ಬೆಂಗಳೂರು: ಇಲ್ಲಿಂದಲೇ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಸಾಷ್ಟಾಂಗ ನಮಸ್ಕಾರ ಹಾಕುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ತಮ್ಮ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಇಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ತೀರ್ಪು ನೀಡಿದ ಬಗ್ಗೆ ಡಿಸಿಎಂ ಪ್ರತಿಕ್ರಿಯಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ನಲ್ಲಿ ರಿಲೀಪ್ ಸಿಕ್ಕಿದೆ ಎಂಬ ಮಾಹಿತಿ ಇದೆ. ನನ್ನ ಮೇಲೆ ಏನು ಕೇಸು ಇತ್ತೋ ಅದು ತಪ್ಪು ಅಂತ ತೀರ್ಪು ಬಂದಿದೆ. ಕೈಗೊಂಡಿರುವ ಕ್ರಮ ಎಲ್ಲವೂ ತಪ್ಪು ಎಂದು ಆದೇಶ ಆಗಿದೆ. ಕಷ್ಟದ ಜೀವನದ ಅತಿ ದೊಡ್ಡ ಸಂತೋಷದ ದಿನ ಇಂದು. ಅಜ್ಜಯ್ಯನ ದರ್ಶನಕ್ಕೆ ಹೋಗುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.
ನಾನು ತಪ್ಪು ಮಾಡಿಲ್ಲ ಅಂತ ಕೋರ್ಟ್ ಹೇಳಿದೆ. ಈಗಲೂ ಸಿಬಿಐ ಏನೇನು ಮಾಡುತ್ತೆ ಅಂತ ಸದ್ಯದಲ್ಲೇ ಹೇಳುತ್ತೇನೆ. ಸುಪ್ರೀಂ ಕೋರ್ಟ್ ತೀರ್ಪಿಗೆ ಮೇಲ್ಮನವಿ ಹಾಕುವ ಪ್ರಯತ್ನ ನಡೆಸುತ್ತಿದ್ದಾರೆ. ನನಗೆ ಮಾರ್ಗ ಕಷ್ಟ ಅನ್ನಿಸಿಲ್ಲ. ಜೈಲಿಗೆ ಹೋದಾಗಲೂ ಆತ್ಮ ವಿಶ್ವಾಸದಲ್ಲಿ ಹೋಗಿದ್ದೆ. ಎಷ್ಟು ತೊಂದರೆ ಕೊಡಲು ಯತ್ನಿಸುತ್ತಾರೆ ಅಷ್ಟು ಗಟ್ಟಿಯಾಗಿ ಬೆಳೆಯಲು ಶಕ್ತಿ ನೀಡುತ್ತದೆ. ನಮ್ಮ ಸುತ್ತಮುತ್ತ ಇರುವವರಿಗೆ ಕಿರುಕುಳ ನೀಡಲಾಗುತ್ತಿದೆ. ನನಗೆ ಯಾರೂ ವಿರೋಧಿಗಳಿಲ್ಲ ಎಂದರು.
ಶಿವಕುಮಾರ್ ವಿರುದ್ಧದ 2018ರ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಇಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಇದರಿಂದಾಗಿ ಈ ಪ್ರಕರಣವನ್ನು ಇನ್ನು ಮುಂದೆ PMLA ಅಡಿ ತನಿಖೆ ಮಾಡಲಾಗುವುದಿಲ್ಲ. ಈ ಪ್ರಕರಣ 2017ರ ಅಗಸ್ಟ್ನಲ್ಲಿ ದೆಹಲಿಯಲ್ಲಿ ಪತ್ತೆಯಾದ ನಗದು ಹಣಕ್ಕೆ ಸಂಬಂಧಿಸಿದ್ದಾಗಿದೆ. ಈ ಕುರಿತು ಅಕ್ರಮ ಹಣ ವರ್ಗಾವಣೆ ಸೆಕ್ಷನ್‌ಗಳ ಅಡಿ ಇಡಿ ತನಿಖೆ ಆರಂಭಿಸಿತ್ತು. ಆದರೆ, ಇದೀಗ ಸುಪ್ರೀಂ ಕೋರ್ಟ್‌ನಿಂದ ಶಿವಕುಮಾರ್‌ಗೆ ಬಿಗ್ ರಿಲೀಫ್ ಸಿಕ್ಕಿದೆ.