ಹುಬ್ಬಳ್ಳಿ:ನಾನು ಲೋಕಸಭೆ ಚುನಾವಣೆಗೆ ಸಲ್ಲಿಸಿರುವ ನಾಮಪತ್ರ ವಾಪಸ್ ಪಡೆದಿದ್ದೇನೆ. ಆದರೆ ಜೋಶಿ ವಿರುದ್ಧ ಧರ್ಮಯುದ್ಧದಿಂದ ಹಿಂದೆ ಸರಿದಿಲ್ಲ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಗುರುಗಳ ಸೂಚನೆಯಂತೆ ನಾಮಪತ್ರ ವಾಪಸ್: ಮೋಹನ ಲಿಂಬಿಕಾಯಿ ನಿವಾಸದಲ್ಲಿ ಇಂದು ಮಾತನಾಡಿದ ಅವರು, ನಾಮಪತ್ರ ಸಲ್ಲಿಕೆಯ ನಂತರವೂ ಎರಡು ಪಕ್ಷದ ನಾಯಕರು ನಮ್ಮೊಂದಿಗೆ ಚರ್ಚಿಸಿದ್ದರು. ನಿನ್ನೆ ಸಿಎಂ, ಡಿಸಿಎಂ, ಮಾಜಿ ಸಿಎಂ ಕೂಡ ಮಾತಾಡಿದ್ದರು. ಎಲ್ಲ ವಿಚಾರಕ್ಕೆ ನಾನು ಉತ್ತರ ಕೊಟ್ಟಿದ್ದೆ. ನಮ್ಮ ಗುರುಗಳು ನನಗೆ ನಾಮಪತ್ರ ವಾಪಸ್ ಪಡೆಯಲು ಸೂಚನೆ ಕೊಟ್ಟಿದ್ದರು. ಹೀಗಾಗಿ ವಾಪಸ್ ಪಡೆದಿದ್ದೇನೆ. ಚುನಾವಣೆ ಒಂದನ್ನು ಹೊರತುಪಡಿಸಿ ಎಲ್ಲ ವಿಚಾರದಲ್ಲೂ ಧರ್ಮಯುದ್ಧ ಮುಂದುವರೆಯುತ್ತದೆ ಎಂದರು.
ಧರ್ಮಯುದ್ಧದಲ್ಲಿ ಜಯ ಸಿಗುವವರೆಗೂ ಮಾಲೆ ಧರಿಸಲ್ಲ: ಎರಡೂ ಪಕ್ಷದವರೂ ತಮ್ಮನ್ನು ಬೆಂಬಲಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ಹಿಂದೆ ಯಾರು ನನಗೆ ಸಪೋರ್ಟ್ ಮಾಡಿದ್ದರೋ ಅವರ ಜೊತೆ ನಾನು ಸಭೆ ಮಾಡ್ತೀನಿ. ರಾಜಕೀಯದಲ್ಲಿ ಬದಲಾವಣೆ ಸರ್ವೇ ಸಾಮಾನ್ಯ. ನನ್ನನ್ನು ಹಿಂದೆ ಸರಿಸುವ ವ್ಯಕ್ತಿ ರಾಜಕೀಯ ರಂಗದಲ್ಲಿಲ್ಲ ಎಂದಿದ್ದೆ. ಈಗಲೂ ಅದಕ್ಕೆ ನಾನು ಬದ್ಧ. ನಾನು ರಾಜಕೀಯ ನಾಯಕರ ಮಾತು ಕೇಳಿ ನಾಮಪತ್ರ ವಾಪಸ್ ಪಡೆದಿಲ್ಲ. ನನ್ನ ಗುರಿ ಮುಟ್ಟುವವರೆಗೂ ಹೂಮಾಲೆ ಧರಿಸುವುದಿಲ್ಲ. ಧರ್ಮಯುದ್ಧದಲ್ಲಿ ಜಯ ಸಿಗುವವರೆಗೂ ಮಾಲೆ ಧರಿಸಲ್ಲ ಎಂದು ಹೇಳಿದರು.