ಬೆಂಗಳೂರು: ನಗರದಲ್ಲಿ ಡೆಂಘೀ ಹರಡುವಿಕೆಯನ್ನು ತಡೆಯುವ ಸಲುವಾಗಿ ಮನೆ-ಮನೆ ಸಮೀಕ್ಷೆ ನಡೆಸಿ ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೀ ಪ್ರಕರಣ ನಿಯಂತ್ರಿಸುವ ಸಂಬಂಧ ಬುಧವಾರ ಪಾಲಿಕೆ ಕೇಂದ್ರ ಕಚೇರಿ ಸಭಾಂಗಣ- 1ರಲ್ಲಿ ನಡೆದ ಸಭೆಯ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಆಯಾ ವಲಯ ವ್ಯಾಪ್ತಿಯಲ್ಲಿ ಆರೋಗ್ಯ ಪರಿವೀಕ್ಷರು, ಆಶಾ ಕಾರ್ಯಕರ್ತೆಯರು, ಎಎನ್ಎಂಗಳು ಹಾಗೂ ಲಿಂಕ್ ವರ್ಕರ್ಸ್ಗಳು ಸೇರಿದಂತೆ 1000 ಮನೆಗಳಿಗೊಂದು ಬ್ಲಾಕ್ ಅನ್ನು ರಚಿಸಿಕೊಳ್ಳಬೇಕು. ನಂತರ ಲಾರ್ವಾ ಇರುವ ತಾಣಗಳನ್ನು ಗುರುತಿಸುವುದು, ನಾಗರಿಕರಲ್ಲಿ ಅರಿವು ಮೂಡಿಸುವುದು ಹಾಗೂ ಯಾರಿಗಾದರು ಜ್ವರ ಬಂದಿದ್ದಲ್ಲಿ ಅಂತಹವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಮಾಡಿಸಕೊಳ್ಳಲು ತಿಳಿಸುವುದು ಸೇರಿದಂತೆ ಸಮಗ್ರವಾಗಿ ಮನೆ-ಮನೆ ಸಮೀಕ್ಷೆ ನಡೆಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಈಡಿಸ್ ಈಜಿಪ್ಟೈ ಎಂಬ ಸೊಳ್ಳೆಗಳಿಂದ ಡೆಂಘೀ ಹರಡುತ್ತದೆ. ಈ ನಿಟ್ಟಿನಲ್ಲಿ ಸೊಳ್ಳೆ ನಿಯಂತ್ರಣ ಮಾಡಲು ಲಾರ್ವಾ ಉತ್ಪಿತ್ತಿಯಾಗುವ ತಾಣಗಳನ್ನು ಗುರುತಿಸಿ ನಾಶಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮನೆಯಲ್ಲಿರುವ ಸಲಕರಣೆಳಲ್ಲಿ ಹೆಚ್ಚು ದಿನಗಳ ಕಾಲ ನೀರಿದ್ದರೆ ಲಾರ್ವಾ ಉತ್ಪತ್ತಿಯಾಗಿ ಸೊಳ್ಳೆಗಳ ಸಂಖ್ಯೆ ಹೆಚ್ಚಾಗುತ್ತದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಪಾಲಿಕೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ನಗರದಲ್ಲಿ 2024 ಜನವರಿಯಿಂದ ಜೂನ್‌ವರೆಗೆ 1230 ಪ್ರಕರಣಗಳು ಕಂಡುಬಂದಿದ್ದು, ವಲಯವಾರು ಮೈಕ್ರೋ ಪ್ಲಾನ್ ಮಾಡಿಕೊಂಡು ಡೆಂಘೀ ಹರಡುವಿಕೆಯನ್ನು ನಿಯಂತ್ರಿಸಲು ಸೂಚನೆ ನೀಡಲಾಗಿದೆ ಎಂದರು.
ನಗರದಲ್ಲಿ ಮಳೆ ಬಿಟ್ಟು ಬಿಟ್ಟು ಬರುತ್ತಿರುವ ಹಿನ್ನೆಲೆಯಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಜಾಗೃತಿ ಚಟುವಟಿಕೆಗಳನ್ನು ಹೆಚ್ಚಾಗಿ ನಡೆಸಲಾಗುತ್ತಿದೆ. ಇದನ್ನು ಸರ್ಕಾರದ ಮಟ್ಟದಲ್ಲೂ ಮಾಡಲಾಗುತ್ತಿದ್ದು, ಪಾಲಿಕೆಯಿಂದಲೂ ಆಯಾ ವಲಯಗಳಲ್ಲಿ ಹಲವಾರು ಚಟುವಟಿಕೆಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ನಗರದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜ್ವರ ಪ್ರಕರಣಗಳು ಕಂಡುಬಂದರೆ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎನ್.ಎಸ್ 1 ಟೆಸ್ಟ್ ಕಿಟ್ ಮೂಲಕ ಪರೀಕ್ಷೆ ಮಾಡಿ ಖಚಿತವಾದ ಬಳಿಕ ರಕ್ತದ ಮಾದರಿ ಸಂಗ್ರಹಿಸಿಕೊಂಡು ಪ್ರಯೋಗಾಲಯಗಳಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಬರುವ 28 ಲಕ್ಷ ಮನೆಗಳ ಪೈಕಿ, 14 ಲಕ್ಷ ಮನೆಗಳು ಬಡ ವರ್ಗವಿರುವ ಪ್ರದೇಶ, ಜನ ಸಂಖ್ಯೆ ಹೆಚ್ಚಿರುವ ಪ್ರದೇಶ ಹಾಗೂ ತಗ್ಗು ಪ್ರದೇಶಗಳಲ್ಲಿರುವ 14 ಲಕ್ಷ ಮನೆಗಳಿಗೆ 15 ದಿನಕ್ಕೊಮ್ಮೆ ಭೇಟಿ ನೀಡಿ ಲಾರ್ವಾ ಉತ್ಪತ್ತಿ ತಾಣಗಳು ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡಲಾಗುವುದು. ಮನೆ-ಮನೆ ಸಮೀಕ್ಷೆ ಮಾಡುವ ಸಲುವಾಗಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಎನ್ಎಸ್ಎಸ್ ಸ್ವಯಂ ಸೇವಕರನ್ನು ನಿಯೋಜಿಸಿಕೊಳ್ಳಲು ಕ್ರಮವಹಿಸಲಾಗುತ್ತಿದೆ ಎಂದರು.