ಮತ್ಸ್ಯಬೇಟೆಗೆ ಸಮುದ್ರಕ್ಕಿಳಿದ ಕಡಲ ಮಕ್ಕಳು (ETV Bharat) ಮಂಗಳೂರು: ಎರಡು ತಿಂಗಳ ರಜೆಯ ಬಳಿಕ ಮತ್ತೆ ಮತ್ಸ್ಯಬೇಟೆ ಆರಂಭವಾಗಿದೆ. ಕಳೆದ ವರ್ಷದ ಮೀನುಗಾರಿಕೆಯಲ್ಲಿ ಭಾರಿ ನಷ್ಟ ಅನುಭವಿಸಿದ್ದ ಮೀನುಗಾರರು, ಈ ಬಾರಿ ಖುಷಿಯಿಂದಲೇ ಮೀನುಗಾರಿಕೆಗೆ ತೆರಳಿದ್ದಾರೆ. ಈ ಮೂಲಕ ಕರಾವಳಿಯ ಪ್ರಮುಖ ವಾಣಿಜ್ಯ ವಹಿವಾಟಾದ ಮತ್ಸೋದ್ಯಮ ಮತ್ತೆ ಚುರುಕು ಪಡೆದಿದೆ.
ಆಗಸ್ಟ್ 1 ರಿಂದ ಮೀನುಗಾರಿಕೆ ಋತು ಆರಂಭವಾಗಿದ್ದು, ಮಳೆಯ ಅಬ್ಬರ ಕಡಿಮೆಯಾಗುತ್ತಿದ್ದಂತೆ ಮೀನುಗಾರರು ಮತ್ಸ್ಯಬೇಟೆಗೆ ತೆರಳುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,250 ಆಳ ಸಮುದ್ರ ಬೋಟ್ಗಳು ಇವೆ. ಜೂನ್ 1 ರಿಂದ ಜುಲೈ 31 ವರೆಗೆ ಮೀನುಗಾರಿಕೆಗೆ ನಿಷೇಧವಿದ್ದ ಹಿನ್ನೆಲೆ ಬೋಟ್ಗಳಿಗೆ ಬಂದರಿನಲ್ಲಿ ಲಂಗರು ಹಾಕಲಾಗಿತ್ತು. ಆಗಸ್ಟ್ 1 ರಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಬಹುದಾಗಿರುವುದರಿಂದ ಬೋಟ್ಗಳು ಒಂದೊಂದಾಗಿ ಕಡಲಿಗಿಳಿಯುತ್ತಿವೆ.
ಆಗಸ್ಟ್ 1 ರಂದು ಸುಮಾರು 30 ಆಳಸಮುದ್ರ ಮೀನುಗಾರಿಕಾ ಬೋಟ್ಗಳು ಸಮುದ್ರಕ್ಕಿಳಿದಿದ್ದವು. ಆ. 2ರಂದು 150 ಕ್ಕೂ ಹೆಚ್ಚಿನ ಬೋಟ್ಗಳು ಕಡಲಿಗಿಳಿದಿದ್ದು, ಆ ಬಳಿಕ ನಿರಂತರವಾಗಿ ಮತ್ಸ್ಯಬೇಟೆಗೆ ಬೋಟ್ಗಳು ತೆರಳುತ್ತಿವೆ.
2022-23 ರಲ್ಲಿ ಮೀನುಗಾರರಿಗೆ ಮತ್ಸೋದ್ಯಮ ಲಾಭ ತಂದಿತ್ತು. ಆ ವರ್ಷದಲ್ಲಿ 4,154 ಕೋಟಿ ವ್ಯವಹಾರ ನಡೆದಿತ್ತು. ಆದರೆ 2023-24 ರಲ್ಲಿ ಮತ್ಸೋದ್ಯಮ ಕೇವಲ 2,587 ಕೋಟಿ ವಹಿವಾಟು ನಡೆಸಿತ್ತು. ಈ ಬಾರಿ ನೂರಾರು ಬೋಟ್ಗಳು ಹೆಚ್ಚಿನ ಪ್ರಮಾಣದಲ್ಲಿ ಮೀನು ಸಿಗುವ ಉತ್ಸಾಹದೊಂದಿಗೆ ಕಡಲಿಗಿಳಿದಿದೆ. ಸದ್ಯ ಕಡಲಿನಲ್ಲಿ ಮೀನುಗಾರರಿಗೆ ಪೂರಕ ವಾತವರಣವಿದೆ.
ಈ ಬಗ್ಗೆ ಈಟಿವಿ ಭಾರತ್ ಜೊತೆಗೆ ಮಾತನಾಡಿದ ಮೀನುಗಾರರ ಮುಖಂಡ, ಬೋಟ್ ಮಾಲೀಕ ರಾಜರತ್ನ ಸನಿಲ್, “ಕಳೆದ ಬಾರಿ ಆರಂಭದಲ್ಲಿ ನಷ್ಟ ಉಂಟಾಗಿತ್ತು. ಕಳೆದ ಬಾರಿ ಉತ್ತಮ ಆರಂಭ ಆಗಿತ್ತು. ಆದರೆ ಬಳಿಕ ನಷ್ಟದ ಹಾದಿ ಹಿಡಿಯಿತು. ಇದು ಶೇ.90 ರಷ್ಟು ಬೋಟ್ ಮಾಲೀಕರ ಅನುಭವವಾಗಿದೆ. ಕಳೆದ ಬಾರಿಯ ನಷ್ಟ ಈ ಬಾರಿಯ ಲಾಭದಲ್ಲಿ ಸರಿದೂಗಲಿ ಎಂಬುದು ಎಲ್ಲರ ಆಶಯವಾಗಿದೆ" ಎಂದರು.
"ಈ ಬಾರಿ ಮಳೆ - ಗಾಳಿ ಬಂದಿದೆ. ಉತ್ತಮವಾದ ಮಳೆ - ಗಾಳಿ ಬಂದರೆ ಮೀನುಗಾರಿಕೆ ಹೆಚ್ಚು ನಡೆಯುತ್ತದೆ. ಅನಾಹುತಗಳೆಲ್ಲ ಮೀನುಗಾರಿಕಾ ಋತು ಆರಂಭವಾಗುವ ಮುಂಚೆಯೇ ಬಂದಿದೆ. ಆದ್ದರಿಂದ ಈ ಬಾರಿ ಹೆಚ್ಚು ಪ್ರಮಾಣದಲ್ಲಿ ಮೀನು ಸಿಗಬಹುದು ಎಂಬ ನಿರೀಕ್ಷೆ ಇದೆ. ಯಾವುದೇ ಮೀನು ಲೆಕ್ಕಕಿಂತ ಹೆಚ್ಚು ಸಿಕ್ಕಿದರೆ ಬೆಲೆ ಕಡಿಮೆ ಆಗುತ್ತದೆ. ಅಂಜಲ್, ಸಿಗಡಿ, ಬೊಂಡಾಸ್, ಕಪ್ಪೆ ಬಂಡಾಸ್, ಪಾಂಪ್ಲೆಟ್ ಸಿಕ್ಕರೆ ಹೆಚ್ಚು ಲಾಭವಾಗುತ್ತದೆ. ಕಳೆದ ಬಾರಿ ಬಂಗುಡೆ ಮೀನು ಹೇರಳವಾಗಿ ಸಿಕ್ಕ ಕಾರಣ ದರ ಕಡಿಮೆ ಆಯಿತು. ಅದಕ್ಕಾಗಿ ಸಮಾನ ರೀತಿಯಲ್ಲಿ ಮೀನುಗಳು ಸಿಕ್ಕಿದರೆ ಬೋಟ್ ಮಾಲೀಕರು ಲಾಭಕ್ಕೊಳಗಾಗುತ್ತಾರೆ" ಎಂದು ತಿಳಿಸಿದರು.
ಇದನ್ನೂ ಓದಿ:ಮೀನುಗಾರಿಕೆ ಋತು ಆರಂಭದಲ್ಲೇ ಅವಘಡ: ಮಂಗಳೂರಲ್ಲಿ ಬೋಟ್ ಬೆಂಕಿಗಾಹುತಿ - Fishing Boat Catches Fire