ಕರ್ನಾಟಕ

karnataka

ETV Bharat / state

ಕೆಇಎ ಪರೀಕ್ಷೆ: ಮೇಲ್ವಿಚಾರಕರಿಂದ ಕರ್ತವ್ಯಲೋಪ, ವೆಬ್​ ಕಾಸ್ಟಿಂಗ್​ನಿಂದ ಪತ್ತೆ: ಕ್ರಮಕ್ಕೆ ಕೆಇಎ ಸೂಚನೆ - Dereliction in KEA exam - DERELICTION IN KEA EXAM

ಭಾನುವಾರ ಕೆಇಎ ನಡೆಸಿದ ಪರೀಕ್ಷೆಯಲ್ಲಿ ಇಬ್ಬರು ಮೇಲ್ವಿಚಾರಕರಿಂದ ಪರೀಕ್ಷಾ ಕರ್ತವ್ಯಲೋಪವಾಗಿರುವುದು ವೆಬ್ ಕಾಸ್ಟಿಂಗ್​ನಿಂದ ಪತ್ತೆಯಾಗಿದ್ದು, ಕ್ರಮ ತೆಗೆದುಕೊಳ್ಳುವಂತೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.​ ಪ್ರಸನ್ನ ಸೂಚಿಸಿದ್ದಾರೆ.

ವೆಬ್​ ಕಾಸ್ಟಿಂಗ್​ನಿಂದ ಕೆಇಎ ಪರೀಕ್ಷೆಯಲ್ಲಿನ ಕರ್ತವ್ಯಲೋಪ ಪತ್ತೆ
ವೆಬ್​ ಕಾಸ್ಟಿಂಗ್​ನಿಂದ ಕೆಇಎ ಪರೀಕ್ಷೆಯಲ್ಲಿನ ಕರ್ತವ್ಯಲೋಪ ಪತ್ತೆ (ETV Bharat)

By ETV Bharat Karnataka Team

Published : Jul 15, 2024, 6:59 AM IST

ಬೆಂಗಳೂರು:ಬಿಎಂಟಿಸಿ, ಕೆಕೆಆರ್​ಟಿಸಿ ವಿವಿಧ ಖಾಲಿ ಹುದ್ದೆಗಳನ್ನು ತುಂಬಲು ಭಾನುವಾರ (ಜುಲೈ 14) ನಡೆದ ಪರೀಕ್ಷೆ ವೇಳೆ ಇಬ್ಬರು ಮೇಲ್ವಿಚಾರಕರು ಪರೀಕ್ಷಾ ಕರ್ತವ್ಯ ನಿರ್ವಹಣೆಯಲ್ಲಿ ಲೋಪವೆಸಗಿರುವುದನ್ನು ವೆಬ್ ಕಾಸ್ಟಿಂಗ್​ನಿಂದ ಪತ್ತೆ ಹಚ್ಚಲಾಗಿದೆ. ಈ ಇಬ್ಬರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.​ ಪ್ರಸನ್ನ ಪತ್ರ ಬರೆದಿದ್ದಾರೆ.

"ಬೆಂಗಳೂರಿನ ಕೆ.ಆರ್​. ವೃತ್ತದಲ್ಲಿರುವ ಎಸ್​​.ಜೆ. ಪಾಲಿಟೆಕ್ನಿಕ್​ನ ಕೊಠಡಿ ಸಂಖ್ಯೆ 102ರಲ್ಲಿ (ಕೇಂದ್ರ ಸಂಕೇತ 112) ಕೊಠಡಿ ಮೇಲ್ವಿಚಾರಕರಾದ ಉಪನ್ಯಾಸಕ ಸಾಜಿದ್ ಅವರು ಪರೀಕ್ಷೆ ನಡೆಯುವಾಗ ಮೊಬೈಲ್​ನಲ್ಲಿ ಮಾತನಾಡುತ್ತಿರುವುದನ್ನು ಇಲ್ಲಿನ ಕೆಇಎ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್​ನಿಂದ ಗಮನಿಸಲಾಗಿದೆ. ಇದು ಪರೀಕ್ಷಾ ಕರ್ತವ್ಯ ಲೋಪವಾಗಿರುವುದರಿಂದ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ" ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದು ಕೋರಲಾಗಿದೆ.

"ಕಲಬುರಗಿಯ ನೆಹರು ಗಂಜ್​​ನಲ್ಲಿರುವ ಶ್ರೀ ಶಬರಯ್ಯ ಗಾಡ ಬಾಲಕಿಯರ ಕಾಲೇಜಿನ ಪರೀಕ್ಷಾ ಕೇಂದ್ರದ ಕೊಠಡಿಯೊಂದರಲ್ಲಿ ಇಬ್ಬರು ವಿದ್ಯಾರ್ಥಿಗಳು ಪರಸ್ಪರ ಮಾತಾಡಿಕೊಳ್ಳುತ್ತಿರುವುದು ಹಾಗೂ ಈ ಸಂದರ್ಭದಲ್ಲಿ ಒಬ್ಬ ಅಭ್ಯರ್ಥಿ ಮತ್ತೊಬ್ಬ ಅಭ್ಯರ್ಥಿಗೆ ಉತ್ತರ ಬರೆಯಲು ನೆರವು ನೀಡಿರುವುದು ಕಂಡು ಬಂದಿದೆ. ಈ ವೇಳೆ, ಕೊಠಡಿ ಮೇಲ್ವಿಚಾರಕರು ಅಲ್ಲೇ ಇದ್ದರೂ ಅದನ್ನು ತಡೆಯದೇ ನಿರ್ಲಕ್ಷ್ಯ ಮಾಡಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರ ಬಗ್ಗೆ ಕೊಠಡಿ ಮೇಲ್ವಿಚಾರಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ" ಕಲಬುರಗಿ ಜಿಲ್ಲಾಧಿಕಾರಿ ಅವರಿಗೆ ಪ್ರಸನ್ನ ಅವರು ಪತ್ರ ಬರೆದಿದ್ದಾರೆ.

ತಾನು ನಡೆಸುವ ಪರೀಕ್ಷೆಗಳಲ್ಲಿ ಪಾರದರ್ಶಕತೆ ತರುವ ಸಲುವಾಗಿ ಕೆಇಎ ಇದೇ ಮೊದಲ ಬಾರಿಗೆ ಜುಲೈ 13 ಮತ್ತು 14ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರ್ಣ ಪ್ರಮಾಣದಲ್ಲಿ ವೆಬ್ ಕಾಸ್ಟಿಂಗ್​​ ವ್ಯವಸ್ಥೆ ಮಾಡಿತ್ತು.

ಶೇ 68 ರಷ್ಟು ಹಾಜರಿ:ಭಾನುವಾರ ನಡೆದ ಪರೀಕ್ಷೆಯಲ್ಲಿ ಒಟ್ಟು ಶೇ 68 ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದರು. ಶನಿವಾರ ನಡೆದ ಪರೀಕ್ಷೆಯಲ್ಲಿ ಶೇ 34ರಷ್ಟು ಹಾಜರಿದ್ದರು ಎಂದು ಹೆಚ್​. ಪ್ರಸನ್ನ ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಕೆಇಎ ಪರೀಕ್ಷೆಗೆ ಶೇ.34ರಷ್ಟು ಅಭ್ಯರ್ಥಿಗಳು ಹಾಜರು: ಅಕ್ರಮ ತಡೆಗೆ ವೆಬ್ ಕಾಸ್ಟಿಂಗ್ ಕಣ್ಗಾವಲು - Karnataka Examinations Authority

ABOUT THE AUTHOR

...view details