ಕರ್ನಾಟಕ

karnataka

ETV Bharat / state

ದಶಕ ಕಳೆದರೂ ಮುಗಿಯದ ಹೆದ್ದಾರಿ ಕಾಮಗಾರಿ; ವಾಹನ ಸವಾರರು, ರೈತರಿಗೆ ತಪ್ಪದ ಕಿರಿಕಿರಿ - Delaying of Over bridge road - DELAYING OF OVER BRIDGE ROAD

ಹಾವೇರಿ ಜಿಲ್ಲೆಯಲ್ಲಿ ಹೆದ್ದಾರಿ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದರಿಂದ ವಾಹನ ಸವಾರರು ಮತ್ತು ಜನರಿಗೆ ನಿತ್ಯನರಕಯಾತನೆ ಅನುಭವಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇತ್ತ ಗಮನ ಹರಿಸಲಿ ಎಂಬ ಒತ್ತಾಯ ಕೇಳಿಬಂದಿದೆ.

DELAYING OF OVER BRIDGE
ಆಮೆಗತಿಯ ಕಾಮಗಾರಿ (ETV Bharat)

By ETV Bharat Karnataka Team

Published : Oct 7, 2024, 1:22 PM IST

Updated : Oct 7, 2024, 2:03 PM IST

ಹಾವೇರಿ: ಹಾವೇರಿ ಜಿಲ್ಲೆಯಲ್ಲಿ 110 ಕಿಲೋ ಮೀಟರ್ ರಾಷ್ಟ್ರ್ರೀಯ ಹೆದ್ದಾರಿ ಹಾದು ಹೋಗಿದೆ. ಈ ಹೆದ್ದಾರಿಯಲ್ಲಿ ಹಲವು ರಸ್ತೆ ಮೇಲ್ಸೆತುವೆಗಳು ನಿರ್ಮಾಣಗೊಂಡಿವೆ. ಆದರೆ ಎರಡು ಸೇತುವೆಗಳ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗಿದೆ. ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಮತ್ತು ರಾಣೆಬೆನ್ನೂರು ತಾಲೂಕಿನ ಛತ್ರ ಗ್ರಾಮದ ಎರಡು ರಸ್ತೆ ಮೇಲ್ಸೆತುವೆಗಳ ಕಾಮಗಾರಿ ನಿಧಾನಗತಿಯಲ್ಲಿ ಸಾಗಿರುವುದರಿಂದ ಇಲ್ಲಿ ಸಂಚರಿಸುವ ಸುತ್ತಮುತ್ತಲ ಗ್ರಾಮಸ್ಥರು, ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

10 ವರ್ಷವಾದ್ರೂ ಪೂರ್ಣಗೊಳ್ಳದ ಕಾಮಗಾರಿ: ಸೇತುವೆ ಕಾಮಗಾರಿ ಆರಂಭವಾಗಿ 10 ವರ್ಷವಾದರು ಸೇತುವೆ ಪೂರ್ಣಗೊಳ್ಳುತ್ತಿಲ್ಲಾ. ಪರಿಣಾಮ ಸ್ಥಳೀಯರು, ವಾಹನ ಸವಾರರು ಅಕ್ಕಪಕ್ಕದ ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಹಾವೇರಿ ಜಿಲ್ಲೆಯಲ್ಲಿ ಹಾದುಹೋಗಿರುವ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಈ ವಾಹನ ಸವಾರರು ಅತಿವೇಗದಲ್ಲಿ ವಾಹನ ಚಲಾಯಿಸುತ್ತಾರೆ. ಆದರೆ ಮೋಟೆಬೆನ್ನೂರು ಮತ್ತು ಛತ್ರ ಗ್ರಾಮ ಬರುತ್ತಿದ್ದಂತೆ ವಾಹನ ಸವಾರರು ಡೈವರ್ಸನ್ ತೆಗೆದುಕೊಳ್ಳಬೇಕಾಗುತ್ತದೆ. ತಮ್ಮ ವೇಗ ಕಡಿತಗೊಳಿಸಿ ಸರ್ವಿಸ್ ರಸ್ತೆಯಲ್ಲಿ ಸಾಗಬೇಕಾಗುತ್ತದೆ.

ದಶಕ ಕಳೆದರೂ ಮುಗಿಯದ ಹೆದ್ದಾರಿ ಕಾಮಗಾರಿ; ವಾಹನ ಸವಾರರು, ರೈತರಿಗೆ ತಪ್ಪದ ಕಿರಿಕಿರಿ (ETV Bharat)

ಅದರಲ್ಲೂ ಮೋಟೆಬೆನ್ನೂರು ಪ್ರಮುಖ ಸಂಪರ್ಕ ಕೇಂದ್ರವಾಗಿದ್ದು, ಇಲ್ಲಿ ರಸ್ತೆ ಮೇಲ್ಸೆತುವೆ ಇಲ್ಲದಿರುವ ಕಾರಣ ಅನೇಕ ಅಪಘಾತಗಳು ಸಂಭವಿಸುತ್ತಿವೆ. ದ್ವಿಚಕ್ರವಾಹನ ಸವಾರರು, ರೈತರು ಮತ್ತು ಎತ್ತುಗಳಿಗೆ ಅಪಘಾತಗಳಲ್ಲಿ ಸಾವು ನೋವು ಉಂಟಾಗಿದೆ. ರೈತರು ಚಕ್ಕಡಿ, ಎತ್ತು ದಾಟಿಸಲು ಹರಸಾಹಸ ಪಡಬೇಕು. ಇಲ್ಲಿಂದಲೇ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಸಾಗಬೇಕಾದ ಕಾರಣ ವಾಹನ ದಟ್ಟಣೆ ಅಧಿಕವಾಗಿ ಟ್ರಾಪಿಕ್ ಸಮಸ್ಯೆ ಸಹ ಕಂಡುಬರುತ್ತಿದೆ. ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು, ಜನ ಕೈಯಲ್ಲಿ ಜೀವ ಹಿಡಿದು ಭಯದಿಂದ ಓಡಾಡುವಂತಾಗಿದೆ. ಸರ್ವಿಸ್ ರಸ್ತೆ ಸೇರಿದಂತೆ ರಸ್ತೆ ಮೇಲ್ಸೇತುವೆ ಸಮರ್ಪಕವಾಗಿ ನಿರ್ಮಾಣ ಆಗದಿರುವುದು ಈ ಎಲ್ಲಾ ಅವಾಂತರಗಳಿಗೆ ದಾರಿ ಮಾಡಿಕೊಟ್ಟಿದೆ ಎನ್ನುತ್ತಾರೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ.

ಆಮೆಗತಿ ಕಾಮಗಾರಿ; ಜನರಿಗೆ ನಿತ್ಯ ನರಕಯಾತನೆ (ETV Bharat)

ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುವ ವಾಹನ ಸವಾರರು ವೇಗ ಕಡಿತಗೊಳಿಸಿ ಸರ್ವಿಸ್ ರಸ್ತೆಯಲ್ಲಿ ಸಾಗಬೇಕು. ಜಿಲ್ಲೆಯ ಎರಡು ಟೋಲ್​ಗಳಲ್ಲಿ ಹಣ ಕಟ್ಟುತ್ತೇವೆ. ಮತ್ತೇಕೆ ಸೇತುವೆ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದು ವಾಹನ ಸವಾರರು ಪ್ರಶ್ನಿಸುತ್ತಿದ್ದಾರೆ. ಸರ್ವಿಸ್ ರಸ್ತೆಗಳು ಸಹ ಹಾಳಾಗಿದ್ದು ಅಕ್ಕಪಕ್ಕದ ಜಮೀನುಗಳು ಕೂಡ ಹಾಳಾಗಿವೆ. ರಸ್ತೆ ಅಗಲೀಕರಣಕ್ಕೆ ಪಡೆದ ರೈತರ ಜಮೀನಿಗೆ ಪರಿಹಾರ ನೀಡಿಲ್ಲ. ಇಷ್ಟೆಲ್ಲಾ ಆದರೂ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗಿದ್ದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಇಲ್ಲಿನ ಜನರು.

ಆಮೆಗತಿ ಕಾಮಗಾರಿ; ಜನರಿಗೆ ನಿತ್ಯ ನರಕಯಾತನೆ (ETV Bharat)

ಹಾವೇರಿಗೆ ಹೊಸದಾಗಿ ಆಯ್ಕೆಯಾಗಿರುವ ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕಡೆ ಗಮನಹರಿಸಬೇಕಿದೆ. ಆದಷ್ಟು ಬೇಗ ಈ ಕಾಮಗಾರಿ ಪೂರ್ಣಗೊಳಿಸಿ ಅಮಾಯಕ ಜೀವಗಳ ಮಾರಣಹೋಮ ತಪ್ಪಿಸಬೇಕಿದೆ ಎಂಬುದು ಈ ಭಾಗದ ಜನರ ಒತ್ತಾಯವಾಗಿದೆ.

ಆಮೆಗತಿ ಕಾಮಗಾರಿ; ಜನರಿಗೆ ನಿತ್ಯ ನರಕಯಾತನೆ (ETV Bharat)

ಇದನ್ನೂ ಓದಿ: ಜಾತಿ ಗಣತಿ ಬಗ್ಗೆ ಎಲ್ಲ ರಾಜ್ಯಗಳ ಅಭಿಪ್ರಾಯ ಪಡೆದು ಮುಂದಿನ‌ ಕ್ರಮ: ಮಲ್ಲಿಕಾರ್ಜುನ ಖರ್ಗೆ - Mallikarjuna Kharge

Last Updated : Oct 7, 2024, 2:03 PM IST

ABOUT THE AUTHOR

...view details