ಬೆಂಗಳೂರು:ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ಘೋಷಣೆ ಮಾಡಿದ್ದಾರೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಶ್ರೀಗಳು, "ಎರಡೂ ರಾಷ್ಟ್ರೀಯ ಪಕ್ಷಗಳು ಎಲೆಕ್ಷನ್ ಫಿಕ್ಸಿಂಗ್ ಮಾಡಿಕೊಂಡಿವೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದು ಮತದಾರರಿಗೆ ಮಾಡಿದ ದ್ರೋಹವಾಗಿದೆ. ಈಗಾಗಲೇ ಎರಡು ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿ ಘೋಷಣೆ ಮಾಡಿವೆ. ಆದರೆ ಮತದಾರರು ನಮ್ಮನ್ನು ಚುನಾವಣೆಗೆ ನಿಲ್ಲಿಸುವ ನಿರ್ಧಾರ ಮಾಡಿದ್ದಾರೆ. ಹಾಗಾಗಿ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ, ಸ್ವಾರ್ಥಿ ರಾಜಕಾರಣಿಗಳ ವಿರುದ್ಧ, ಸ್ವಾಭಿಮಾನಿ ಧರ್ಮಗುರುಗಳು ಮಾಡಿದ ಧರ್ಮಯುದ್ಧ ಘೋಷಣೆ ಇದಾಗಿದೆ. ಈ ಧರ್ಮಯುದ್ದ ಕೇವಲ ಈ ಚುನಾವಣೆಗೆ ಸೀಮಿತವಾಗಿಲ್ಲ. ಜೀವ ಇರುವವರೆಗೂ ಮುಂದುವರೆಯಲಿದೆ, ನೊಂದವರ ಕಷ್ಟಕ್ಕೆ ಸ್ಪಂಧಿಸಲು ರಾಜಕೀಯಕ್ಕೆ ಬರುತ್ತಿದ್ದೇನೆ" ಎಂದರು.
"ರಾಜ್ಯದಲ್ಲಿ ಲಿಂಗಾಯತ, ಗೌಡ ಜನಾಂಗ ಬಿಟ್ಟರೆ ಕುರುಬ ಸಮಾಜ ದೊಡ್ಡದಿದೆ. ಆದರೆ ಕುರುಬ ಸಮಾಜಕ್ಕೆ ಒಂದೇ ಒಂದು ಟಿಕೆಟ್ ಬಿಜೆಪಿ ನೀಡಿಲ್ಲ, ರೆಡ್ಡಿ, ಜಂಗಮ, ಲಂಬಾಣಿ ಸೇರು ನೂರಾರು ಸಮಾಜ ಅಲಕ್ಷ್ಯಕ್ಕೆ ಒಳಗಾಗಿದೆ. ಎಲ್ಲ ಸಮಾಜಗಳು ಇಂದು ಬಿಜೆಪಿಯಿಂದ ನೋವು ಅನುಭವಿಸಿವೆ. ಈಶ್ವರಪ್ಪಗೆ ಟಿಕೆಟ್ ಕೊಡಲಿಲ್ಲ, ಅವರ ಪುತ್ರ ಹಾವೇರಿಯಲ್ಲಿ ಒಂದೂವರೆ ವರ್ಷ ಕೆಲಸ ಮಾಡಿದರೂ ವಂಚನೆ ಮಾಡಲಾಯಿತು. ರಾಷ್ಟ್ರೀಯ ನಾಯಕರು ಆ ಜಾತಿ ಅವಶ್ಯಕತೆ ನಮಗಿಲ್ಲ. ಈ ಜಾತಿ ಅವಶ್ಯಕತೆ ನಮಗಿಲ್ಲ ಎನ್ನುವ ಹೇಳಿಕೆ ನೀಡಿದ್ದಾರೆ. ದೊಡ್ಡ ಸಂಖ್ಯೆ ಇರುವ ಸಮುದಾಯದ ಜನರಿಗೆ ಟಿಕೆಟ್ ನೀಡದೆ ಕಡಿಮೆ ಜನಸಂಖ್ಯೆ ಇರುವ ಜಾತಿಗೆ ಮೂರು ಟಿಕೆಟ್ ಕೊಟ್ಟಿದ್ದಾರೆ. ಎಲ್ಲಿದೆ ಸಾಮಾಜಿಕ ನ್ಯಾಯ" ಎಂದು ಪ್ರಶ್ನಿಸಿದರು.
"ಕಳೆದ ಬಾರಿ 9 ಸಂಸದರು ವೀರಶೈವ ಲಿಂಗಾಯತ ಸಮುದಾಯದಿಂದ ಆಯ್ಕೆಯಾದರು. ಆದರೆ ಒಬ್ಬರಿಗೂ ಸಂಪುಟ ದರ್ಜೆ ಸಚಿವ ಸ್ಥಾನ ಕೊಡಲಿಲ್ಲ. ಎರಡು ಪರ್ಸೆಂಟ್ ಜನ ಇರುವವರಿಗೆ ಸಂಪುಟದಲ್ಲಿ ಎರಡು ಸ್ಥಾನ ನೀಡಿದ್ದು, ಎಲ್ಲರಿಗೂ ಇವರ ಧೋರಣೆ ಗೊತ್ತಿದೆ. ವೀರಶೈವ ಸಮುದಾಯ ಮತ್ತು ಇತರ ಸಮುದಾಯ ಬಳಸಿಕೊಂಡು ನಂತರ ಕೈಬಿಡುವುದು ಸಾಮಾಜಿಕ ನ್ಯಾಯಕ್ಕೆ ಮಾಡಿದ ದ್ರೋಹವಾಗಿದೆ" ಎಂದು ಟೀಕಿಸಿದರು.
"ಶಿಕ್ಷಣ ಖಾತೆ ತಾವಿಟ್ಟುಕೊಂಡು ಪಶುಸಂಗೋಪನೆ, ಅರಣ್ಯದಂತಹ ಖಾತೆಗಳನ್ನು ಲಂಬಾಣಿ ಸಮುದಾಯಕ್ಕೆ ಕೊಡುತ್ತಾ ಬರುತ್ತಿದ್ದಾರೆ. ಶಿಕ್ಷಣ ಕೇವಲ ನಮ್ಮ ಸ್ವತ್ತು ಎನ್ನುವುದು ಸಾವಿರಾರು ವರ್ಷಗಳ ಭ್ರಮೆ ಅವರದ್ದಾಗಿದೆ. ಪಶುಸಂಗೋಪನೆಯಂತಹ ಖಾತೆ ದಲಿತರಿಗೆ ಮೀಸಲು ಎನ್ನುವಂತೆ ನೋಡಿಕೊಂಡು ಬಂದಿದ್ದಾರೆ. ಸೋಮಣ್ಣಗೆ ಬೆಂಗಳೂರು ದಕ್ಷಿಣದಲ್ಲಿ ಕೊಡುವುದು ಬಿಟ್ಟು ತುಮಕೂರಿನಲ್ಲಿ ಟಿಕೆಟ್ ಕೊಡಲಾಗಿದೆ. ಇದರಿಂದ ಅಲ್ಲಿ ಲಿಂಗಾಯತ ನಾಯಕರು, ಸೋಮಣ್ಣ ನಡುವೆ ಮನಸ್ತಾಪ ಆಗುವಂತೆ ಮಾಡಿದ್ದಾರೆ".
"ಲಿಂಗಾಯತರು ಹೆಚ್ಚಿರುವ ಕಡೆ ಪ್ರಹ್ಲಾದ್ ಜೋಶಿಯನ್ನು ನಿಲ್ಲಿಸಿದ್ದಾರೆ. ಅದರಂತೆ ಬ್ರಾಹ್ಮಣ ಪ್ರಾಬಲ್ಯ ಇರುವ ಕಡೆ ಲಿಂಗಾಯತ ಸೇರಿ ಇತರ ಸಮುದಾಯದವರನ್ನು ಯಾಕೆ ನಿಲ್ಲಿಸಲು ಮುಂದಾಗಲಿಲ್ಲ. ತೇಜಸ್ವಿ ಸೂರ್ಯರನ್ನು ಇಲ್ಲಿ ನಿಲ್ಲಿಸುವ ಬದಲು ಸೋಮಣ್ಣಗೆ ಟಿಕೆಟ್ ನೀಡಿ ತೇಜಸ್ವಿಗೆ ತುಮಕೂರಿಗೆ ಕಳಿಸಿದ್ದರೆ ಆಗ ಯಾರ ತಾಕತ್ತು ಎಷ್ಟು ಎಂಬದು ನೋಡಬಹುದಿತ್ತು. ಮತ ಹಾಕಲು ಲಿಂಗಾಯತ ಸೇರಿ ಇತರ ಸಮುದಾಯ ಬೇಕು. ಆಳಲಿಕ್ಕೆ ಮಾತ್ರ ಇವರು ಬೇಕು ಎನ್ನುವ ಧೋರಣೆ ಇವರದ್ದು" ಎಂದು ಕಿಡಿಕಾರಿದರು.
"ಕೊಪ್ಪಳ, ದಾವಣಗೆರೆ, ಹಾವೇರಿಯಲ್ಲಿ ಎರಡು ಮೂರು ಹಂತದಲ್ಲಿ ಲಿಂಗಾಯತ ಸಮುದಾಯ ಮುಗಿಸುವ ಕೆಲಸ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಇವರಾದರೆ ಐದು ಅವಧಿ ಹತ್ತು ಅವಧಿಯಾದರೂ ಸರಿ ಅರ್ಹರು ಎಂದು ತೋರಿಸಿಕೊಂಡ ಬರುತ್ತಿದೆ. 99 ಉಪ ಪಂಗಡ ಲಿಂಗಾಯದದಲ್ಲಿ ಇವೆ, ಇದರಲ್ಲಿ 16 ಸಮುದಾಯ ಮಾತ್ರ ಕೇಂದ್ರದ ಒಬಿಸಿ ಪಟ್ಟಿಯಲ್ಲಿವೆ. ಇತರ ಒಳಪಂಗಡಗಳ ಸೇರಿಸುವ ಪ್ರಯತ್ನಕ್ಕೆ ಜೋಶಿ ಸಾಥ್ ನೀಡಿಲ್ಲ. ಜೋಶಿ ಒಡೆದಾಳುವಲ್ಲಿ ಹೀರೋ ಆಗಿ, ಅಭಿವೃದ್ಧಿ ವಿಚಾರದಲ್ಲಿ ಜೀರೋ ಆಗಿದ್ದಾರೆ" ಎಂದು ಟೀಕಿಸಿದರು.