ಬೆಂಗಳೂರು: "ರಾಜ್ಯದ ಮೂರು ಕ್ಷೇತ್ರಗಳಲ್ಲಿ ವಿರೋಧ ಪಕ್ಷಕ್ಕೆ ಜನ ಉತ್ತರ ನೀಡಿದ್ದಾರೆ" ಎಂದು ಮಾಜಿ ಸಂಸದ ಡಿ. ಕೆ. ಸುರೇಶ್ ಉಪಚುನಾವಣೆ ಗೆಲುವಿನ ಟಾಂಗ್ ನೀಡಿದ್ದಾರೆ.
ಸದಾಶಿವನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮಾಜಿ ಪ್ರಧಾನಿ, ಮಾಜಿ ಸಿಎಂ ಎಲ್ಲರೂ ಸರ್ಕಾರದ ವಿರುದ್ಧ ಆರೋಪ ಮಾಡಿಕೊಂಡು ಬಂದರು. ಇದೀಗ ಜನರ ಅಭಿಪ್ರಾಯ ತಿಳಿಸಿದ್ದಾರೆ. ಈಗಲಾದರೂ ನಮ್ಮ ಪಕ್ಷದ ಮೇಲೆ, ಸಿಎಂ ಮೇಲೆ ಆರೋಪ ಮಾಡೋದು ಬಿಟ್ಟು ಅಭಿವೃದ್ಧಿಗೆ ಸಹಕರಿಸಬೇಕು. ರಾಜ್ಯದ ಮೂರು ಪ್ರದೇಶದಲ್ಲಿ ವಿರೋಧ ಪಕ್ಷಕ್ಕೆ ಉತ್ತರ ನೀಡಿದ್ದಾರೆ. ಚನ್ನಪಟ್ಟಣದಲ್ಲಿ ಬಿಜೆಪಿ, ಜೆಡಿಎಸ್ಗೂ ಜನ ಉತ್ತರ ಕೊಟ್ಟಿದ್ದಾರೆ. ಕುಮಾರಸ್ವಾಮಿ, ಬೊಮ್ಮಾಯಿ ಪುತ್ರ ಇಬ್ಬರಿಗೂ ಉತ್ತರ ಕೊಟ್ಟಿದ್ದಾರೆ" ಎಂದು ಟೀಕಿಸಿದರು.
ಜಮೀರ್ ಹೇಳಿಕೆ ಮೊದಲ ಸಲ ಅಲ್ಲ: "ಜಮೀರ್ ಅಹ್ಮದ್ ಹೇಳಿಕೆ ಇದು ಮೊದಲನೇ ಬಾರಿಯದ್ದಲ್ಲ. ಅವರು ಯಾರ ಮೇಲೆ ಆ ವಿಚಾರವನ್ನು ಹೇಳಿದ್ದರೋ ಅದನ್ನು ಅವತ್ತೇ ಮಾಧ್ಯಮದವರು ಅಥವಾ ಯಾರ ಮೇಲೆ ಆ ವಿಚಾರ ಬಂದಿತ್ತೋ ಅವರಾದರೂ ಹೇಳಬಹುದಿತ್ತು. ಅದು ಬಿಟ್ಟು ಚುನಾವಣೆ ಬಂದಾಗ ನಮ್ಮ ಅಭ್ಯರ್ಥಿಯನ್ನು ಗುರಿಯಾಗಿ ಇಟ್ಟುಕೊಂಡು ಮಾಡುತ್ತಿರುವುದು ಸರಿಯಾ ಎಂಬದು ನಮ್ಮ ವಿಚಾರವಾಗಿತ್ತು" ಎಂದು ಸ್ಪಷ್ಟನೆ ನೀಡಿದರು.
ಜನ ಮನ್ನಣೆ ಕೊಟ್ಟಿದ್ದಾರೆ: "ಅವರ ನಿಲುವು, ಬದ್ಧತೆಗೆ ಕಡಿವಾಣ ಹಾಕಬೇಕು. ರಾಜ್ಯದ ಅಭಿವೃದ್ಧಿಗೆ ಜನ ಮನ್ನಣೆ ಕೊಟ್ಟಿದ್ದಾರೆ. ಗ್ಯಾರಂಟಿ ವಿರುದ್ಧ, ಸಿಎಂ ವಿರುದ್ಧ ಆರೋಪ ಮಾಡುತ್ತಿದ್ದ ಅವರಿಗೆ ಮೂರು ಭಾಗದಿಂದ ಜನ ಸ್ಪಷ್ಟ ಸಂದೇಶ ನೀಡಿದ್ದಾರೆ. ಕಾಂಗ್ರೆಸ್ಗೆ ಗೆಲುವು ಕೊಡುವುದರ ಮೂಲಕ ವಿರೋಧ ಪಕ್ಷಗಳಿಗೆ ಉತ್ತರ ನೀಡಿದ್ದಾರೆ. ನೀವು ಮಾಡುವ ಆರೋಪ ಮತ್ತು ಇಲ್ಲ ಸಲ್ಲದ ಹೇಳಿಕೆಗಳು ಸರಿಯಿಲ್ಲ ಅಂತ ಜನ ನಮಗೆ ಮನ್ನಣೆ ನೀಡಿದ್ದಾರೆ".