ಕರ್ನಾಟಕ

karnataka

By ETV Bharat Karnataka Team

Published : Jun 28, 2024, 10:10 PM IST

ETV Bharat / state

ಡೆಂಘಿ, ಚಿಕನ್ ಗುನ್ಯಾಕ್ಕೆ ನಲುಗಿದ ದಾವಣಗೆರೆ: ಈ ಸುರಕ್ಷಿತ ಕ್ರಮಗಳನ್ನು ಪಾಲಿಸಿ - Dengue Chikungunya Cases

ದಾವಣಗೆರೆ ನಗರದಲ್ಲಿ ಡೆಂಘಿ ಹಾಗೂ ಚಿಕನ್ ಗುನ್ಯಾ ಪ್ರಕರಣಗಳು ಹೆಚ್ಚಳ ಕಂಡಿವೆ.

Davanagere
ದಾವಣಗೆರೆ (ETV Bharat)

ಡಿಹೆಚ್​ಒ ಷಣ್ಮುಖಪ್ಪ ಹೇಳಿಕೆ (ETV Bharat)

ದಾವಣಗೆರೆ: ಜಿಲ್ಲೆಯಲ್ಲಿ ಡೆಂಘಿ, ಚಿಕನ್‌ಗುನ್ಯಾ ತಾಂಡವವಾಡುತ್ತಿವೆ. ವಾತಾವರಣ ಬದಲಾಗುತ್ತಿರುವ ಬೆನ್ನಲ್ಲೇ ಜ್ವರ ಬಾಧಿಸುತ್ತಿದೆ. ಚಿಕಿತ್ಸೆಗಾಗಿ ಜನರು ಗುಂಪು ಗುಂಪಾಗಿ ಜಿಲ್ಲಾಸ್ಪತ್ರೆಗೆ ಧಾವಿಸುತ್ತಿದ್ದಾರೆ.

ದಾವಣಗೆರೆ ಗ್ರಾಮಾಂತರ ಭಾಗಕ್ಕಿಂತ ನಗರ ಪ್ರದೇಶದಲ್ಲಿ ಹೆಚ್ಚು ಡೆಂಘಿ ಕಂಡುಬರುತ್ತಿದೆ. ಸದ್ಯ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ 1,215 ಮಾದರಿ ಸಂಗ್ರಹಿಸಿದೆ. 1,701 ಶಂಕಿತ ಡೆಂಘಿ ಪ್ರಕರಣಗಳಿವೆ. ಇದರಲ್ಲಿ 127 ಪಾಸಿಟಿವ್ ಬಂದಿದೆ.

ಜಿಲ್ಲೆಯಲ್ಲಿ ಚಿಕನ್ ಗುನ್ಯಾ ಕೂಡ ಹೆಚ್ಚಾಗುತ್ತಿದೆ. ಆರೋಗ್ಯ ಇಲಾಖೆ ಸಿಬ್ಬಂದಿ 510 ಮಾದರಿ ಪಡೆದಿದ್ದು, 380 ಪ್ರಕರಣಗಳಿವೆ. ಈ ಪೈಕಿ 31 ಪಾಸಿಟಿವ್ ಬಂದಿದೆ.

ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳ ಸಭೆ ನಡೆಸಿ ಡೆಂಘಿ, ಚಿಕನ್ ಗುನ್ಯಾ ನಿಯಂತ್ರಣಕ್ಕೆ ಸೂಚನೆ ನೀಡಿದ್ದಾರೆ.

ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ: ನೀರಿನಲ್ಲಿ ಉತ್ಪತ್ತಿಯಾಗುವ ಈಡಿಸ್ ಈಜಿಪ್ಟ್ ಸೊಳ್ಳೆಯಿಂದ ಈ ರೋಗಗಳು ಬರುತ್ತವೆ. ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಛ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತವೆ. ಇವು ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುವುದರಿಂದ ರೋಗ ಬಾಧಿಸುತ್ತದೆ.

''ಬ್ಯಾರಲ್ ತೊಟ್ಟಿ, ಕಲ್ಲು ಚಪ್ಪಡಿಯಿಂದ ನಿರ್ಮಿಸಿದ ತೊಟ್ಟಿ, ಡ್ರಮ್ಮು, ಬ್ಯಾರಲ್, ಮಣ್ಣಿನ ಮಡಿಕೆ, ಉಪಯೋಗಿಸದ ಕಲ್ಲು ಮುಂತಾದೆಡೆ ಶೇಖರಣೆಯಾಗುವ ನೀರಿನಲ್ಲಿ ಈ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹಾಗಾಗಿ, ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಸೊಳ್ಳೆ ಪರದೆಗಳ ಬಳಕೆ ಉತ್ತಮ'' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ ತಿಳಿಸಿದರು.

ಡೆಂಘಿ, ಚಿಕನ್ ಗುನ್ಯಾ ತಡೆಗಟ್ಟಲು ಸಮುದಾಯ ಆರೋಗ್ಯ ಕೇಂದ್ರ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಬಳಕೆ‌ ಮಾಡಿಕೊಂಡು ಸರ್ವೇ ಮಾಡಿಸಿ, ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಆರೋಗ್ಯ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ನೀರು ನಿಲ್ಲದಂತೆ ಕೆಲವು ವಸ್ತುಗಳನ್ನು ನಿರ್ಮೂಲನೆ ಮಾಡುವ ಕ್ರಮಕ್ಕೂ ಇಲಾಖೆ ಮುಂದಾಗಿದೆ.

ರೋಗ ಲಕ್ಷಣಗಳೇನು?: ''ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು ಈ ರೋಗದ ಪ್ರಮುಖ ಲಕ್ಷಣಗಳು. ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೆ, ತಕ್ಷಣ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಎಂದು ಡಾ. ಷಣ್ಮುಖಪ್ಪ" ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಉತ್ತರ ಕನ್ನಡದಲ್ಲಿ ಹೆಚ್ಚುತ್ತಿರುವ ಡೆಂಘಿ ಪ್ರಕರಣಗಳು: 3 ತಿಂಗಳಲ್ಲಿ 42 ಮಂದಿ ಶಂಕಿತರು ಪತ್ತೆ!

ABOUT THE AUTHOR

...view details