ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಗೆದ್ದಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ತ್ಯಜಿಸಬೇಕಾಗಿದೆ. ಅದೇ ರೀತಿ ವಿಧಾನಸಭಾ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಲಿದ್ದಾರೆ. ಇದರಿಂದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ತೆರವಾಗಲಿದೆ. ಜೆಡಿಎಸ್‌ನ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಯಾರಾಗಬಹುದು ಎಂಬ ಚರ್ಚೆ ಆರಂಭಗೊಂಡ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆಯ ವಿಚಾರವೂ ಮುನ್ನಲೆಗೆ ಬಂದಿದೆ.
ಕೇಂದ್ರ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರಾಗಿರುವ ಕುಮಾರಸ್ವಾಮಿ, ಈ ಜವಾಬ್ದಾರಿ ನಿರ್ವಹಿಸುವ ಹಿನ್ನೆಲೆಯಲ್ಲಿ ಪಕ್ಷದ ಕಡೆಗೆ ಗಮನ ಕೊಡುವುದು ಕಷ್ಟ. ಅಲ್ಲದೆ, ಬಹುಕಾಲ ನವದೆಹಲಿ ಹಾಗೂ ಬೇರೆ ಬೇರೆ ರಾಜ್ಯಗಳ ಪ್ರವಾಸ ಕೈಗೊಳ್ಳಬೇಕಾಗಿರುವುದರಿಂದ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದುಕೊಂಡು ಪಕ್ಷ ಸಂಘಟನೆ, ಬಲವರ್ಧನೆ ಮತ್ತು ನಿರ್ವಹಣೆ ಸುಲಭದ ಮಾತಲ್ಲ.
ಈ ಕಾರಣಕ್ಕೆ ಪಕ್ಷ ಸಂಘಟನೆ ಜವಾಬ್ದಾರಿಯನ್ನು ನಿಖಿಲ್ ಕುಮಾರಸ್ವಾಮಿಗೆ ಕೊಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ ಪಕ್ಷದ ರಥ ಮುನ್ನಡೆಸುವ ಹೊಣೆಗಾರಿಕೆಯನ್ನು ಯಾರಿಗೆ ಕೊಡಬೇಕು ಎಂಬ ಕುರಿತು ಇನ್ನೂ ಚಿಂತನೆ ಆರಂಭವಾಗಿಲ್ಲ. ನಿಖಿಲ್ ಅವರಿಗೆ ಬಡ್ತಿ ನೀಡಿ ರಾಜ್ಯಾಧ್ಯಕ್ಷ ಸ್ಥಾನ ನೀಡುವುದರ ಜೊತೆಗೆ ಪಕ್ಷ ಸಂಘಟನೆಯ ಜವಾಬ್ದಾರಿ ವಹಿಸಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಹಿರಿಯ ಶಾಸಕರಾದ ಹೆಚ್.ಡಿ.ರೇವಣ್ಣ, ಜಿ.ಟಿ.ದೇವೇಗೌಡ ಹಾಗೂ ವೆಂಕಟಶಿವಾರೆಡ್ಡಿ ಅವರ ಹೆಸರುಗಳು ಪ್ರಸ್ತಾಪವಾಗುತ್ತಿವೆ. ಪ್ರಸ್ತುತವಾಗಿ ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದು, ವಿಧಾನಪರಿಷತ್ ಚುನಾವಣೆಯಲ್ಲಿ ಮೂರು ಮಂದಿ ಒಕ್ಕಲಿಗರಿಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನವನ್ನು ಒಕ್ಕಲಿಗರ ಬದಲಿಗೆ ಬೇರೆ ಸಮುದಾಯಕ್ಕೆ ನೀಡುವುದು ಸೂಕ್ತ ಎಂದು ಪಕ್ಷದ ವಲಯದಲ್ಲಿ ಚರ್ಚೆಯಾಗುತ್ತಿದೆ.