್. ಇಲ್ಲಿನ ನಿವಾಸಿಗಳು ಈಗಲೂ ನೀರಿಗಾಗಿ ಸಂಕಷ್ಟ ಎದುರಿಸುತ್ತಿದ್ದಾರೆ.
ಕಳೆದೊಂದು ವರ್ಷದಿಂದ ಕಾವೇರಿ ನೀರಿಗಾಗಿ ಇಲ್ಲಿನ ಜನ ಜಪ ಮಾಡುತ್ತಿದ್ದಾರೆ. ವಾರಕ್ಕೊಮ್ಮೆ ಬರುವ ಕಾವೇರಿ ಸಣ್ಣ ಪ್ರಮಾಣದಲ್ಲಿ ಬರುತ್ತಿದೆ. ಅದೂ ಒಂದು ಗಂಟೆ ಮಾತ್ರ. ಬಿಟ್ಟ ನೀರು ಒಂದು ಬಿಂದಿಗೆಯನ್ನೂ ತುಂಬಲ್ಲ ಎನ್ನುವುದು ಜನಾಕ್ರೋಶ. ಇನ್ನು ಬೋರ್ವೆಲ್ ಕೊರೆದು ವರ್ಷವಾದರೂ ನೀರು ಮಾತ್ರ ಬರುತ್ತಿಲ್ಲ. ಜನಪ್ರತಿನಿಧಿಗಳನ್ನು ಕೇಳಿದರೆ ಭರವಸೆ ಮಾತ್ರ ಕೊಡುತ್ತಾರೆ ಎಂದು ಜನರು ಹೇಳುತ್ತಾರೆ.
ಆರ್.ಆರ್.ನಗರ ವರದಿ:ಡಿಸಿಎಂ ಡಿ.ಕೆ.ಶಿವಕುಮಾರ್ ಜನಸ್ಪಂದನ ನಡೆಸಿದ್ದ ಆರ್.ಆರ್.ನಗರ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ನರಸಿಂಹ ಸ್ವಾಮಿ ಬಡಾವಣೆಯಲ್ಲಿ ಹನಿ ನೀರಿಗೂ ರಾಜಕೀಯದ ಬಣ್ಣ ಬೆರೆತಿದ್ದು, ನೀರಿಲ್ಲದೇ ಜನ ಕಂಗಾಲಾಗಿದ್ದಾರೆ. ಖಾಲಿ ಬಿಂದಿಗೆಗಳನ್ನು ಇಟ್ಟುಕೊಂಡು ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಹಾಗಾಗಿದೆ. ಇಲ್ಲಿ ವಾರಕ್ಕೊಮ್ಮೆ ರಾತ್ರಿ ವೇಳೆ ಬರುವ ನೀರನ್ನು ಕಾದು ಕುಳಿತು ಶೇಖರಿಸಿಡುವ ಸ್ಥಿತಿ ಇದೆ. ಹೆಚ್ಚಾಗಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುವವರೇ ಇಲ್ಲಿರುವುದರಿಂದ ಯಾವಾಗ ದಿನ ನೀರು ಬರುತ್ತೆ ಎಂದು ಕೆಲಸಕ್ಕೆ ರಜೆ ಹಾಕಿ ನೀರಿಗಾಗಿ ಕಾದು ಕುಳಿತುಕೊಳ್ಳುವಂತಾಗಿದೆ.