ಬೆಂಗಳೂರು:ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸದಾಶಿವನಗರ ನಿವಾಸದಲ್ಲಿ ಸಚಿವರುಗಳಿಗೆ ಬುಧವಾರ ಡಿನ್ನರ್ ಮೀಟಿಂಗ್ ಏರ್ಪಡಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಬಹುತೇಕ ಎಲ್ಲಾ ಸಚಿವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆದಿದೆ. ಚುನಾವಣಾ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ರಾಜ್ಯ ಪ್ರವಾಸ ಮಾಡಬೇಕು. ತಮ್ಮ ಇಲಾಖೆಗಳ ಪ್ರಗತಿ ಪರಿಶೀಲನೆ ಮೂಲಕ ಆಡಳಿತಕ್ಕೆ ಚುರುಕು ನೀಡಬೇಕು ಎಂದು ಸಚಿವರಿಗೆ ಸಿಎಂ ಕಿವಿಮಾತು ಹೇಳಿದರು.
ಆಡಳಿತದ ಬಗ್ಗೆ ಪ್ರತಿಪಕ್ಷಗಳು ಇಲ್ಲಸಲ್ಲದ ಆರೋಪ ಮಾಡುತ್ತಿವೆ. ಒಳ್ಳೆಯ ಆಡಳಿತ ನೀಡುತ್ತಿದ್ದರೂ ಬಿಜೆಪಿ, ಜೆಡಿಎಸ್ನವರು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ವಿರೋಧ ಪಕ್ಷಗಳ ನಾಯಕರು ಸರ್ಕಾರಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಪ್ರತಿಪಕ್ಷ ನಾಯಕರ ಟೀಕೆ, ಟಿಪ್ಪಣಿಗಳಿಗೆ ಸಮರ್ಥವಾಗಿ ತಿರುಗೇಟು ನೀಡಬೇಕು. ಸಂದರ್ಭಾನುಸಾರವಾಗಿ ಕೌಂಟರ್ ಕೊಡಬೇಕು ಎಂದು ಸೂಚಿಸಿದರು.
ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಲಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮುನ್ನೆಚ್ಚರಿಕೆ ವಹಿಸಬೇಕಿದೆ. ಈಗಿನಿಂದಲೇ ಜನರ ಸಮಸ್ಯೆಗಳತ್ತ ಗಮನಹರಿಸಬೇಕು. ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮತ್ತು ವಿತರಣೆಯಾಗುವಂತೆ ಗಮನವಹಿಸಬೇಕು ಎಂದು ತಿಳಿಸಿದ್ದಾರೆ.