ಬೆಂಗಳೂರು: ಕ್ಯಾನ್ಸರ್ ತಪಾಸಣೆ ಮಾಡಿಕೊಳ್ಳುವುದು ಉತ್ತಮ ಕ್ರಮವಾಗಿದೆ. ಮಹಿಳೆಯರಿಗೆ ಸ್ತನ ಮತ್ತು ಓರಲ್ ಕ್ಯಾನ್ಸರ್ನ ಉಚಿತ ತಪಾಸಣೆ ಮಾಡಿಸಿಕೊಳ್ಳಲು ಆರೋಗ್ಯ ಇಲಾಖೆಯಿಂದ ಸಹಕಾರ ನೀಡಲಾಗುತ್ತಿದೆ. ಮೊದಲನೆ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾದರೆ, ಚಿಕಿತ್ಸೆ ಕಡಿಮೆ ವೆಚ್ಚದಾಯಕವಾಗಿರುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ನಗರದ ರಾಹುಲ್ ಗಾಂಧಿ ಅಭಿಮಾನಿಗಳ ವೇದಿಕೆ - ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ವತಿಯಿಂದ ಇಂದು ಕುರುಬರಹಳ್ಳಿ ಬಯಲು ರಂಗಮಂದಿರದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ರಕ್ತ ಪರೀಕ್ಷೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಮನುಷ್ಯರು ಆರೋಗ್ಯವಂತರಾಗಿರಲು ಆರೋಗ್ಯ ತಪಾಸಣೆಯ ಅವಶ್ಯಕತೆ ಇದೆ. ಜನರು ಭಯಪಡದೇ ವೈದ್ಯಕೀಯ ತಪಾಸಣೆಯನ್ನು ಸಕಾಲಕ್ಕೆ ಮಾಡಿಸಿಕೊಂಡು, ನ್ಯೂನತೆ ಇದ್ದರೆ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ ಆರೋಗ್ಯಕ್ಕೆ ಅವಶ್ಯವಾಗಿದೆ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಸರ್ಕಾರದ 5 ಗ್ಯಾರೆಂಟಿ ಯೋಜನೆ ಜನರಿಗೆ ಸಹಕಾರಿಯಾಗಿದೆ. ಆಶಾಕಿರಣ ಕಾರ್ಯಕ್ರಮ ಯೋಜನೆ ಕೂಡ ಜಾರಿಗೆ ತರಲಾಗುತ್ತಿದೆ. ಈವರೆಗೆ 1 ಕೋಟಿ ಜನರಿಗೆ ತಪಾಸಣೆ ಮಾಡಿಸಲಾಗಿದೆ. ಕರ್ನಾಟಕದ ಸಮಸ್ತ ಜನರಿಗೆ ಕಣ್ಣಿನ ತಪಾಸಣೆ ಮಾಡಿ, ಅವಶ್ಯಕತೆ ಇರುವವರಿಗೆ ಕನ್ನಡಕ ವಿತರಿಸುವ ಯೋಚನೆ ಸರ್ಕಾರಕ್ಕಿದೆ. ಉಚಿತ ಆರೋಗ್ಯ ತಪಾಸಣೆ ಶಿಬಿರಗಳಿಗೆ ಆರೋಗ್ಯ ಇಲಾಖೆಯ ಸಂಪೂರ್ಣ ಸಹಕಾರವಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಸಲೀಮ್ ಅಹಮದ್ ಮಾತನಾಡಿ, ಕಾಂಗ್ರೆಸ್ ಸರ್ಕಾರ 9 ತಿಂಗಳಿನಲ್ಲಿ ಜನರ ವಿಶ್ವಾಸ ಗಳಿಸಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 5 ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲಾಗಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಸಿದ್ಧಾಂತದ ಮೇಲೆ ಸರ್ಕಾರ ನಡೆಯುತ್ತಿದೆ ಎಂದು ಹೇಳಿದರು.