ಶಿವಮೊಗ್ಗ:ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ನೆನಪಿನಲ್ಲಿ ತಮ್ಮ ಸ್ವಗ್ರಾಮ ಸೊರಬ ತಾಲೂಕಿನ ಕುಬಟೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಮ್ಮ ಕುಟುಂಬದವರು ಸೇರಿ 10 ಲಕ್ಷ ರೂ. ಮೌಲ್ಯದ ಸ್ಮಾರ್ಟ್ ಟಿವಿ, ಕಂಪ್ಯೂಟರ್, ಸ್ಮಾರ್ಟ್ ಬೋರ್ಡ್, ಆಟ್ಲಾಸ್, ಡೆಸ್ಕ್ ಸೇರಿದಂತೆ ವಿವಿಧ ವಸ್ತುಗಳನ್ನು ''ನನ್ನ ಶಾಲೆ, ನನ್ನ ಜವಾಬ್ದಾರಿ'' ಯೋಜನೆಯಡಿ ಶುಕ್ರವಾರ ವಿತರಿಸಿದರು.
ಶಾಲೆಯಲ್ಲಿ ಸ್ಮಾರ್ಟ್ ಟಿವಿಯನ್ನು ಸಾಂಕೇತಿಕವಾಗಿ ಉದ್ಘಾಟಿಸಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಇಂದು 10 ಲಕ್ಷ ರೂ. ವಸ್ತುಗಳು ನೀಡಿರಬಹುದು. ಮುಂದೆ ಇದೇ ಒಂದು ಸಾವಿರ ಕೋಟಿ ರೂ.ಗೆ ಏರಿಕೆಯಾಗಬಹುದು. ನಾನು ಸರ್ಕಾರಿ ಶಾಲೆಯಲ್ಲಿ ಓದಲೇ ಇಲ್ಲ. ನಮ್ಮ ತಂದೆ ಸರ್ಕಾರಿ ಶಾಲೆಯಲ್ಲಿ ಓದಿ ರಾಜ್ಯವನ್ನು ಆಳಿದ್ದಾರೆ. ನನ್ನ ಪುಣ್ಯ ಇಂತಹ ಸರ್ಕಾರಿ ಶಾಲೆಗಳ ಜವಾಬ್ದಾರಿಯನ್ನು ಸಿಎಂ ನನಗೆ ನೀಡಿದ್ದಾರೆ ಎಂದು ಸಿದ್ದಾಮಯ್ಯನವರಿಗೆ ಧನ್ಯವಾದ ಅರ್ಪಿಸಿದರು.
38 ಸಾವಿರ ಮಕ್ಕಳು ಇಂದು ಸರ್ಕಾರಿ ಶಾಲೆಗೆ ಪ್ರವೇಶ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ 46 ಸಾವಿರ ಶಾಲೆಗಳು ಇವೆ. ಇಷ್ಟು ಶಾಲೆಗೆ ಎಲ್ಲಾ ಪರಿಕರಗಳನ್ನು ನೀಡಲು ಅಸಾಧ್ಯ. ನಮ್ಮ ತಂದೆ ಓದಿರುವ ಶಾಲೆಗೆ ನಮ್ಮ ಋಣ ತೀರಿಸಲು ಇಂದು ಪರಿಕರಗಳನ್ನು ನೀಡುತ್ತಿದ್ದೇವೆ. ಇದೇ ರೀತಿ ಸಾರ್ವಜನಿಕರು ಸಹ ಸಹಕಾರ ನೀಡಬೇಕಿದೆ ಎಂದು ಸಚಿವರು ಕರೆ ನೀಡಿದರು.