ಬೆಂಗಳೂರು :ರಾಜ್ಯ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಡಿದ್ದು, ಒಬ್ಬರಾದ ಮೇಲೆ ಒಬ್ಬರು ಬಹಿರಂಗವಾಗಿಯೇ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ರಾಜ್ಯ ಬಿಜೆಪಿಯಲ್ಲಿನ ಅಂತಃಕಲಹ ಮತ್ತೊಂದು ಆಯಾಮ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ ಮತ್ತು ಶ್ರೀರಾಮುಲು ನಂತರ ಇದೀಗ ಮತ್ತೊಬ್ಬ ಮಾಜಿ ಸಚಿವ ಹಾಗೂ ಹಾಲಿ ಸಂಸದ ಡಾ. ಕೆ. ಸುಧಾಕರ್ ಅವರು ಬಹಿರಂಗವಾಗಿಯೇ ಗುಡುಗಿದ್ದಾರೆ.
ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸಂದೀಪ್ ಅವರನ್ನು ಆಯ್ಕೆ ಮಾಡಿರುವುದರಿಂದ ಸಿಡಿದೆದ್ದಿರುವ ಸುಧಾಕರ್, ಜಿಲ್ಲಾಧ್ಯಕ್ಷರ ನೇಮಕದಲ್ಲಿ ವಿಜಯೇಂದ್ರ ಅವರು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಮತ್ತಷ್ಟು ಅಸಮಾಧಾನದ ಹೊಗೆ ಮತ್ತಷ್ಟು ಹೆಚ್ಚುವ ಸಾಧ್ಯತೆ:ಇದೆಲ್ಲವನ್ನೂ ನೋಡಿದರೆ, ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮತ್ತೊಂದೆಡೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದ ಭಿನ್ನಮತೀಯರ ಬಣದ ವಿರುದ್ಧ ತಿರುಗಿ ಬೀಳಲು ಶಾಸಕರ ತಂಡವೊಂದು ಸಜ್ಜಾಗುತ್ತಿದೆ ಎಂದು ತಿಳಿದು ಬಂದಿದೆ.
ಶಿಸ್ತು ಕ್ರಮದ ನೋಟಿಸ್‌ಗೆ ಲಿಖಿತ, ಮೌಖಿಕ ಉತ್ತರ ನೀಡಿದ ವೇಳೆ ವರಿಷ್ಠರ ಸೂಚನೆಯಂತೆ ಕೆಲವು ದಿನ ಮೌನವಹಿಸಿದ್ದ ಯತ್ನಾಳ್ ಮತ್ತೆ ಬಹಿರಂಗ ವಾಗ್ದಾಳಿಗೆ ಇಳಿದಿದ್ದಾರೆ. ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ವಿರುದ್ಧ ಟೀಕೆ, ಪ್ರತ್ಯೇಕ ಸಭೆಗಳು, ಗುಂಪುಗಾರಿಕೆ ಚಟುವಟಿಕೆಗಳನ್ನು ಯಥಾರೀತಿ ನಡೆಸಿರುವುದು ಅನೇಕ ಶಾಸಕರಿಗೂ ಮುಜುಗರ ಉಂಟು ಮಾಡಿದೆ.
ನಾವು ಸಹ ಸೆಡ್ಡು ಹೊಡೆಯಬೇಕಾಗುತ್ತದೆ ಎಂದ ಕೆಲವರು:ಇದರ ನಿಯಂತ್ರಣಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ ನಡ್ಡಾ ಸ್ವತಃ ಪ್ರವೇಶಿಸಿದ್ದಾರೆ. ಎಲ್ಲ ಗೊಂದಲ ಸಾಧ್ಯವಾದಷ್ಟು ಬಗೆಹರಿಸಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಸಾಕಷ್ಟು ವಿಳಂಬವಾಗಿರುವ ಕಾರಣ ಇನ್ನಷ್ಟು ದಿನಗಳನ್ನು ಕಾಯಲು ಶಾಸಕರ ತಂಡ ತಯಾರಿಲ್ಲ. ಹೀಗಾಗಿ ಬೆಂಗಳೂರಿನ ಕೆಲವು ಶಾಸಕರು ಔಪಚಾರಿಕ ಮಾತುಕತೆ ನಡೆಸಿದ್ದಾರೆ. ಆಂತರಿಕ ಸಮಸ್ಯೆ ಶೀಘ್ರ ಬಗೆಹರಿಸಿ ಅಥವಾ ಯತ್ನಾಳ್ ತಂಡಕ್ಕೆ ಅವರದೇ ಶೈಲಿಯಲ್ಲಿ ಸೆಡ್ಡು ಹೊಡೆಯಬೇಕಾಗುತ್ತದೆ ಎಂಬ ಪರೋಕ್ಷ ಸಂದೇಶವನ್ನು ಕೇಂದ್ರ ನಾಯಕರಿಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಹೊತ್ತಿಕೊಂಡ ಕಿಡಿ ಆರಿಸುವ ಬದಲು ಕೆಲವು ಹಿರಿಯರು ತೆರೆಮರೆಯ ಆಟವಾಡುತ್ತಿದ್ದಾರೆ. ಇತ್ತ ಪಕ್ಷದ ಶಿಸ್ತಿನ ಪಾಠ ಹೇಳುತ್ತಿದ್ದಾರೆ. ಅತ್ತ ಯತ್ನಾಳ್ ತಂಡದವರಿಗೆ ಒತ್ತಾಸೆ ನೀಡುತ್ತಿದ್ದಾರೆ ಎಂಬುದು ಶಾಸಕರ ಅಸಹನೆಗೆ ಕಾರಣ ಎಂಬುದು ತಿಳಿದು ಬಂದಿದೆ.
ಬಸನಗೌಡ ಪಾಟೀಲ ಯತ್ನಾಳ್, ರಮೇಶ್ ಜಾರಕಿಹೊಳಿ ಮತ್ತು ಕೆಲವರದು ವೈಯಕ್ತಿಕ ವಿಷಯ, ಪ್ರತಿಷ್ಠೆಗಾಗಿ ಸಂಘಟನೆಯನ್ನು ಬಲಿಕೊಡುತ್ತಿದ್ದಾರೆ ಎನ್ನುವುದು ಶಾಸಕರ ಔಪಚಾರಿಕ ಚರ್ಚೆಯ ಭಾಗವಾಗಿದೆ. ಪಕ್ಷದ ಸಂಘಟನೆ, ತತ್ವ- ಸಿದ್ಧಾಂತ, ಹೋರಾಟದ ವಿಷಯಗಳೂ ಅಲ್ಲ. ವ್ಯಕ್ತಿಗತ ಮನಸ್ತಾಪವನ್ನು ಪಕ್ಷದ ತಲೆಗೆ ಕಟ್ಟಿ, ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಹುಟ್ಟಿಸುತ್ತಿದ್ದಾರೆ. ಇದು ಮುಂದುವರಿದರೆ ಎಲ್ಲರ ರಾಜಕೀಯ ಭವಿಷ್ಯಕ್ಕೂ ಅಪಾಯವೆಂಬ ಆತಂಕ ಶಾಸಕರದ್ದಾಗಿದೆ.
ರಾಧಾ ಮೋಹನ್ ದಾಸ್ ಅಗರವಾಲ್ ಮುಂದೆ ಪ್ರಸ್ತಾಪ : ಮಾಜಿ ಸಚಿವರಾದ ಎಂ. ಪಿ ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ರೀತಿ ಬಹಿರಂಗವಾಗಿ ವಾಗ್ದಾಳಿಗೆ ಇಳಿಯುವುದು ಸರಿಯಲ್ಲ. ಇದರಿಂದ ಯತ್ನಾಳ್ ಮತ್ತು ಮಾಜಿ ಶಾಸಕರ ತಂಡಕ್ಕೆ ಏನೂ ವ್ಯತ್ಯಾಸ ಇಲ್ಲವೆಂಬ ಕಾರಣಕ್ಕೆ ಮೌನವಹಿಸಿದ್ದೇವೆ ಎಂದು ಶಾಸಕರ ತಂಡ ಹೇಳಿದೆ.
ಪರ-ವಿರೋಧ ಹೇಳಿಕೆಗಳು ಪಕ್ಷಕ್ಕಂತೂ ಒಳ್ಳೆಯದು ಮಾಡುವುದಿಲ್ಲ. ಹಾಗಾಗಿ, ಪಕ್ಷದ ರಾಜ್ಯ ಉಸ್ತುವಾರಿ ಡಾ. ರಾಧಾ ಮೋಹನದಾಸ್ ಅಗರವಾಲ್ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾಪಿಸಿದ್ದೇವೆ. ಅಭಿಪ್ರಾಯಗಳನ್ನು ದಾಖಲಿಸಿಕೊಂಡು ವರಿಷ್ಠರ ಗಮನಕ್ಕೆ ತರುವ ಭರವಸೆ ನೀಡಿದ್ದಾರೆ. ಒಂದಷ್ಟು ದಿನಗಳವರೆಗೆ ಕಾದು ನೋಡಿ, ಯತ್ನಾಳ್ ತಂಡದ ವಿರುದ್ಧ ತಿರುಗಿ ಬೀಳಲೇಬೇಕು ಎಂದು ಶಾಸಕರ ತಂಡ ಅಂದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
'ಲಕ್ಷಾಂತರ ಕಾರ್ಯಕರ್ತರು ಪಕ್ಷದ ಸಂಘಟನೆಗಾಗಿ ಹಗಲಿರುಳು ದುಡಿಯುತ್ತಿದ್ದಾರೆ, ಹಲವರು ಪ್ರಾಣತ್ಯಾಗ ಮಾಡಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರಲು, ನಾವೆಲ್ಲ ಶಾಸಕರಾಗಿ ಗೆಲ್ಲಲು ಬೆವರಿಳಿಸಿದ್ದೇವೆ. ವೈಯಕ್ತಿಕ ದ್ವೇಷಕ್ಕೆ ಲಕ್ಷಾಂತರ ಕಾರ್ಯಕರ್ತರ ಭಾವನೆಗಳಿಗೆ ನೋವುಂಟು ಮಾಡುತ್ತಿದ್ದಾರೆ ಎನ್ನುವುದು ಅನೇಕ ಶಾಸಕರ ಸಿಟ್ಟಿಗೆ ಕಾರಣವಾಗಿದೆ. ರಾಜ್ಯ ನಾಯಕತ್ವದ ವಿರುದ್ಧ ಮಾತನಾಡಿದರೆ ವರಿಷ್ಠರು ಕರೆದು ಮಾತನಾಡಬಹುದು ಎಂದು ಕೆಲವರು ಹೀಗೆ ವರ್ತಿಸುತ್ತಿರುವಂತಿದೆ' ಎನ್ನುವುದು ಶಾಸಕರೊಬ್ಬರ ಅಭಿಪ್ರಾಯವಾಗಿದೆ.
ವೈಯಕ್ತಿಕ ವಿಚಾರಕ್ಕಾಗಿ ಪಕ್ಷವನ್ನು ಬಲಿ ಕೊಡುವುದು ಸರಿಯಲ್ಲ. ಕೇಂದ್ರ ನಾಯಕರು ಕ್ರಮಕೈಗೊಳ್ಳುವ ನಿರೀಕ್ಷೆಯಿದೆ. ಬೆಂಗಳೂರಿನ ಒಂದಿಷ್ಟು ಶಾಸಕರು ಚರ್ಚಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ :ಅನ್ಯಾಯ, ಸರ್ವಾಧಿಕಾರಿ ಮನಸ್ಥಿತಿ ಬೇಗ ಅಂತ್ಯ ಆಗುತ್ತದೆ: ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ - BJP REBELS