ಕರ್ನಾಟಕ

karnataka

ETV Bharat / state

ಸಾರಿಗೆ ನೌಕರರಿಗೆ ಕೂಡಲೇ ಸರಿ ಸಮಾನ ವೇತನ, ಸವಲತ್ತುಗಳನ್ನು ನೀಡುವಂತೆ ಆಗ್ರಹ - R Chandrasekhar

ಸರಕಾರಿ ನೌಕರರ ಸರಿ ಸಮಾನ ವೇತನ, ಸವಲತ್ತುಗಳನ್ನು ಸಾರಿಗೆ ನೌಕರರಿಗೆ ಕೂಡಲೆ ವಿಸ್ತರಿಸಬೇಕು ಎಂದು ಕರ್ನಾಟಕ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಆರ್. ಚಂದ್ರಶೇಖರ್ ಆಗ್ರಹಿಸಿದ್ದಾರೆ.

ಕರ್ನಾಟಕ ರಸ್ತೆ ಸಾರಿಗೆ ನೌಕರರ ಕೂಟ
ಕರ್ನಾಟಕ ರಸ್ತೆ ಸಾರಿಗೆ ನೌಕರರ ಕೂಟ

By ETV Bharat Karnataka Team

Published : Feb 19, 2024, 11:01 PM IST

ಬೆಂಗಳೂರು :ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ತನ್ನ ಪ್ರಣಾಳಿಕೆಯಲ್ಲಿನ ಮುಖ್ಯ ಬೇಡಿಕೆಯಾದ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ಮತ್ತು ಸವಲತ್ತುಗಳನ್ನು ಸಾರಿಗೆ ನೌಕರರಿಗೂ ಸಹ ವಿಸ್ತರಿಸುವುದಾಗಿ ಘೋಷಿಸಿತ್ತು. ಇದೀಗ ಕಾಂಗ್ರೆಸ್​ ಅಧಿಕಾರಿದಲ್ಲಿರುವುದರಿಂದ ಕಾಲ ವಿಳಂಬವಿಲ್ಲದೆ ಕೂಡಲೆ ಈ ಘೋಷನೆಯನ್ನು ಜಾರಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಆರ್ ಚಂದ್ರಶೇಖರ್ ಹೇಳಿದರು.

ನಗರದ ಪ್ರೆಸ್ ಕ್ಲಬ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿಗಳಿಗೆ ಒಂದೇ ಕಂತಿನಲ್ಲಿ ವೇತನದ ಹಿಂಬಾಕಿಯನ್ನು ಪಾವತಿಸಬೇಕು. ಮುಖ್ಯವಾಗಿ 2020 ರಿಂದ ನಿವೃತ್ತಿಯಾದ ನೌಕರರಿಗೆ ವೇತನದ ಬಾಕಿ ಹಣವನ್ನು ಮತ್ತು ಹಿಂಬಾಕಿ ಮೊತ್ತವನ್ನು ಕೂಡಲೇ ಪಾವತಿಸುವ ನಿರ್ದೇಶನವನ್ನು ಸರ್ಕಾರ ನೀಡಬೇಕು. ಸಾರಿಗೆ ನೌಕರರಿಗೆ ಮತ್ತು ಅವಲಂಬಿತರಿಗೆ ಉಚಿತ ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತರಬೇಕು.

ಜೊತೆಗೆ ಈ ಹಿಂದೆ 2020 ಮತ್ತು 2021 ರಲ್ಲಿ ನಡೆದ ಮುಷ್ಕರಕ್ಕೆ ಸಂಬಂಧಿಸಿದಂತೆ ಕಾರ್ಮಿಕರ ವಿರುದ್ಧವಾಗಿ ಕೈಗೊಂಡ ಎಲ್ಲಾ ಶಿಸ್ತಿನ ಕ್ರಮಗಳನ್ನು, ಡಿಸ್ಮಿಸಲ್ಸ್ ಮತ್ತು ಪೋಲಿಸ್ ಎಫ್​ಐಆರ್ ಪ್ರಕರಣಗಳನ್ನು ರದ್ದು ಮಾಡಿ, ಅವರು ಮುಷ್ಕರದ ಪೂರ್ವದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಬೇಕು ಎಂದು ಒತ್ತಾಯಿಸಿದರು.

ಸಾರಿಗೆ ಸಂಸ್ಥೆಯಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಖಾಸಗಿ ಚಾಲಕರನ್ನು ಮತ್ತ ಹೊರಗುತ್ತಿಗೆ ಆಧಾರದ ಮೇಲೆ ಚಾಲನ, ತಾಂತ್ರಿಕ ಮತ್ತು ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಿರುವ ಪದ್ಧತಿಯನ್ನು ಈ ಕೂಡಲೇ ನಿಲ್ಲಿಸಿ. ಸಂಸ್ಥೆಯಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಖಾಸಗಿ ಸಿಬ್ಬಂದಿಗಳನ್ನು ಸಂಸ್ಥೆಯ ನೌಕರರು ಎಂದು ಪರಿಗಣಿಸಬೇಕು ಎಂದು ಆರ್. ಚಂದ್ರಶೇಖರ್​ ಆಗ್ರಹಿಸಿದರು.

ಒಂದು ವೇಳೆ ಸರ್ಕಾರ ಮತ್ತು ಸಂಸ್ಥೆಯು ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದರೆ, ಅನ್ಯ ಮಾರ್ಗವಿಲ್ಲದೆ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಥರ ವೇದಿಕೆಯಿಂದ ಮಾರ್ಚ್ 4 ರಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಸತ್ಯಾಗ್ರಹದಲ್ಲಿ ಸಾರಿಗೆ ನೌಕರರು, ಅವರ ಕುಟುಂಬ ಸದಸ್ಯರು ಹಾಗೂ ನಿವೃತ್ತಿ ನೌಕರರು ಭಾಗವಹಿಸುವರು. ಸಾರಿಗೆ ನೌಕರರು ಮತ್ತು ನಿವೃತ್ತ ನೌಕರರ ಕ್ಷೇಮಾಭಿವೃಧಿ ಮಹಾ ಮಂಡಲ ಸಂಘಟನೆಯು ಸಹ ಪ್ರತಿಭಟನೆಗೆ ಬೆಂಬಲ ಘೋಷಿಸಿದೆ ಎಂದು ಚಂದ್ರಶೇಖರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಬಿ.ಎಸ್ ಸುರೇಶ್, ಪ್ರಧಾನ ಕಾರ್ಯದರ್ಶಿ ನಾಗರಾಜ್, ಕೆಬಿಎನ್​ ಎನ್ ವರ್ಕರ್ಸ್ ಫೆಡರೇಷನ್ ರಾಜ್ಯಾಧ್ಯಕ್ಷ ಶಿವ ಶಂಕರ್, ಸರ್ಕಾರಿ ನೌಕರರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ತಾಳ ಶಾಸನ ಮೋಹನ್ ಉಪಸ್ಥಿತರಿದ್ದರು.

ಇದನ್ನೂ ಓದಿ :ಕೆಎಸ್​ಆರ್​ಟಿಸಿ ಮುಡಿಗೇರಿದ ಆರು ಜಾಗತಿಕ ಪ್ರಶಸ್ತಿ ಗರಿ: 8 ತಿಂಗಳಲ್ಲಿ ಅರ್ಧಶತಕಕ್ಕೂ ಹೆಚ್ಚು ಪ್ರಶಸ್ತಿಗಳು

ABOUT THE AUTHOR

...view details