ಬೆಂಗಳೂರು: ಅನುದಾನ ಕೊರತೆ ಸಂಬಂಧ ಬಹಿರಂಗ ಹೇಳಿಕೆ ನೀಡಿದರೆ ಶಿಸ್ತು ಕ್ರಮ ಜರುಗಿಸುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಅನುದಾನ ಕೊರತೆ ಬಗ್ಗೆ ಕೈ ಶಾಸಕ ಗವಿಯಪ್ಪ ಬೇಸರ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಗವಿಯಪ್ಪ ಹಾಗೆ ಹೇಳಿದ್ದಾರೆ ಅಂತ ನಾನು ಅಂದುಕೊಳ್ಳಲ್ಲ. ನಮ್ಮ ಪಕ್ಷ ಈಗಾಗಲೇ ಬಜೆಟ್ ಘೋಷಣೆ ಮಾಡಿದೆ.
ಅದರ ಅಡಿಯಲ್ಲಿ ಅನುದಾನ ಹಂಚಿಕೆ ಆಗುತ್ತದೆ. ಗ್ಯಾರಂಟಿ ನಿಲ್ಲಿಸುವಂತೆ ಹೇಳಿದ್ದಾರೆ ಅಂತ ನಾನು ಒಪ್ಪಲ್ಲ. ಎಲ್ಲ ಶಾಸಕರಿಗೂ ಅನುದಾನವನ್ನು ನೀಡಿದ್ದೇವೆ. ಗವಿಯಪ್ಪಗೆ ಸರಿಯಾದ ಮಾಹಿತಿ ಇಲ್ಲ ಅನ್ಸುತ್ತೆ. ಅಭಿವೃದ್ಧಿಗೆ ಅನುದಾನ ನೀಡುತ್ತಿದ್ದೇವೆ. ಗವಿಯಪ್ಪ ಜೊತೆಗೆ ನಾನು ಮಾತನಾಡುತ್ತೇನೆ. ಅವರಿಂದ ಸ್ಪಷ್ಟನೆ ಕೇಳುತ್ತೇನೆ. ಬೇರೆ ಯಾವುದೇ ಶಾಸಕರು ಬಹಿರಂಗವಾಗಿ ಹೇಳಿಕೆ ನೀಡಿದ್ರೆ, ಶಿಸ್ತು ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಗ್ಯಾರಂಟಿ ನಿಲ್ಲಿಸಿ ಅಂದಿರೋದು ಗೊತ್ತಿಲ್ಲ. ಏನು ಹೇಳಿದ್ದಾರೆ ಅವರಿಂದ ಕೇಳ್ತೇವೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸಲ್ಲ. ಪ್ರತಿವರ್ಷ 250 ಕೋಟಿ ರೂ. ಕೊಡುತ್ತಿದ್ದೇವೆ. ಒಂದೊಂದು ಕ್ಷೇತ್ರಕ್ಕೆ 250 ಕೋಟಿ ಹೋಗ್ತಿದೆ. ಅನುದಾನದ ವಿಚಾರದಲ್ಲಿ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಜಾರ್ಖಂಡ್ ಸಿಎಂ ಪದಗ್ರಹಣದಲ್ಲಿ ಭಾಗಿ:ಜಾರ್ಖಂಡ್ ನೂತನ ಸಿಎಂ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇನೆ ಎಂದು ಡಿಸಿಎಂ ಇದೇ ವೇಳೆ ತಿಳಿಸಿದರು. ಡಿಸೆಂಬರ್ 28 ರಂದು ನಡೆಯುವ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸ್ತೇನೆ. ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲ್ಲ ಎಂದರು.