ಬೆಂಗಳೂರು: "ಸಿಬಿಐ ತನಿಖೆಗೆ ಮುಕ್ತ ಅನುಮತಿ ಹಿಂಪಡೆದಿರುವ ತೀರ್ಮಾನವನ್ನು ಸಿದ್ದರಾಮಯ್ಯ ರಕ್ಷಣೆಗಾಗಿ ಮಾಡಿಲ್ಲ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರದಲ್ಲಿ ಇಂದು ಮಾತನಾಡಿದ ಅವರು, "ಸಿಬಿಐನವರು ಏನೇನು ಮಾಡ್ತಾರೆ ಅನ್ನೋ ಚರ್ಚೆ ಬೇಡ. ಜೆಡಿಎಸ್, ದೇವೇಗೌಡರು ಏನು ಮಾತನಾಡಿದ್ರು. ಕುಮಾರಸ್ವಾಮಿ ಏನು ಮಾತನಾಡಿದ್ರು. ಬಿಜೆಪಿಯವರು ಏನು ಮಾತನಾಡಿದ್ರು ಗೊತ್ತಿದೆ. ಕಾಂಗ್ರೆಸ್ ಬ್ಯುರೋ ಆಫ್ ಇನ್ವೆಸ್ಟಿಗೇಷನ್ ಏಜೆನ್ಸಿ ಅಂದಿದ್ದರು. ಈಗ ಅದರ ಚರ್ಚೆ ಬೇಡ. ಹಿಂದೆ ಏನು ಕೇಸ್ಗಳು ಇದ್ದವು. ಐಎಂಎ ಕೇಸ್ನಲ್ಲಿ ಸಿಬಿಐ ಏನು ಮಾಡಿತು ಅನ್ನೋದು ಬೇಡ. ಪರಿಶೀಲನೆ ಮಾಡಿ ರಾಜ್ಯದ ಹಿತಕ್ಕೆ ಮಾಡಿದ್ದೇವೆ. ದ್ವೇಷ ರಾಜಕಾರಣಕ್ಕೆ ಸಿಬಿಐ ಬಲಿಯಾಗಬಾರದು. ಹಾಗಾಗಿ ಇದನ್ನು ಮಾಡಿದ್ದೇವೆ. ತುರ್ತು ಏನದ್ರೂ ಇತ್ತು ಅಂದ್ರೆ ನೋಡೋಣ. ನಮ್ಮ ಅಧಿಕಾರಿಗಳು ಆಗಲ್ಲ ಅಂದಾಗ ನೋಡೋಣ" ಎಂದು ತಿಳಿಸಿದರು.
ರಾಜ್ಯಪಾಲರಿಂದ ಪದೇ ಪದೆ ಪತ್ರ ವಿಚಾರವಾಗಿ ಮಾತನಾಡಿ, "ಅದಕ್ಕೆ ಒಂದು ನಿಯಮ ಇದೆ. ರಾಜಭವನಕ್ಕೆ ಮಾಹಿತಿ ಕೊಡಲು ಸಿಎಸ್ ಹೋಗಬೇಕು. ನನಗೂ ರೀಡೂ ಡಿನೋಟಿಫಿಕೇಶನ್ ಫೈಲ್ ಬಂದಿತ್ತು. ಈಗ ಕ್ಯಾಬಿನೆಟ್ ತೀರ್ಮಾನ ಆಗಿದೆ. ಅದಕ್ಕೆ ನಾನು ಉತ್ತರ ಕೊಡಬೇಕಿಲ್ಲ. ಸಬ್ ಕಮಿಟಿ ತೀರ್ಮಾನ ಮಾಡಿದೆ. ಸಿಎಂ ಗಮನಕ್ಕೆ ತಾರದೆ ಮಾತನಾಡೋಕೆ ಆಗುತ್ತಾ? ನನಗೂ ಬ್ಯುಸಿನೆಸ್ ರೂಲ್ಸ್ ಬಗ್ಗೆ ಸಣ್ಣ ಜ್ಞಾನ ಇದೆ. ಬುದ್ಧಿವಂತಿಕೆ ಇಲ್ಲದೆ ಹೋದರೂ ಪ್ರಜ್ಞಾವಂತಿಕೆ ಇದೆ. ಅದಕ್ಕೆ ಸಂಪುಟದಲ್ಲಿ ಚರ್ಚಿಸಿ ಉತ್ತರ ಕೊಡೋಣ ಎಂದು ತೀರ್ಮಾನಿಸಲಾಗಿದೆ" ಎಂದರು.