ಮಂಗಳೂರು:ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಮೇ 5ರಿಂದ ನಗರದಲ್ಲಿ ಕುಡಿಯುವ ನೀರಿನ ರೇಶನಿಂಗ್ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ. ಅದರಂತೆ ನಗರಕ್ಕೆ ಎರಡು ದಿನಕ್ಕೊಮ್ಮೆ (ದಿನ ಬಿಟ್ಟು ದಿನ) ನೀರು ಪೂರೈಕೆಯಾಗಲಿದೆ.
ಜಿಲ್ಲಾಧಿಕಾರಿ ಮುಲೈಮುಗಿಲನ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಮಂಗಳೂರು ಪಾಲಿಕೆಯಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರದ ಮಹತ್ವದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಅದರಂತೆ ಲಭ್ಯವಿರುವ ನೀರನ್ನು ನಗರ ಪ್ರದೇಶಕ್ಕೆ (ಮಂಗಳೂರು ದಕ್ಷಿಣ) ಮತ್ತು ಸುರತ್ಕಲ್ ಪ್ರದೇಶಕ್ಕೆ (ಮಂಗಳೂರು ಉತ್ತರ) ಪರ್ಯಾಯ ದಿನಗಳಲ್ಲಿ ಕುಡಿಯುವ ನೀರು ಸರಬರಾಜುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ದ.ಕ ಜಿಲ್ಲೆಯಲ್ಲಿ ಅತಿಯಾದ ಪೂರ್ವ ಮುಂಗಾರು ಮಳೆ ಕೊರತೆಯಾಗಿದೆ. ಇದರಿಂದಾಗಿ ಸುಬ್ರಹ್ಮಣ್ಯ ಸಹಿತ ವಿವಿಧೆಡೆ ಮಳೆಯಾಗಲಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ತುಂಬೆ ಡ್ಯಾಂನಲ್ಲಿ ನೀರು ಸಂಗ್ರಹವಾಗದ ಕಾರಣ ನೀರಿನ ಪೂರೈಕೆಯಲ್ಲಿ ರೇಶನಿಂಗ್ ಮಾಡಲು ನಿರ್ಧರಿಸಲಾಗಿದೆ.
ಕಳೆದ ವರ್ಷವೂ ರೇಶನಿಂಗ್:ತುಂಬೆಯಲ್ಲಿ ನೀರಿನ ಮಟ್ಟ ಇಳಿಕೆಯಾದ ಪರಿಣಾಮ 2023ರಲ್ಲಿ ಮೇ 4ರಿಂದ ನಗರದಲ್ಲಿ ನೀರಿನ ರೇಶನಿಂಗ್ ನಡೆಸಲಾಗಿತ್ತು. ದಿನ ಬಿಟ್ಟು ದಿನ ನೀರು ಪೂರೈಕೆಗೆ ನಿರ್ಧಾರ ಮಾಡಲಾಗಿತ್ತು. ಜೂನ್ ತಿಂಗಳಲ್ಲಿ ಮಳೆಯಾದ ಬಳಿಕ ರೇಶನಿಂಗ್ ನಿಲ್ಲಿಸಲಾಗಿತ್ತು. ಸಾರ್ವಜನಿಕರು ನೀರು ಪೋಲು ಮಾಡದೇ ಸದ್ಬಳಕೆ ಮಾಡಬೇಕು. ಜನರಲ್ಲಿ ನೀರಿನ ಮಹತ್ವದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು. ನೀರಿನ ರೇಶನಿಂಗ್ ಮಾಡಲು ಸೂಕ್ತ ವೇಳಾಪಟ್ಟಿಯನ್ನು ತಯಾರಿಸಿ ಸಮರ್ಪಕವಾಗಿ ಎಲ್ಲ ಕಡೆ ನೀರು ಪೂರೈಕೆಯಾಗುವಂತೆ ನಿಗಾವಹಿಸಬೇಕು ಎಂದು ಸೂಚಿಸಿದ ದ.ಕ. ಜಿಲ್ಲಾಧಿಕಾರಿ ಮುಲೈಮುಗಿಲನ್ ಅವರು ಸೂಚಿಸಿದ್ದಾರೆ.
ನೀರಿನ ಸಮಸ್ಯೆ ಇರುವ ಸೋಮೇಶ್ವರ ಹಾಗೂ ಕೋಟೆಕಾರು ಪ್ರದೇಶಗಳಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಆಗುತ್ತಿದ್ದು, ಅದರ ಬಗ್ಗೆಯೂ ಅಧಿಕಾರಿಗಳು ಗಮನಹರಿಸುತ್ತಿರಬೇಕು. ಮುಂದಿನ ಮಳೆಗಾಲದವರೆಗೂ ಯಾವುದೇ ರೀತಿಯ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದರು.
ಮಂಗಳೂರಿನಲ್ಲಿ ನೀರಿನ ಸರಬರಾಜು ವಿವರ: ಮೇ 5ರಂದು (ಬೆಸ ದಿನಗಳು).
ಬೆಂದೂರು ರೇಚಕ ಸ್ಥಾವರ: ಕೋರ್ಟ್ ವಾರ್ಡ್, ರಥಬೀದಿ, ಬಾವುಟಗುಡ್ಡೆ ಟ್ಯಾಂಕ್, ಆಕಾಶವಾಣಿ ಟ್ಯಾಂಕ್, ಪದವು ಟ್ಯಾಂಕ್, ಗೋರಿಗುಡ್ಡೆ, ಸೂಟರ್‌ಪೇಟೆ, ಶಿವಬಾಗ್, ಬೆಂದೂರ್, ಕದ್ರಿ, ವಾಸ್‌ಲೇನ್, ಬೆಂದೂರ್ ಲೋ ಲೆವೆಲ್ ಪ್ರದೇಶಗಳಾದ ಕಾರ್‌ಸ್ಟ್ರೀಟ್, ಕುದ್ರೋಳಿ ಫಿಲ್ಡಿಂಗ್ ಹಾರ್ಬರ್, ಕೊಡಿಯಾಲಬೈಲು ಇತ್ಯಾದಿ.
ಪಡೀಲು ರೇಚಕ ಸ್ಥಾವರ:ಮಂಗಳಾದೇವಿ, ಅತ್ತಾವರ, ಬಾಬುಗುಡ್ಡೆ, ವೆಲೆನ್ಸಿಯ, ಜಪ್ಪಿನಮೊಗರು, ಬಿಕರ್ನಕಟ್ಟೆಟ್ಯಾಂಕ್, ಉಲ್ಲಾಸ್ ನಗರ, ಬಜಾಲ್, ತಿರುವೈಲು, ವಾಮಂಜೂರು.