ಕರ್ನಾಟಕ

karnataka

ETV Bharat / state

ಜಯದೇವ ಆಸ್ಪತ್ರೆಯ ಪ್ರಭಾರ ನಿರ್ದೇಶಕರಾಗಿ ಡಾ. ರವೀಂದ್ರನಾಥ್ ನೇಮಕ - ಜಯದೇವ ಆಸ್ಪತ್ರೆ

ಜಯದೇವ ಆಸ್ಪತ್ರೆಯ ಪ್ರಭಾರ ನಿರ್ದೇಶಕರಾಗಿ ಡಾ ರವೀಂದ್ರನಾಥ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

ಜಯದೇವ ಆಸ್ಪತ್ರೆ
ಜಯದೇವ ಆಸ್ಪತ್ರೆ

By ETV Bharat Karnataka Team

Published : Jan 31, 2024, 10:05 PM IST

ಬೆಂಗಳೂರು : ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಪ್ರಭಾರ ನಿರ್ದೇಶಕರಾಗಿ ಡಾ. ರವೀಂದ್ರನಾಥ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾಗಿದ್ದ ಡಾ. ಸಿ. ಎನ್ ಮಂಜುನಾಥ್ ಅವರ ಅವಧಿ ಇಂದಿಗೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಪ್ರಭಾರ ನಿರ್ದೇಶಕರನ್ನಾಗಿ ಡಾ. ರವೀಂದ್ರನಾಥ್ ಅವರನ್ನು ನೇಮಕ ಮಾಡಲಾಗಿದೆ.

ಜಯದೇವ ಆಸ್ಪತ್ರೆಯ ಪ್ರಭಾರ ನಿರ್ದೇಶಕರಾಗಿ ಡಾ ರವೀಂದ್ರನಾಥ್ ನೇಮಕ

ಡಾ. ರವೀಂದ್ರನಾಥ್ ಅವರು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಈ ಹಿಂದೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಈಗಾಗಲೇ ಡಾ. ಮಂಜುನಾಥ್‌ ಅವರ ಸೇವಾವಧಿಯನ್ನು ನಾಲ್ಕು ಬಾರಿ ವಿಸ್ತರಿಸಲಾಗಿದ್ದು, ಈ ಬಾರಿ ಹೊಸ ನಿರ್ದೇಶಕರನ್ನು ನೇಮಕ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಾಗಾಗಿ, ಜಯದೇವ ಆಸ್ಪತ್ರೆಗೆ ಪೂರ್ಣಾವಧಿ ನಿರ್ದೇಶಕರನ್ನು ನೇಮಕ ಮಾಡುವ ಮುನ್ನ ರಾಜ್ಯ ಸರ್ಕಾರ ಸದ್ಯಕ್ಕೆ ಡಾ. ರವೀಂದ್ರನಾಥ್ ಅವರನ್ನು ಪ್ರಭಾರ ನಿರ್ದೇಶಕರನ್ನಾಗಿ ನೇಮಕ ಮಾಡಿದೆ.

ಜಯದೇವ ಆಸ್ಪತ್ರೆಗೆ ಪ್ರಭಾರ ನಿರ್ದೇಶಕ ಸ್ಥಾನಕ್ಕೆ ಒಟ್ಟು 21 ಅರ್ಜಿಗಳು ಬಂದಿದ್ದವು. ಈ ಪೈಕಿ ಜಯದೇವ ಆಸ್ಪತ್ರೆಯಲ್ಲಿಯೇ ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಕೆ ಎಚ್ ಶ್ರೀನಿವಾಸ್‌ ಹಾಗೂ ಮೈಸೂರು ಜಯದೇವ ಕೇಂದ್ರದ ನಿರ್ದೇಶಕ ಡಾ. ಕೆ. ಎಸ್ ಸದಾನಂದ, ಡಾ. ದಿನೇಶ್‌ ಸೇರಿದಂತೆ ಹಲವರ ಹೆಸರುಗಳು ನಿರ್ದೇಶಕ ಹುದ್ದೆಗೆ ಕೇಳಿ ಬಂದಿದ್ದವು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯಲಿರುವ ಜಯದೇವ ಹೃದ್ರೋಗ ಸಂಸ್ಥೆಯ ಬೋರ್ಡ್‌ ಸಭೆಯಲ್ಲಿ ಅಧಿಕೃತವಾಗಿ ನಿರ್ದೇಶಕರನ್ನು ಆಯ್ಕೆ ಮಾಡಲಾಗುತ್ತದೆ. ಬೋರ್ಡ್‌ ಮೀಟಿಂಗ್​ನಲ್ಲಿ ಶಾಶ್ವತ ನಿರ್ದೇಶಕರ ಆಯ್ಕೆ ಮಾಡುವವರೆಗೂ ಜಯದೇವ ಆಸ್ಪತ್ರೆಗೆ ಡಾ. ರವೀಂದ್ರನಾಥ್ ಅವರು ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಇದನ್ನೂ ಓದಿ:ಬಾಲ್ಯದಿಂದಲೂ ಬಡವರ ಸೇವೆ ಮಾಡುವ ತವಕವಿತ್ತು : ಡಾ ಮಂಜುನಾಥ್‌

ABOUT THE AUTHOR

...view details