ಧಾರವಾಡ: ಉತ್ತರ ಕರ್ನಾಟಕ ಭಾಗದ ರೈತರ ಜಾತ್ರೆ ಎಂದೇ ಕರೆಸಿಕೊಳ್ಳುವ ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ಕೃಷಿಮೇಳಕ್ಕೆ ಜನರು, ರೈತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಎರಡನೇ ದಿನವಾದ ನಿನ್ನೆ(ಭಾನುವಾರ) ಮೇಳಕ್ಕೆ ಅಧಿಕೃತ ಚಾಲನೆ ದೊರೆಯಿತು.
ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಸಾವಿರಾರು ಜನರು ಆಗಮಿಸಿ ತಮಗಿಷ್ಟವಾದ ಹೂವುಗಳ ಕಲಾಕೃತಿಗಳ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು. ವಿವಿಧ ಬಗೆಯ ಹೂವುಗಳನ್ನು ಒಂದೇ ಕಡೆ ಕಣ್ತುಂಬಿಕೊಂಡು ಖುಷಿಪಟ್ಟರು.
ಕಲ್ಲಂಗಡಿಯಲ್ಲಿ ಅರಳಿದ ಕ್ರಾಂತಿಕಾರಿಗಳು ಮತ್ತು ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಗಳು ಗಮನ ಸೆಳೆದವು. ತರಕಾರಿಗಳಿಂದ ಮೂಡಿಬಂದ ಕಲಾಕೃತಿಗಳು ಮತ್ತು ವಿವಿಧ ಪ್ರಭೇದಗಳ ಅಲಂಕಾರಿಕ ಪುಷ್ಪಗಳಿಗೆ ಜನರು ಮಾರು ಹೋದರು. ಇಂದು ಕೃಷಿ ಮೇಳದ ಫಲಪುಷ್ಪ ಪ್ರದರ್ಶನದ ಮೂರನೇ ದಿನವಾಗಿದೆ.
ಸ್ಥಳೀಯರಾದ ಲಕ್ಷ್ಮೀ ಮಾತನಾಡಿ, "ಇಲ್ಲಿ ವಿವಿಧ ಬಗೆಯ 20ಕ್ಕೂ ಹೆಚ್ಚು ಪುಷ್ಪಗಳನ್ನು ಒಂದೇ ಕಡೆ ಕಂಡು ತುಂಬಾ ಖುಷಿಯಾಯಿತು. ಇಲ್ಲಿನ ವಿದ್ಯಾರ್ಥಿಗಳು ತುಂಬಾ ಅಚ್ಚುಕಟ್ಟಾಗಿ ಪ್ರದರ್ಶನವನ್ನು ಆಯೋಜಿಸಿದ್ದಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.