ಗಜಪಡೆಗೆ ನೀಡುವ ಆಹಾರ ಕುರಿತು ಡಿಸಿಎಫ್ ಪ್ರಭುಗೌಡ ಮಾಹಿತಿ (ETV Bharat) ಮೈಸೂರು:ಜಂಬೂ ಸವಾರಿಗೆ ಗಜಪಡೆ ಸನ್ನದ್ಧಗೊಳಿಸಲು ಪ್ರತಿನಿತ್ಯ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಗಜಪಡೆಗೆ ನೀಡುವ ಈ ಪೌಷ್ಟಿಕ ಆಹಾರ ಯಾವ ರೀತಿ ತಯಾರು ಮಾಡಲಾಗುತ್ತದೆ, ಒಂದು ದಿನಕ್ಕೆ ಗಂಡು ಆನೆಗೆ ಹಾಗೂ ಹೆಣ್ಣು ಆನೆಗೆ ಎಷ್ಟು ಕೆ.ಜಿ. ಆಹಾರ ನೀಡಲಾಗುತ್ತದೆ ಎಂಬ ಕುತೂಹಲದ ಮಾಹಿತಿ ಇಲ್ಲಿದೆ.
ದಸರಾ ಗಜಪಡೆಯನ್ನು ಕಾಡಿನ ಆನೆ ಶಿಬಿರಗಳಿಂದ ಮೈಸೂರಿಗೆ ಕರೆತಂದು ಜಂಬೂ ಸವಾರಿಗೆ ಸಿದ್ಧಗೊಳಿಸಲು ನಿತ್ಯ ಪೌಷ್ಟಿಕ ಆಹಾರಗಳನ್ನು ನೀಡಲಾಗುತ್ತದೆ. ಆ ಮೂಲಕ ಜಂಬೂ ಸವಾರಿಗೆ ಗಜಪಡೆ ಬಲಾಢ್ಯಗೊಳಿಸುವ ಪ್ರಕ್ರಿಯೆ ನಿತ್ಯ ನಡೆಯುತ್ತದೆ.
ದಸರಾ ಗಜಪಡೆಯ ಆಹಾರ ಪದ್ಧತಿ (ETV Bharat) "ಗಜಪಡೆ ಅರಮನೆಯಿಂದ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಬೆಳಗ್ಗೆ ಮತ್ತು ಸಂಜೆ ತಾಲೀಮು ನಡೆಸಲಾಗುತ್ತದೆ. ತಾಲೀಮು ನಂತರ ಅರಮನೆಯ ಕೋಡಿ ಸೋಮೇಶ್ವರ ದೇವಾಲಯದ ಪಕ್ಕದಲ್ಲಿ ಇರುವ ಆನೆ ಅಡುಗೆ ಮನೆಯಲ್ಲಿ ತಯಾರಾದ ಆಹಾರ ನೀಡಲಾಗುತ್ತದೆ. ವಿವಿಧ ಬಗೆಯ ಧ್ಯಾನ್ಯ, ತರಕಾರಿ, ಮಿಶ್ರಿತ ಆಹಾರವನ್ನು ಆನೆ ತೂಕ ಹಾಗೂ ಆರೋಗ್ಯದ ದೃಷ್ಟಿಯಿಂದ ಒಂದು ಗಂಡು ಆನೆಗೆ 650 ರಿಂದ 750 ಕೆ.ಜಿ. ಪೌಷ್ಟಿಕ ಆಹಾರ ನೀಡಲಾಗುತ್ತದೆ. ಹೆಣ್ಣು ಆನೆಗೆ 450 ರಿಂದ 500 ಜತೆಗೆ ವಿಶೇಷ ಪ್ರೋಟೀನ್ ಇರುವ ಆಹಾರವನ್ನು 7 ರಿಂದ 8 ಕೆ.ಜಿ.ಯಂತೆ ನೀಡಲಾಗುತ್ತದೆ. ಇದರ ಜತೆಗೆ ಹಸಿರು ಹುಲ್ಲು, ಆಲದ ಸೊಪ್ಪು, ಒಣಹುಲ್ಲಿನ ಕುಸೋರೆ, ಜತೆಗೆ ಬೆಲ್ಲವನ್ನು ಸೇರಿಸಿ ನೀಡಲಾಗುತ್ತದೆ. ಹಾಗೇ ಆನೆಗಳಿಗೆ ಸ್ಪೆಷಲ್ ಫುಡ್ ಆಗಿ ಭತ್ತ, ಗೋಧಿ, ಬೇಳೆ, ಬೆಲ್ಲ, ತರಕಾರಿ, ಬೆಣ್ಣೆ ಮಿಶ್ರಿತ ಆಹಾರವನ್ನು ನೀಡಲಾಗುತ್ತದೆ" ಎಂದು ಡಿಸಿಎಫ್ ಪ್ರಭುಗೌಡ ಮಾಹಿತಿ ನೀಡಿದ್ದಾರೆ.
ದಸರಾ ಗಜಪಡೆಯ ಆಹಾರ ಪದ್ಧತಿ (ETV Bharat) ಏಕಲವ್ಯ ಭವಿಷ್ಯದ ಅಂಬಾರಿ ಆನೆ!: "ಅರ್ಜುನ ಆನೆಯ ಅಕಾಲಿಕ ಮರಣದ ನಂತರ ಅದಕ್ಕೆ ಬದಲಾಗಿ ಆಗಮಿಸಿರುವ ಏಕಲವ್ಯ ಆನೆ ಪಳಗಿದ ಆನೆಯಂತೆ ತಾಲೀಮಿನಲ್ಲಿ ಹಾಗೂ ಗಜಪಯಣ ಜತೆಗೆ ಅರಮನೆಗೆ ಆಗಮಿಸಿದ ಸಂದರ್ಭದಲ್ಲೂ ವರ್ತಿಸುತ್ತಿದೆ. ಏಕಲವ್ಯ ಆನೆಯ ವರ್ತನೆ ಪಳಗಿದ ಆನೆಯ ವರ್ತನೆಯಂತೆ ಕಂಡು ಬರುತ್ತಿದ್ದು ಭವಿಷ್ಯದಲ್ಲಿ ಅಂಬಾರಿ ಹೊರುವ ಆನೆ ಆಗಬಹುದು" ಎಂದು ಡಿಸಿಎಫ್ ಪ್ರಭುಗೌಡ ಹೇಳಿದ್ದಾರೆ. ಜತೆಗೆ ಕಾಲು ನೋವಿನಿಂದ ದೂರ ಉಳಿದಿದ್ದ ಕಂಜನ್ ಆನೆ ಚೇತರಿಸಿಕೊಂಡು ತಾಲೀಮುನಲ್ಲಿ ಭಾಗವಹಿಸಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಜಂಬೂ ಸವಾರಿಯಲ್ಲಿ 5ನೇ ಬಾರಿಗೆ ಚಿನ್ನದ ಅಂಬಾರಿ ಹೊರಲಿರುವ ಕ್ಯಾಪ್ಟನ್ ಅಭಿಮನ್ಯುಗೆ ವಿಶೇಷ ಆರೈಕೆ: ಪ್ರತ್ಯಕ್ಷ ವರದಿ - mysuru dasara 2024