ಕರ್ನಾಟಕ

karnataka

ETV Bharat / state

6 ತಿಂಗಳಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಹಂಚಿಕೆಯಾದ ತೆರಿಗೆ ಹಣವೆಷ್ಟು?

ಕೇಂದ್ರದಿಂದ ಅಕ್ಟೋಬರ್ ತಿಂಗಳ ತೆರಿಗೆ ಹಂಚಿಕೆಗೊಂಡ ಬೆನ್ನಲ್ಲೇ, ಕರ್ನಾಟಕಕ್ಕೆ ಮತ್ತೆ ಅನ್ಯಾಯವಾಗಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿದೆ. ಹಾಗಾದರೆ, ರಾಜ್ಯಕ್ಕೆ 2024-25ನೇ ಸಾಲಿನ 6 ತಿಂಗಳಲ್ಲಿ ಹಂಚಿಕೆಯಾದ ತೆರಿಗೆಯ ಮಾಹಿತಿ ಇಲ್ಲಿದೆ.

By ETV Bharat Karnataka Team

Published : 5 hours ago

tax distribution
ಸಂಗ್ರಹ ಚಿತ್ರ (ETV Bharat)

ಬೆಂಗಳೂರು:ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ತಾರತಮ್ಯ ಮಾಡುತ್ತಿದೆ ಎಂಬ ಕೂಗು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. 'ನಮ್ಮ ತೆರಿಗೆ ನಮ್ಮ ಹಕ್ಕು' ಹೋರಾಟವನ್ನು ತೀವ್ರಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಕರ್ನಾಟಕವು ಸಂಗ್ರಹಿಸಿದ ಸಮಗ್ರ ಜಿಎಸ್​ಟಿ ಹಾಗೂ ಕೇಂದ್ರದಿಂದ ಬಿಡುಗಡೆಯಾದ ತೆರಿಗೆ ಹಂಚಿಕೆ ಮೊತ್ತ ಎಷ್ಟು? ಎಂಬ ವರದಿ ಇಲ್ಲಿದೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಅಕ್ಟೋಬರ್ ತಿಂಗಳ ತೆರಿಗೆ ಹಂಚಿಕೆಯ ಮೊತ್ತವನ್ನು ಎಲ್ಲಾ ರಾಜ್ಯಗಳಿಗೆ ಬಿಡುಗಡೆ ಮಾಡಿದೆ. ಈ ಪೈಕಿ ಕರ್ನಾಟಕಕ್ಕೆ 6,498 ಕೋಟಿ ರೂ. ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ಮತ್ತೆ ತೆರಿಗೆ ತಾರತಮ್ಯದ ಆರೋಪ ಮಾಡಿದೆ. ಕೇಂದ್ರವು ಕರ್ನಾಟಕಕ್ಕೆ ತೆರಿಗೆ ಅನ್ಯಾಯ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಸೇರಿ ಸಂಪುಟ ಸಚಿವರು ವಾಗ್ದಾಳಿ ನಡೆಸುತ್ತಿದ್ದಾರೆ. ರಾಜ್ಯದಿಂದ 4 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿದ್ದರೂ, ಕೇಂದ್ರ ಸರ್ಕಾರ ಅತ್ಯಲ್ಪ ತೆರಿಗೆ ಹಂಚಿಕೆ ಹಣ ಬಿಡುಗಡೆ ಮಾಡುವ ಮೂಲಕ ತಾರತಮ್ಯ ಮಾಡುತ್ತಿದೆ ಎಂದು ದೂರಿದೆ.

15ನೇ ಹಣಕಾಸು ಆಯೋಗದ ಶಿಫಾರಸು ಆಧಾರದ ಮೇಲೆ ರಾಜ್ಯಗಳಿಗೆ ಕೇಂದ್ರದ ತೆರಿಗೆ ಹಂಚಿಕೆಯ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಈ ಬಾರಿ ಕರ್ನಾಟಕ ಜಿಎಸ್​​ಟಿ ಸಂಗ್ರಹದಲ್ಲಿ ಅಗ್ರಗಣ್ಯವಾಗಿದ್ದರೂ, ಕಡಿಮೆ ತೆರಿಗೆ ಹಂಚಿಕೆ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂಬುದು ಕಾಂಗ್ರೆಸ್ ಸರ್ಕಾರದ ಆರೋಪ.‌ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ತೆರಿಗೆ ಪಾಲನ್ನು ಬಿಡುಗಡೆ ಮಾಡಲಾಗಿದೆ. ಜಿಎಸ್​​ಟಿ ಸೇರಿದಂತೆ ಅತಿಹೆಚ್ಚು ತೆರಿಗೆ ಸಂಗ್ರಹ ಮಾಡಲಾಗುತ್ತಿದ್ದರೂ, ಕರ್ನಾಟಕಕ್ಕೆ ಅತ್ಯಲ್ಪ ತೆರಿಗೆ ಹಂಚಿಕೆ ನೀಡಲಾಗುತ್ತಿದೆ ಎಂದು ರಾಜ್ಯ ಸರ್ಕಾರ ತೀವ್ರ ಆಕ್ರೋಶ ಹೊರಹಾಕಿದೆ.

ರಾಜ್ಯ ಸಂಗ್ರಹಿಸಿದ ಸಮಗ್ರ ಜಿಎಸ್​​ಟಿ ಎಷ್ಟು?:2024-25ನೇ ಸಾಲಿನ 6 ತಿಂಗಳಲ್ಲಿ ರಾಜ್ಯ ಒಟ್ಟು 37,310 ಕೋಟಿ ರೂ. ಜಿಎಸ್​​ಟಿ ತೆರಿಗೆ ಸಂಗ್ರಹ ಮಾಡಿದೆ. ಒಟ್ಟು ಜಿಎಸ್​​ಟಿಯಲ್ಲಿ ರಾಜ್ಯದ ಎಸ್​​ಜಿಎಸ್​ಟಿ, ಕೇಂದ್ರದ ಸಿಜಿಎಸ್​​ಟಿ ಹಾಗೂ ಐಜಿಎಸ್​ಟಿ ಒಳಗೊಂಡಿದೆ. ವಾಣಿಜ್ಯ ಇಲಾಖೆ ನೀಡಿದ ಅಂಕಿ-ಅಂಶದ ಪ್ರಕಾರ, ಏಪ್ರಿಲ್ ತಿಂಗಳಲ್ಲಿ ಕರ್ನಾಟಕ ಒಟ್ಟು 3,896 ಕೋಟಿ ರೂ. ಸಿಜಿಎಸ್​ಟಿ ಸಂಗ್ರಹ ಮಾಡಿದೆ. ಜೊತೆಗೆ, 4,715 ಕೋಟಿ ರೂ. ಎಸ್​​ಜಿಎಸ್​ಟಿ ಹಾಗೂ 5,791 ಕೋಟಿ ರೂ. ಐಜಿಎಸ್​​ಟಿ ಸಂಗ್ರಹಿಸಲಾಗಿದೆ.

ಮೇ ತಿಂಗಳಲ್ಲಿ 2,829 ಕೋಟಿ ರೂ. ಸಿಜಿಎಸ್​​ಟಿ, 3,441 ಕೋಟಿ ರೂ. ಎಸ್​ಜಿಎಸ್​​ಟಿ ಸಂಗ್ರಹಿಸಲಾಗಿದೆ. 4,392 ಕೋಟಿ ರೂ. ಐಜಿಎಸ್​​ಟಿ ಸಂಗ್ರಹ ಮಾಡಲಾಗಿದೆ. ಅಂದರೆ, ಏಪ್ರಿಲ್-ಆಗಸ್ಟ್​​ವರೆಗೆ ಕರ್ನಾಟಕ ಎಲ್ಲವೂ ಸೇರಿ ಒಟ್ಟು 77,969 ಕೋಟಿ ರೂ. ಜಿಎಸ್​​ಟಿ ಆದಾಯ ಸಂಗ್ರಹ ಮಾಡಿದೆ. ಮಹಾರಾಷ್ಟ್ರದ ಬಳಿಕ ಎರಡನೇ ಅತಿಹೆಚ್ಚು ಜಿಎಸ್​​ಟಿ ತೆರಿಗೆ ಸಂಗ್ರಹಿಸಿದ ರಾಜ್ಯ ಕರ್ನಾಟಕವಾಗಿದೆ.

ಇದನ್ನೂ ಓದಿ:ಮೈಸೂರಿನ ಇನಕಲ್​ನಲ್ಲಿ ನಿವೇಶನ ಅಕ್ರಮ, ಮುಡಾದಂತೆ ಇದೊಂದು ರೀತಿಯ ಹಗರಣ: ಹೆಚ್​ಡಿಕೆ

ಜೂನ್ ತಿಂಗಳಲ್ಲಿ 2,833 ಕೋಟಿ ರೂ. ಸಿಜಿಎಸ್​​ಟಿ, 3,501 ಕೋಟಿ ರೂ. ಎಸ್​​ಜಿಎಸ್​ಟಿ ಹಾಗೂ 4,514 ಕೋಟಿ ರೂ. ಐಜಿಎಸ್​ಟಿ ಸಂಗ್ರಹಿಸಲಾಗಿದೆ. ಜುಲೈ ತಿಂಗಳಲ್ಲಿ 2,872 ಕೋಟಿ ರೂ. ಸಿಜಿಎಸ್​ಟಿ, 3,557 ಕೋಟಿ ರೂ. ಎಸ್​ಜಿಎಸ್​​ಟಿ ಹಾಗೂ 4,948 ಕೋಟಿ ರೂ. ಐಜಿಎಸ್​ಟಿ ಸಂಗ್ರಹವಾಗಿದೆ. ಆಗಸ್ಟ್ ತಿಂಗಳಲ್ಲಿ 2,798 ಕೋಟಿ ರೂ. ಸಿಜಿಎಸ್​​ಟಿ, 3,417 ಕೋಟಿ ರೂ. ಎಸ್​ಜಿಎಸ್​​ಟಿ ಹಾಗೂ 4,676 ಕೋಟಿ ಐಜಿಎಸ್​​ಟಿ ಸಂಗ್ರಹವಾಗಿದೆ.

ಇತ್ತ ಸಂಗ್ರಹವಾದ ಐಜಿಎಸ್​ಟಿಯನ್ನು ರಾಜ್ಯಗಳಿಗೆ ಮರುಪಾವತಿ ಮಾಡಲಾಗುತ್ತದೆ. ಅದರಂತೆ, ಆಗಸ್ಟ್​ವರೆಗೆ ಸಂಗ್ರಹಿಸಲಾದ ಐಜಿಎಸ್​​ಟಿಯಲ್ಲಿ 14,699 ಕೋಟಿ ರೂ.ಗಳನ್ನು ಕರ್ನಾಟಕಕ್ಕೆ ಮರು ಪಾವತಿ ಮಾಡಲಾಗಿದೆ.

ಬಿಡುಗಡೆಯಾಗಿರುವ ಕೇಂದ್ರದ ತೆರಿಗೆ ಹಂಚಿಕೆ ಏನಿದೆ?:ಕರ್ನಾಟಕಕ್ಕೆ 2024-25ನೇ ಸಾಲಿನಲ್ಲಿ 44,485 ಕೋಟಿ ರೂ.ಗಳಷ್ಟು ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆಯಾಗಿದೆ.‌ ಕಳೆದ ಆರ್ಥಿಕ ವರ್ಷದಲ್ಲಿ ರಾಜ್ಯಕ್ಕೆ 37,252 ಕೋಟಿ ರೂ. ತೆರಿಗೆ ಹಂಚಿಕೆ ಮಾಡಲಾಗಿತ್ತು. ಈ ಆರ್ಥಿಕ ವರ್ಷದಲ್ಲಿ ರಾಜ್ಯಕ್ಕೆ ಹೆಚ್ಚಿನ ತೆರಿಗೆ ಹಂಚಿಕೆಯಾಗಿದೆ.

ಆರ್ಥಿಕ ಇಲಾಖೆ ನೀಡಿದ ಮಾಹಿತಿಯಂತೆ, ಪ್ರಸಕ್ತ ಸಾಲಿನಲ್ಲಿ ಏಪ್ರಿಲ್ ತಿಂಗಳಲ್ಲಿ 2,548 ಕೋಟಿ ರೂ. ತೆರಿಗೆ ಹಂಚಿಕೆ ಹಣ ಬಿಡುಗಡೆ ಮಾಡಲಾಗಿದೆ. ಮೇ ತಿಂಗಳಲ್ಲೂ 2,548 ಕೋಟಿ ರೂ. ಕೇಂದ್ರದ ತೆರಿಗೆ ಹಂಚಿಕೆ ಹಣವನ್ನು ಬಿಡುಗಡೆ ಮಾಡಲಾಗಿದೆ. ಜೂನ್ ತಿಂಗಳಲ್ಲಿ 5,097 ಕೋಟಿ ರೂ. ತೆರಿಗೆ ಹಂಚಿಕೆ ಹಣ ಬಿಡುಗಡೆಗೊಂಡಿದೆ.

ಜುಲೈ ತಿಂಗಳಲ್ಲಿ ಕೇಂದ್ರದ ತೆರಿಗೆ ಹಂಚಿಕೆ ಮೊತ್ತದಲ್ಲಿ ರಾಜ್ಯಕ್ಕೆ 3,178 ಕೋಟಿ ರೂ. ಹಾಗೂ ಆಗಸ್ಟ್ ತಿಂಗಳಲ್ಲಿ ರಾಜ್ಯಕ್ಕೆ 3,249 ಕೋಟಿ ರೂ. ತೆರಿಗೆ ಹಂಚಿಕೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಆರ್ಥಿಕ ಇಲಾಖೆ ಮಾಹಿತಿ ನೀಡಿದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಬಾಪ್ತು ಕೇಂದ್ರ ಸರ್ಕಾರ ರಾಜ್ಯಕ್ಕೆ ಒಟ್ಟು 6,498 ಕೋಟಿ ರೂ. ತೆರಿಗೆ ಹಂಚಿಕೆ ಹಣವನ್ನು ಬಿಡುಗಡೆ ಮಾಡಿದೆ. ಕಳೆದ ಗುರುವಾರ ಕೇಂದ್ರ ಸರ್ಕಾರ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ತೆರಿಗೆ ಹಂಚಿಕೆ ಹಣವನ್ನು ಬಿಡುಗಡೆ ಮಾಡಿತ್ತು.

ಒಟ್ಟಾರೆ, ಕೇಂದ್ರ ಸರ್ಕಾರ ಏಪ್ರಿಲ್​ನಿಂದ ಅಕ್ಟೋಬರ್​​ವರೆಗೆ ರಾಜ್ಯಕ್ಕೆ ಒಟ್ಟೂ 23,118 ಕೋಟಿ ರೂ. ತೆರಿಗೆ ಹಂಚಿಕೆ ಹಣವನ್ನು ಬಿಡುಗಡೆ ಮಾಡಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಂದರೆ ಪ್ರಸಕ್ತ ಸಾಲಿನಲ್ಲಿ ಒಟ್ಟು ಕೇಂದ್ರ ತೆರಿಗೆ ಹಂಚಿಕೆಯ ಮೊತ್ತದ ಪೈಕಿ 52% ಹಣ ಬಿಡುಗಡೆ ಮಾಡಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ ಕಸದಿಂದ ಕರೆಂಟ್ ಉತ್ಪಾದನೆ: ಶೀಘ್ರದಲ್ಲೇ ವಿದ್ಯುತ್ ಸ್ಥಾವರಕ್ಕೆ ಚಾಲನೆ

ABOUT THE AUTHOR

...view details