ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಎಂಎಲ್​ಸಿ ಧನಂಜಯ ಸರ್ಜಿ ಹೆಸರಿನಲ್ಲಿ ವಿಷಯುಕ್ತ ಸ್ವೀಟ್​​ಬಾಕ್ಸ್‌ ರವಾನೆ - SWEETS BOX IN THE NAME OF MLC

ವಿಧಾನ ಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿ ಹೆಸರು ದುರ್ಬಳಕೆ ಮಾಡಿಕೊಂಡು, ಹೊಸ ವರ್ಷಕ್ಕೆ ಶುಭಾಶಯ ಕೋರುವ ನೆಪದಲ್ಲಿ ವಿಷ ಪದಾರ್ಥ ಬೆರೆಸಿರುವ ಸಿಹಿತಿಂಡಿ ರವಾನಿಸಿರುವ ಘಟನೆ ನಡೆದಿದೆ.

ಎಂಎಲ್​ಸಿ ಧನಂಜಯ ಸರ್ಜಿ
ಎಂಎಲ್​ಸಿ ಧನಂಜಯ ಸರ್ಜಿ (ETV Bharat)

By ETV Bharat Karnataka Team

Published : Jan 3, 2025, 8:11 PM IST

ಶಿವಮೊಗ್ಗ:ವಿಧಾನ ಪರಿಷತ್‌ ಸದಸ್ಯ ಡಾ.ಧನಂಜಯ ಸರ್ಜಿ ಹೆಸರಿನಲ್ಲಿ ಹೊಸ ವರ್ಷಕ್ಕೆ ವಿಷ ಪದಾರ್ಥ ಬೆರೆಸಿರುವ ಸಿಹಿ ತಿಂಡಿಯನ್ನ ನಗರದ ಮೂವರಿಗೆ ಕೊರಿಯರ್​ ಮೂಲಕ ರವಾನಿಸಿರುವ ಘಟನೆ ಬೆಳಕಿಗೆ ಬಂದಿದೆ.

ರಾಷ್ಟ್ರೀಯ ಶಿಕ್ಷಣ ಸಮಿತಿ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್‌, ಮನೋವೈದ್ಯ ಡಾ. ಅರವಿಂದ್ ಹಾಗೂ ಡಾ. ಪವಿತ್ರ ಅವರಿಗೆ ಡಾ.ಧನಂಜಯ ಸರ್ಜಿ ಅವರ ಹೆಸರಿನಲ್ಲಿ ಸ್ವೀಟ್ ಬಾಕ್ಸ್ ರವಾನೆಯಾಗಿದೆ. ಈ ಸಂಬಂಧ ಡಾ. ಧನಂಜಯ ಸರ್ಜಿ ಅವರ ಆಪ್ತ ಸಹಾಯಕ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ಬಯಲಿಗೆ ಬಂದಿದ್ದು ಹೇಗೆ: ಎಂಎಲ್​ಸಿ ಧನಂಜಯ ಸರ್ಜಿ ಅವರ ಲೇಟರ್​ಹೆಡ್​ ಜೊತೆ ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿ ಸಂಸ್ಥೆ ಕಾರ್ಯದರ್ಶಿ ನಾಗರಾಜ್ ಅವರಿಗೆ ಡಿಟಿಡಿಸಿ ಕೊರಿಯರ್​ ಮೂಲಕ ಹೊಸ ವರ್ಷದ ದಿನ ಸ್ವೀಟ್ ಬಾಕ್ಸ್ ಬಂದಿತ್ತು. ನಾಗರಾಜ್ ಅವರು ಸ್ವೀಟ್ ಬಾಕ್ಸ್ ತೆರದು ನೋಡಿದಾಗ ಅದರಲ್ಲಿ ಮೋತಿಚೂರ್ ಲಾಡು ಇತ್ತು. ಅವರ ಅದನ್ನು ತಿಂದಾಗ ಸ್ವಲ್ಪ‌ ಕಹಿಯಾಗಿರುವುದು ತಿಳಿದು ಬಂದಿದೆ. ಇದರಿಂದ ನಾಗರಾಜ್ ಅವರು ಧನಂಜಯ ಸರ್ಜಿ ಅವರಿಗೆ ನೇರವಾಗಿ ಫೋನ್​ ಮಾಡಿ ಹೊಸ ವರ್ಷದ ಶುಭಾಶಯ ಕೋರಿ ಸ್ವೀಟ್​ ಬಾಕ್ಸ್​ ಕಳುಹಿಸಿದ್ದಕ್ಕೆ ಧನ್ಯವಾದ ತಿಳಿಸಿ, ನೀವು ಕಳುಹಿಸಿರುವ ಸ್ವೀಟ್ಸ್​ ಸ್ವಲ್ಪ ಕಹಿಯಾಗಿರುವುದಾಗಿ ಹೇಳಿದ್ದಾರೆ. ಇದಕ್ಕೆ ಸರ್ಜಿ ಅವರು, ನಾನು ಯಾವುದೇ ಸ್ವೀಟ್​ ಬಾಕ್ಸ್ ಕಳುಹಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಂತರ ಇದೇ ರೀತಿ ತಮ್ಮ ಹೆಸರಿನಲ್ಲಿ ಇನ್ನಿಬ್ಬರಿಗೆ ಸ್ವೀಟ್​ಬಾಕ್ಸ್​ಗಳು ತಲುಪಿರುವ ಬಗ್ಗೆ ತಿಳಿದ ಧನಂಜಯ ಸರ್ಜಿ ಅವರು, ಈ ಸಂಬಂಧ ತಮ್ಮ ಆಪ್ತ ಸಹಾಯಕನ ಮೂಲಕ ಕೋಟೆ ಪೊಲೀಸ್ ಠಾಣೆಗೆ ದೂರು ಕೊಡಿಸಿದ್ದಾರೆ.

ಎಂಎಲ್​ಸಿ ಧನಂಜಯ ಸರ್ಜಿ ಪ್ರತಿಕ್ರಿಯೆ (ETV Bharat)

ದೂರು ನೀಡಿರುವ ಬಗ್ಗೆ ಮಾಹಿತಿ ನೀಡಿದ ಎಂಎಲ್​ಸಿ:ಈ ಕುರಿತು ಎಂಎಲ್​ಸಿ ಡಾ.ಧನಂಜಯ ಸರ್ಜಿ ಪ್ರತಿಕ್ರಿಯಿಸಿ, "ನಾನು ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದಂತೆ ಯಾರೂ ನನ್ನ ಲೇಟರ್​ಹೆಡ್ ಅನ್ನು ತಯಾರು ಮಾಡಿದ್ದಾರೆ. ಅದು ನಕಲಿ ಲೇಟರ್​ಹೆಡ್ ಆಗಿದ್ದು, ಅದರಲ್ಲಿ ನನ್ನ ಸಹಿ ಇಲ್ಲ. ನಕಲಿ‌ ಲೇಟರ್​ಹೆಡ್ ಹಾಗೂ ಸ್ವೀಟ್ ಬಾಕ್ಸ್​ ಹಂಚಿಕೆಯ ಕುರಿತ ತನಿಖೆ ನಡೆಸಲು ನನ್ನ ಆಪ್ತ ಸಹಾಯಕನ ಮೂಲಕ ಕೋಟೆ ಪೊಲೀಸ್ ಠಾಣೆಗೆ ದೂರು ಕೊಡಿಸಿದ್ದೇನೆ. ನನ್ನ ಹೆಸರಿನಲ್ಲಿ ಕೊರಿಯರ್​ ನೀಡಿದವನ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಅದಷ್ಟು ಬೇಗ ಆತನನ್ನು ಬಂಧಿಸುತ್ತಾರೆ. ನನಗೆ ವೈಯಕ್ತಿಕವಾಗಿ ಯಾರೂಂದಿಗೂ ದ್ವೇಷವಿಲ್ಲ. ಇದನ್ನು ಮಾಡಿದವರು ಯಾರೆಂದು ನನಗೆ ಗೂತ್ತಿಲ್ಲ. ಇಂತಹ ಸ್ವೀಟ್​ಗಳು ಸಣ್ಣಮಕ್ಕಳಿಗೆ ಸಿಕ್ಕಿದ್ರೆ ಅವರಿಗೆ ಅಪಾಯವಾಗುವ ಸಾಧ್ಯತೆಗಳಿತ್ತು" ಎಂಬ ಆತಂಕ ವ್ಯಕ್ತಪಡಿಸಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್‌ ಮಾತನಾಡಿ, "ನನಗೆ ಒಂದು ಕೊರಿಯರ್ ಬಂದಿದೆ ಎಂದು ನನ್ನ ಕಚೇರಿ ಸಹಾಯಕರು ಬಾಕ್ಸ್ ನೀಡಿದರು. ಅದನ್ನು ಮನೆಗೆ ತೆಗೆದುಕೊಂಡು ಹೋಗಿ ನೋಡಿದಾಗ ಅದು ಡಾ.ಧನಂಜಯ ಸರ್ಜಿ ಹೆಸರಿನಲ್ಲಿ ಹೊಸ ವರ್ಷದ ಶುಭಾಶಯ ಕೋರಿ ಬಂದಿದ್ದ ಬಾಕ್ಸ್ ಆಗಿತ್ತು. ಬಾಕ್ಸ್​ನಲ್ಲಿ ಮೋತಿಚೂರ್ ಲಾಡು ಇತ್ತು. ನಾನು ಈ ಲಾಡ್​ ಅನ್ನು ಸ್ವಲ್ಪ ತಿಂದಾಗ ಕಹಿ ಅನ್ನಿಸಿತು. ನಂತರ ನಾನು ಸರ್ಜಿ ಅವರಿಗೆ ಫೋನ್​ ಮಾಡಿ ಹೊಸ ವರ್ಷದ ಶುಭಾಶಯ ಕಳುಹಿಸಿದ್ದಕ್ಕೆ ಧನ್ಯವಾದ ತಿಳಿಸಿ, ಸ್ವೀಟ್ ಕಹಿ ಇರುವ ಬಗ್ಗೆ ಮಾಹಿತಿ ನೀಡಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೋಟೆ ಪೊಲೀಸ್ ಠಾಣೆಯ ಪೊಲೀಸರು ಬಂದು ಸ್ವೀಟ್ ಬಾಕ್ಸ್ ಹಾಗೂ ಲೇಟರ್​ಹೆಡ್ ಅನ್ನು ತನಿಖೆಗೆ ತೆಗೆದುಕೊಂಡು ಹೋಗಿದ್ದಾರೆ" ಎಂದು ತಿಳಿಸಿದರು.

ಇದನ್ನೂ ಓದಿ:ಎರಡು ಪ್ರಮುಖ ಆನ್‌ಲೈನ್ ಆಹಾರ ವಿತರಣಾ ಕಂಪನಿಗಳಿಗೆ ₹40 ಸಾವಿರ ದಂಡ

ABOUT THE AUTHOR

...view details