ಬೆಳಗಾವಿ: ರಾಜ್ಯ ರಾಜಕಾರಣದ ಪ್ರಮುಖ ಶಕ್ತಿ ಕೇಂದ್ರ ಬೆಳಗಾವಿ. ಅಧಿಕಾರಿಗಳ ಯಡವಟ್ಟಿನಿಂದ ಇಲ್ಲಿನ ಮಹಾನಗರ ಪಾಲಿಕೆಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ರಸ್ತೆ ಕಾಮಗಾರಿ ಭೂಸ್ವಾಧೀನ ವಿಚಾರದಲ್ಲಿ ಅಧಿಕಾರಿಗಳ ತಪ್ಪು ನಿರ್ಧಾರದಿಂದಾಗಿ 20 ಕೋಟಿ ರೂ. ಪರಿಹಾರ ಮೊತ್ತವನ್ನು ಠೇವಣಿ ಇಡುವಂತೆ ಬೆಳಗಾವಿ ಮಹಾನಗರ ಪಾಲಿಕೆಗೆ ಧಾರವಾಡ ಹೈಕೋರ್ಟ್ ಪೀಠ ಆದೇಶ ನೀಡಿದೆ.
2021ರಲ್ಲಿ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಬ್ಯಾಂಕ್ ಆಫ್ ಇಂಡಿಯಾದಿಂದ ಹಳೇ ಪಿಬಿ ರಸ್ತೆಯವರೆಗೆ ರಸ್ತೆ ಅಗಲೀಕರಣಕ್ಕೆ ಭೂಮಿಯನ್ನು ಪಾಲಿಕೆ ಸ್ವಾಧೀನ ಪಡಿಸಿಕೊಂಡಿತ್ತು. ಈ ಭೂಮಿಗೆ ನಿಯಾಮಾನುಸಾರ ಮಾಲೀಕರಿಗೆ ಪರಿಹಾರ ನೀಡುವಂತೆ 2021ರಲ್ಲೇ ಧಾರವಾಡ ಹೈಕೋರ್ಟ್ ಪೀಠ ಆದೇಶಿಸಿತ್ತು. 2023ರಲ್ಲಿಯೇ ಬೆಳಗಾವಿ ಉಪವಿಭಾಗಾಧಿಕಾರಿಗಳು ಆರು ತಿಂಗಳ ಒಳಗಾಗಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಅಫಿಡವಿಟ್ ಸಲ್ಲಿಸಿದ್ದರು. ಆದರೆ, ಇಲ್ಲಿಯವರೆಗೂ ಪೂರ್ಣಗೊಳ್ಳದಿರುವುದು, ಪರಿಹಾರ ಕುರಿತು ದೂರುದಾರರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ಇದರಿಂದಾಗಿ ಪಾಲಿಕೆ ಅಧಿಕಾರಿಗಳು ನ್ಯಾಯಾಂಗ ನಿಂದನೆ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
2021ರಲ್ಲೇ ಸ್ವಾಧೀನಪಡಿಸಿಕೊಂಡ ಆಸ್ತಿಗಳಿಗೆ 20 ಕೋಟಿ ರೂ. ಪರಿಹಾರ ನೀಡಲು ಅನುದಾನ ಕೊರತೆ ಉಂಟಾಗಿದ್ದು, ಸರ್ಕಾರ ಹಂತದಲ್ಲಿಯೇ ಬಿಡುಗಡೆ ಮಾಡಬೇಕು ಎಂದು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯಲಾಗಿತ್ತು. ಆದರೆ, ಸರ್ಕಾರ 2022ರಲ್ಲಿ ಪಾಲಿಕೆಯಿಂದಲೇ ಭೂ ಪರಿಹಾರ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿತ್ತು. ಇದರಿಂದಾಗಿ ಕಂಗೆಟ್ಟಿರುವ ಪಾಲಿಕೆಗೆ ಪರಿಹಾರದ ಮೊತ್ತ ನೀಡಲು ಆರ್ಥಿಕ ಸಂಕಷ್ಟ ಎದುರಾಗಿದೆ. ಅಲ್ಲದೆ, ಈ ಕುರಿತು ಚರ್ಚಿಸಲು ಆ.27ರಂದು ತುರ್ತು ಪರಿಷತ್ ಸಭೆ ಕೂಡ ಕರೆಯಲಾಗಿದೆ.