ಬೆಂಗಳೂರು: ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಕೆಲದಿನ ಸೇವೆಯನ್ನು ಸಂಪೂರ್ಣ ಸ್ಥಗಿತಗಳಿಸಲಾಗುತ್ತಿದ್ದು, ಕೆಲ ನಿಲ್ದಾಣಗಳಲ್ಲಿ ಸೇವೆ ವ್ಯತ್ಯಯವಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಬೆಂಗಳೂರು ಮೆಟ್ರೋ ರೈಲು ಸಂಸ್ಥೆ ವಿಸ್ತರಿಸಿದ ಹಸಿರು ಮಾರ್ಗದ ನಾಗಸಂದ್ರದಿಂದ ಮಾದಾವರ ನಡುವೆ ಸಿಗ್ನಲಿಂಗ್ ಸಂಬಂಧಿತ ಪರೀಕ್ಷೆಗಳನ್ನು ನಡೆಸಲು ಕೆಲವು ದಿನಗಳಂದು ರೈಲು ಸೇವೆಯ ಸಮಯ ಮತ್ತು ಕಾರ್ಯಾಚರಣೆಯಲ್ಲಿ ಬದಲಾವಣೆಯಾಗಲಿದೆ ಎಂದು ತಿಳಿಸಿದೆ.
ಆಗಸ್ಟ್ 20, 23, 30 ರಂದು ಹಾಗೂ ಸೆಪ್ಟೆಂಬರ್ 6 ಮತ್ತು 11 ರಂದು ಇಡೀ ದಿನ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಪೀಣ್ಯ ಇಂಡಸ್ಟ್ರಿ ಕಡೆಗೆ ಆಗಸ್ಟ್ 24ರಂದು ಕೊನೆಯ ರೈಲು ಸೇವೆ ರಾತ್ರಿ 11.5ರ ಬದಲಾಗಿ 10 ಗಂಟೆಗೆ ಇರಲಿದೆ. ಆಗಸ್ಟ್ 25 ರಂದು ಮೊದಲ ರೈಲು ಸೇವೆ ಬೆಳಗ್ಗೆ 5 ಗಂಟೆಯ ಬದಲಾಗಿ 6 ಗಂಟೆಗೆ ಪ್ರಾರಂಭವಾಗಲಿದೆ. ಇನ್ನು ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆವರೆಗೆ ಆಗಸ್ಟ್ 24ರಂದು ಕೊನೆಯ ರೈಲು ಸೇವೆ 11.12ಕ್ಕೆ ಇರಲಿದೆ. ಆಗಸ್ಟ್ 25 ರಂದು ಮೊದಲ ರೈಲು ಸೇವೆ ಬೆಳಗ್ಗೆ 5ಕ್ಕೆ ಪ್ರಾರಂಭವಾಗಲಿದೆ. ಉಳಿದಂತೆ ನೇರಳೆ ಮಾರ್ಗದ ಮೆಟ್ರೋ ಸೇವೆಯಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಮಾಹಿತಿ ನೀಡಿದೆ.