ಕರ್ನಾಟಕ

karnataka

ETV Bharat / state

ಶೃಂಗೇರಿ ಮಠದಲ್ಲಿ ವಸ್ತ್ರ ಸಂಹಿತೆ ಜಾರಿ; ಪುರುಷರಿಗೆ ಧೋತಿ-ಶಲ್ಯ, ಮಹಿಳೆಯರಿಗೆ ಸೀರೆ-ಚೂಡಿದಾರ ಕಡ್ಡಾಯ - DRESS CODE FOR DEVOTEES IN SRINGERI - DRESS CODE FOR DEVOTEES IN SRINGERI

ಕಾಫಿನಾಡಿನಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶೃಂಗೇರಿ ಶಾರದಾಂಬೆಯ ಸನ್ನಿಧಿಯಲ್ಲಿ ವಸ್ತ್ರಸಂಹಿತೆ ಜಾರಿಯಾಗಿದೆ. ಇದು ಮಠದ ಅರ್ಚಕರು ಮತ್ತು ಭಕ್ತರ ಸಂತಸಕ್ಕೆ ಕಾರಣವಾಗಿದೆ.

DRESS CODE FOR DEVOTEES IN SRINGERI
ಶಾರದ ಮಠದಲ್ಲಿ ವಸ್ತ್ರ ಸಂಹಿತೆ (ETV Bharat)

By ETV Bharat Karnataka Team

Published : Jul 24, 2024, 6:53 PM IST

Updated : Jul 24, 2024, 7:25 PM IST

ಚಿಕ್ಕಮಗಳೂರು:ಶೃಂಗೇರಿ ಹಿಂದೂಗಳ ಪಾಲಿನ ಪವಿತ್ರ ಸ್ಥಳ. ಗುರು ಪರಂಪರೆಯಲ್ಲಿ ತನ್ನದೇ ಆದ ವೈಶಿಷ್ಟ್ಯತೆಯಿಂದ ಕೂಡಿರುವ ಹಿಂದುಗಳ ಧಾರ್ಮಿಕ ಶ್ರದ್ಧಾ ಕೇಂದ್ರ. ಇದೀಗ ದೇವಾಲಯದಲ್ಲಿ ಧಾರ್ಮಿಕ ವಾತಾವರಣ ಕಾಯುವ ಉದ್ದೇಶದಿಂದ ಐತಿಹಾಸಿಕ ನಿರ್ಣಯಕ್ಕೆ ಶೃಂಗೇರಿ ಪೀಠ ಮುಂದಾಗಿದೆ. ಈ ನಿಟ್ಟಿನಲ್ಲಿ ಶೃಂಗೇರಿ ಆಡಳಿತ ಮಂಡಳಿ ಕೈಗೊಂಡ ಈ ನಿರ್ಧಾರಕ್ಕೆ ಪುರೋಹಿತ ವರ್ಗ ಹಾಗೂ ಭಕ್ತರು ಹರ್ಷ ವ್ಯಕ್ತಪಡಿಸಿದ್ದಾರೆ. ಆ. 15 ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಶೃಂಗೇರಿಯ ಶಾರದ ಮಠದಲ್ಲಿ ವಸ್ತ್ರ ಸಂಹಿತೆ ಜಾರಿ; ಮಠದಿಂದ ಪ್ರಕಟಣೆ (ETV Bharat)

ಗುರು ಪರಂಪರೆಯಲ್ಲಿ ಸನಾತನ ಧರ್ಮದ ಏಳಿಗೆಗಾಗಿ ಶಾರದಾಂಬೆಯ ನೆಲಬೀಡು ಶೃಂಗೇರಿ ಪೀಠ ಶ್ರಮಿಸಿದೆ. ತುಂಗಾ ತೀರದಲ್ಲಿ ವಿಹಂಗಮವಾಗಿ ಭಕ್ತರ ಪಾಲಿಗೆ ಆರಾಧ್ಯ ದೇವವಾದ ಶೃಂಗೇರಿ ಶಾರದಾಂಬೆ ಪೀಠ ಸಹಸ್ರಾರು ಭಕ್ತರ ಪಾಲಿಗೆ ಭಕ್ತಿ ಕೇಂದ್ರ. ಈ ಹಿಂದೆ ಕ್ಷೇತ್ರಕ್ಕೆ ಭೇಟಿ ನೀಡುವ ಪ್ರವಾಸಿಗರಾಗಲಿ, ಭಕ್ತರಾಗಲಿ ಪ್ಯಾಂಟು, ಶರ್ಟು, ಮಾಡರ್ನ್​ ಡ್ರೆಸ್ ಧರಿಸಿ ಹೋಗಬಹುದಿತ್ತು. ಆದ್ರೆ ಸನಾತನ ಧರ್ಮದ ಮೌಲ್ಯಗಳು ಎಲ್ಲೋ ಒಂದು ಕಡೆ ಮಾಯವಾಗುತ್ತಿರುವ ಹೊತ್ತಲ್ಲಿ ಶೃಂಗೇರಿ ಆಡಳಿತ ಮಂಡಳಿ ಕೈಗೊಂಡಿರುವ ತೀರ್ಮಾನಕ್ಕೆ ರಾಜ್ಯ ಸೇರಿದಂತೆ ವಿದೇಶದಲ್ಲಿರುವ ಮಠದ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.

ಶೃಂಗೇರಿಯ ಶಾರದ ಮಠದಲ್ಲಿ ವಸ್ತ್ರ ಸಂಹಿತೆ ಜಾರಿ; ಭಕ್ತರಿಂದ ಮೆಚ್ಚುಗೆ (ETV Bharat)

ಹೌದು, ಇನ್ಮುಂದೆ ಶೃಂಗೇರಿಗೆ ಹೋಗ್ಬೇಕು ಅಂದ್ರೆ ಪುರುಷರು ಧೋತಿ, ಶಲ್ಯ, ಮಹಿಳೆಯರು ಸೀರೆ, ರವಿಕೆ ಮತ್ತು ಸಲ್ವಾರ್​ ಧರಿಸಿ ಬರುವಂತೆ ಆಡಳಿತ ಮಂಡಳಿ ತೀರ್ಮಾನ ಕೈಗೊಂಡಿದೆ. ಅಲ್ಲದೆ ಗುರುಗಳ ದರ್ಶನಕ್ಕೂ ಡ್ರೆಸ್ ಕೋಡ್ ಜಾರಿ ಮಾಡಿರುವ ಆಡಳಿತ ಮಂಡಳಿ ದೇವಾಲಯದಲ್ಲಿ ಧಾರ್ಮಿಕ ವಾತಾವರಣ ಕಾಯುವ ನಿರ್ಧಾರಕ್ಕೆ ಬಂದಿದೆ. ಹಲವು ವರ್ಷಗಳಿಂದ ಈ ಬೇಡಿಕೆಗಾಗಿ ಭಕ್ತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ರು. ಆದರೆ ಇದೀಗ ದಿಡೀರ್ ನಿರ್ಧಾರ ಕೈಗೊಂಡು ಮಠದ ಭಕ್ತರು ಹಾಗೂ ಪ್ರವಾಸಿಗರಿಗೆ ವಸ್ತ್ರ ಸಂಹಿತೆ ಜಾರಿ ಮಾಡಿರೋದು ಸಂತಸಕ್ಕೆ ಕಾರಣವಾಗಿದೆ.

ಶೃಂಗೇರಿಯ ಶಾರದ ಮಠದಲ್ಲಿ ವಸ್ತ್ರ ಸಂಹಿತೆ ಜಾರಿ ನಿರ್ಧಾರಕ್ಕೆ ಅಭಿನಂದನಾ ಪತ್ರ (ETV Bharat)

ಇನ್ನು ಶೃಂಗೇರಿ ಆಡಳಿತ ಮಂಡಳಿಯ ಈ ನಿರ್ಧಾರದಿಂದ ಅತ್ಯಂತ ಸಂತೋಷಗೊಂಡಿರುವ ಕೊಪ್ಪ ಶೃಂಗೇರಿ ಹಾಗೂ ನರಸಿಂಹರಾಜಪುರ ತಾಲೂಕಿನ ಪುರೋಹಿತ ವರ್ಗ ಆಡಳಿತ ಮಂಡಳಿಗೆ ಅಭಿನಂದನಾ ಪತ್ರ ಸಲ್ಲಿಸಿದೆ. ಗುರು ಪರಂಪರೆಗೆ ಹೆಸರುವಾಸಿ ಆಗಿರುವ ಸನಾತನ ಧರ್ಮದ ಉಳಿವಿಗಾಗಿ ಶ್ರಮಿಸುತ್ತಿರುವ ಶೃಂಗೇರಿ ಶಾರದಾ ಮಠದ ಈ ನಿರ್ಧಾರ ಸೂಕ್ತವಾಗಿದೆ. ಇನ್ಮುಂದೆ ಶೃಂಗೇರಿಗೆ ಭೇಟಿ ನೀಡುವ ಮಹಿಳೆಯರು, ಪುರುಷರು, ಮಕ್ಕಳು ಹಿಂದೂ ಧಾರ್ಮಿಕ ವಾತಾವರಣ ಉಂಟು ಮಾಡುವ ವಸ್ತ್ರ ಸಂಹಿತೆಯನ್ನೇ ಪಾಲಿಸಬೇಕೆಂದು ಮನವಿ ಮಾಡಿದ್ದಾರೆ. ಶ್ರೀ ಮಠಕ್ಕೆ ಭೇಟಿ ನೀಡಿದಾಗ ಅಲ್ಲಿ ಸಿಗುವ ದೈವ ಪ್ರಾಪ್ತಿಯನ್ನು ಭಕ್ತಿಯಿಂದ ಸ್ವೀಕರಿಸಲು ಈ ನಿರ್ಧಾರ ಸಹಕಾರಿಯಾಗಿದೆ ಎಂದು ಭಕ್ತವೃಂದ ಮುಕ್ತ ಕಂಠದಿಂದ ಸ್ವಾಗತಿಸಿದೆ.

ಶೃಂಗೇರಿಯ ಶಾರದ ಮಠದಲ್ಲಿ ವಸ್ತ್ರ ಸಂಹಿತೆ ಜಾರಿ; ಭಕ್ತರಿಂದ ಮೆಚ್ಚುಗೆ (ETV Bharat)

ಒಟ್ಟಾರೆ ಹಲವು ವರ್ಷಗಳಿಂದ ಭಕ್ತರ ಬೇಡಿಕೆಯಾಗಿದ್ದ ಸನಾತನ ವಸ್ತ್ರ ಸಂಹಿತೆ ಶೃಂಗೇರಿ ಶಾರದಾಂಬೆಯ ನೆಲವೀಡಲ್ಲಿ ಜಾರಿಯಾಗಿರುವುದು ಉತ್ತಮ ಬೆಳವಣಿಗೆಯಾಗಿದೆ.

ಇದನ್ನೂ ಓದಿ: ದೇವಾಲಯಗಳಲ್ಲಿ ವಸ್ತ್ರ ಸಂಹಿತೆ: ರಾಮಲಿಂಗಾರೆಡ್ಡಿಗೆ ಮನವಿ ಸಲ್ಲಿಸಲು ಮುಂದಾದ ಧಾರ್ಮಿಕ ಸಂಸ್ಥೆ

Last Updated : Jul 24, 2024, 7:25 PM IST

ABOUT THE AUTHOR

...view details