ಕರ್ನಾಟಕ

karnataka

ETV Bharat / state

ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಪ್ರಕರಣ: 1.50 ಕೋಟಿ ವಂಚನೆ, ಆರೋಪಿಗಳು ಅರೆಸ್ಟ್ - DIGITAL ARREST

ಡಿಜಿಟಲ್ ಅರೆಸ್ಟ್ ಮೂಲಕ 68 ಲಕ್ಷ ರೂ. ವಂಚಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Digital Arrest Fake CBI Officer
ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಪ್ರಕರಣ (ETV Bharat)

By ETV Bharat Karnataka Team

Published : Nov 16, 2024, 11:20 AM IST

ಮಂಗಳೂರು:ಸಿಬಿಐ ಅಧಿಕಾರಿ ಎಂದು ಫೋನ್ ಮಾಡಿ ಬೆದರಿಸಿದ್ದಲ್ಲದೇ, ಡಿಜಿಟಲ್ ಅರೆಸ್ಟ್ ಮೂಲಕ ಲಕ್ಷಾಂತರ ಹಣ ವಂಚಿಸಿದ ಆರೋಪಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಕೇರಳದ ಎರ್ನಾಕುಲಂ ಜಿಲ್ಲೆಯ ಆಲುವಾ ತಾಲೂಕಿನ ನಿಸಾರ್ ಬಂಧಿತ ಆರೋಪಿ.

ತಾನು ಸಿಬಿಐ ಅಧಿಕಾರಿ ಎಂದು ಕರೆ ಮಾಡಿ ಹೆದರಿಸಿದ್ದ ವ್ಯಕ್ತಿ ಬಳಿಕ ಡಿಜಿಟಲ್ ಅರೆಸ್ಟ್ ಮಾಡಿ ಸುಮಾರು 68 ಲಕ್ಷದಷ್ಟು ಹಣವನ್ನು ಸುಲಿಗೆ ಮಾಡಿದ್ದರು. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ನಕಲಿ ಷೇರು ಮಾರುಕಟ್ಟೆ ಪ್ರಕರಣ: ಇಬ್ಬರ ಬಂಧನ

ಷೇರು ಮಾರುಕಟ್ಟೆಯಲ್ಲಿ ಹಣ ಹಾಕಿ ಹೆಚ್ಚಿನ ಲಾಭಾಂಶ ಕೊಡುವುದಾಗಿ ನಂಬಿಸಿ ಸುಮಾರು 90 ಲಕ್ಷದಷ್ಟು ಹಣವನ್ನು ವಂಚನೆ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಕೇರಳದ ಕೋಝಿಕೋಡ್ ನಿವಾಸಿ ಸಾಹಿಲ್ ಕೆ ಪಿ ಮತ್ತು ಕೋಯಿಲಾಂಡಿ ನಿವಾಸಿ ಮುಹಮ್ಮದ್ ನಶಾತ್ ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಕೇರಳದಲ್ಲಿ ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಜಿಲ್ಲೆಯ ಮೊದಲ ಡಿಜಿಟಲ್ ಅರೆಸ್ಟ್ ಪ್ರಕರಣ ಬೇಧಿಸಿದ ಸಿಇಎನ್ ಪೊಲೀಸರು

ಪಾರ್ಟ್​ ಟೈಮ್ ಜಾಬ್ ಹೆಸರಲ್ಲಿ 28 ಲಕ್ಷ ರೂ ವಂಚನೆ: ಐವರ ಬಂಧನ

ಪಾರ್ಟ್​ ಟೈಮ್ ಜಾಬ್ ಹೆಸರಲ್ಲಿ 28 ಲಕ್ಷ ರೂ ವಂಚಿಸಿದ ಪ್ರಕರಣದಲ್ಲಿ ಐವರನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಸೈಯ್ಯದ್ ಮಹಮೂದ್, ಶುಯೇಬ್, ಮೊಹಮ್ಮದ್ ಶಾರೀಕ್ ಅಹಮ್ಮದ್, ಮೊಹ್ಸೀನ್ ಅಹಮ್ಮದ್ ಖಾನ್ ಮತ್ತು ಮೊಹಮ್ಮದ್ ಅಜಂ ಬಂಧಿತರು.

2024 ಜುಲೈ 21 ರಂದು ಪಾರ್ಟ್​ ಟೈಮ್ ಜಾಬ್ ಬಗ್ಗೆ ವ್ಯಕ್ತಿಯೊಬ್ಬರಿಗೆ ವಾಟ್ಸಾಪ್ ಮೆಸೇಜ್ ಬಂದಿತ್ತು. ಈ ಮೆಸೇಜ್​​ನಲ್ಲಿ ಟೆಲಿಗ್ರಾಮ್ ಆ್ಯಪ್​ನ ಲಿಂಕ್ ಕಳುಹಿಸಿ ಓಪನ್ ಮಾಡುವಂತೆ ತಿಳಿಸಿದ್ದು, ಅದರಂತೆ ವ್ಯಕ್ತಿ ಟೆಲಿಗ್ರಾಮ್ ಓಪನ್ ಮಾಡಿದ್ದರು. ಅದರಲ್ಲಿ ಒಂದು ವಿಡಿಯೋ ಕಳುಹಿಸಿ ಅದನ್ನು ನೋಡಿ ಸ್ಕ್ರೀನ್ ಶಾಟ್ ಕಳುಹಿಸಲು ಹೇಳಿದ್ದು, ಅವರಿಗೆ ಸ್ಕ್ರೀನ್ ಶಾಟ್ ಅನ್ನು ಕಳುಹಿಸಿದ ತಕ್ಷಣ ಅವರ ಬ್ಯಾಂಕ್​​ನ ಖಾತೆಗೆ 130 ರೂ ವರ್ಗಾವಣೆ ಮಾಡಿದ್ದರು. ನಂತರ ಹಾಕಿದ ವಿಡಿಯೋ ತಪ್ಪಾಗಿದೆ ಎಂದು ಹೇಳಿ ಅದನ್ನು ಸರಿ ಮಾಡಲು ಟೆಲಿಗ್ರಾಮ್ ಲಿಂಕ್ ಕಳುಹಿಸಿದ್ದು, ಈ ಲಿಂಕ್ ಓಪನ್ ಮಾಡಿದಾಗ ಆರೋಪಿಗಳು 1000 ರೂ ಮೊತ್ತ ಹಾಕಲು ಹೇಳಿದ್ದರು. ಅದರಂತೆ ಈ ವ್ಯಕ್ತಿ ತಮ್ಮ ಬ್ಯಾಂಕ್​​ ಖಾತೆಯಿಂದ ಹಂತ ಹಂತವಾಗಿ ಆರೋಪಿಗಳು ನೀಡಿದ ಬೇರೆ ಬೇರೆ ಖಾತೆಗೆ ಹೆಚ್ಚು ಹಣವನ್ನು ಕೊಡುವುದಾಗಿ ನಂಬಿಸಿ ಒಟ್ಟು 28 ಲಕ್ಷ ರೂ ಹಣವನ್ನು ತಮ್ಮ ಖಾತೆಗೆ ಹಾಕಿಸಿಕೊಂಡಿದ್ದರು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಐಟಿ ಕಾಯಿದೆಯಂತೆ ದೂರು ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಕೊಣಾಜೆ ಠಾಣೆಯ ಪಿಐ ರಾಜೇಂದ್ರ ಬಿ ಅವರು ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆ ಹಾಗೂ ಇತರ ಮಾಹಿತಿಗಳ ಆಧಾರದ ಮೇಲೆ ಮೈಸೂರು ಉದಯಗಿರಿ ಮೂಲದ ನಾಲ್ಕು ಆರೋಪಿಗಳು ಮತ್ತು ಬೆಂಗಳೂರು ನೀಲಸಂದ್ರ ಮೂಲದ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ABOUT THE AUTHOR

...view details