ರಾಮನಗರ: ಡಾ.ಮಂಜುನಾಥ್ ಸ್ಪರ್ಧೆಯನ್ನು ನಾನು ಸ್ವಾಗತ ಮಾಡುತ್ತೇನೆ. ದೇವೇಗೌಡರ ಕುಟುಂಬದವರು ನನಗೆ, ಶಿವಕುಮಾರ್ಗೆ ಹೊಸದಲ್ಲ. ದೇವೇಗೌಡರು, ಕುಮಾರಸ್ವಾಮಿ ಪಕ್ಷ ಸರಿಯಿಲ್ಲವೆಂದು ಅವರ ಅಳಿಯ ಬೇರೆ ಪಕ್ಷದಿಂದ ಸ್ಪರ್ಧಿಸುವ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಜನತಾದಳ ಕಾರ್ಯಕರ್ತರು ಯೋಚನೆ ಮಾಡಬೇಕಿದೆ ಎಂದು ಸಂಸದ ಡಿ ಕೆ ಸುರೇಶ್ ಹೇಳಿದರು.
ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ರಾಜ್ಯದಲ್ಲಿ ದೇವೇಗೌಡರ ಪಕ್ಷ ಹಾಗೂ ಅವರಿಗೆ ಜನಪ್ರಿಯತೆ ಇಲ್ಲವೆಂದು ಅವರ ಅಳಿಯ ಬೇರೆ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದಾರೆ, ಇದನ್ನು ಅವರು ಹೇಳಬೇಕು. ಅವರ ಪಕ್ಷ, ನಾಯಕತ್ವ ಅಸ್ತಿತ್ವದಲ್ಲಿ ಇಲ್ಲ ಎನ್ನುವುದನ್ನು ಅರಿತು ಅಳಿಯ ಈ ನಿರ್ಧಾರ ಮಾಡಿದ್ದಾರೆ ಅನಿಸುತ್ತದೆ ಎಂದರು.
ಜೆಡಿಎಸ್ ಕಾರ್ಯಕರ್ತರಿಗೆ ಡಿ ಕೆ ಸುರೇಶ್ ಆಹ್ವಾನ:ಜೆಡಿಎಸ್ ಕಾರ್ಯಕರ್ತರು ನಮ್ಮೊಂದಿಗೆ ಬನ್ನಿ, ಅವರು ಕುಟುಂಬ ಸದಸ್ಯರು ಆ ಪಕ್ಷ ಸರಿ ಇಲ್ಲ ಎಂದು ಬೇರೆ ಪಕ್ಷದಿಂದ ಚುನಾವಣೆಯಲ್ಲಿ ನಿಲ್ಲುತ್ತಿದ್ದಾರೆ. ನಾನೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಗ, ನನ್ನ ಜೊತೆ ಕೈಜೋಡಿಸಿ, ಜಿಲ್ಲೆ ತಾಲೂಕಿನ ಅಭಿವೃದ್ಧಿಗೆ, ರೈತರ ಅಭಿವೃದ್ಧಿಗೆ ಪಕ್ಷ ಭೇದ ಮರೆತು, ನೀವೆಲ್ಲರೂ ಪಕ್ಷವನ್ನು ಬಿಟ್ಟು ಬರಬೇಕು. ನಿಮ್ಮ ಪರವಾಗಿ ನಾನು ಕೆಲಸ ಮಾಡುತ್ತೇನೆ. ನಿಮ್ಮ ಮನೆ ಮಗನಾಗಿ ಕೆಲಸ ಮಾಡಲು ಸಿದ್ದ ಇದ್ದೇನೆ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಮುಕ್ತ ಆಹ್ವಾನ ಕೊಡ್ತಿದ್ದೇನೆ. ಬನ್ನಿ ಕೆಲಸ ಮಾಡೋಣ ಎಂದು ಡಿ ಕೆ ಸುರೇಶ್ ಕರೆ ನೀಡಿದರು.