ಬೆಂಗಳೂರು:ಲೋಕಸಭೆ ಚುನಾವಣೆಗೆ ರಾಜ್ಯ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆ ಮಾಜಿ ನಿರ್ದೇಶಕ ಡಾ. ಸಿ ಎನ್ ಮಂಜುನಾಥ್ ಅವರಿಗೆ ಟಿಕೆಟ್ ಪ್ರಕಟಿಸಿದೆ.
ಡಿಸಿಎಂ ಡಿ ಕೆ ಶಿವಕುಮಾರ್ ಸಹೋದರ ಡಿ ಕೆ ಸುರೇಶ್ ಪ್ರತಿನಿಧಿಸುತ್ತಿರುವ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ಧ ಏಕೈಕ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಗೆಲ್ಲಲು ಹಲವು ಕಾರ್ಯತಂತ್ರದ ಕುರಿತು ಆಲೋಚನೆ ನಡೆಸಿದ ಬಿಜೆಪಿ ಪಕ್ಷ ಸೇರ್ಪಡೆಗೆ ಸಮ್ಮತಿ ಸೂಚಿಸಿರುವ ಮಂಜುನಾಥ್ ಅವರಿಗೆ ಟಿಕೆಟ್ ನೀಡಿದೆ.
ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿದ್ದ ಡಾ.ಸಿ ಎನ್ ಮಂಜುನಾಥ್ ಇತ್ತೀಚೆಗಷ್ಟೇ ಸೇವೆಯಿಂದ ನಿವೃತ್ತರಾಗಿದ್ದು, ರಾಜಕೀಯ ಕ್ಷೇತ್ರ ಪ್ರವೇಶದ ಅಪೇಕ್ಷೆ ವ್ಯಕ್ತಪಡಿಸಿದ್ದರು. ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡರ ಅಳಿಯರಾಗಿರುವ ಮಂಜುನಾಥ್ರನ್ನು ಸಂಪರ್ಕಿಸಿದ ಬಿಜೆಪಿ ನಾಯಕರು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಆಗುವಂತೆ ಮಾತುಕತೆ ನಡೆಸಿದರು. ಅವರು ಸಮ್ಮತಿ ನೀಡುತ್ತಿದ್ದಂತೆ ಹೈಕಮಾಂಡ್ ನಾಯಕರ ಸಂಪರ್ಕ ಮಾಡಿ ಮೊದಲ ಪಟ್ಟಿಯಲ್ಲೇ ಅವರ ಹೆಸರು ಪ್ರಕಟಗೊಳ್ಳುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ.
ಬಿಜೆಪಿ ಸೇರಲು ಒಪ್ಪಿಗೆ ನೀಡಿ, ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಆಗಲು ಸಮ್ಮತಿಸಿದ್ದರೂ ಡಾ. ಮಂಜುನಾಥ್ ಇನ್ನೂ ಬಿಜೆಪಿ ಸೇರಿಲ್ಲ. ಹಾಗೆ ನೋಡಿದರೆ ಬಿಜೆಪಿಯ ವ್ಯಕ್ತಿಯೇ ಅಲ್ಲದವರಿಗೆ ಬಿಜೆಪಿ ಟಿಕೆಟ್ ನೀಡಿದೆ ಎನ್ನಬಹುದು. ಪಕ್ಷ ಸೇರ್ಪಡೆ ಕುರಿತು ಯಡಿಯೂರಪ್ಪ ಜೊತೆ ಚರ್ಚಿಸಿರುವ ಮಂಜುನಾಥ್ ಶುಕ್ರವಾರ ಬಿಜೆಪಿ ಸೇರುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ನಿನ್ನೆ ಟಿಕೆಟ್ ಸಿಕ್ಕರೂ ಇನ್ನೆರಡು ದಿನದ ನಂತರ ಬಿಜೆಪಿ ಅಭ್ಯರ್ಥಿಯಾಗಿ ಪಕ್ಷ ಸೇರಲಿದ್ದಾರೆ.