ಬೆಂಗಳೂರು:ಮಂಡ್ಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ನಡೆದ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೆಆರ್ಎಸ್ ಅಚ್ಚುಕಟ್ಟಿನ ವಿ.ಸಿ.ನಾಲೆಗೆ ನೀರು ಬಿಡಲು ತೀರ್ಮಾನಿಸಲಾಗಿದೆ.
ಈ ಸಂಬಂಧ ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, "15 ದಿನಗಳಿಂದ ಕೆಆರ್ಎಸ್ ಅಚ್ಚುಕಟ್ಟಿನಲ್ಲಿ ವಿ.ಸಿ. ನಾಲೆಗೆ ನೀರು ಬಿಡಬೇಕು ಎಂದು ಒತ್ತಾಯ ಇತ್ತು. ಇದೀಗ ಕೆಆರ್ಎಸ್ನಲ್ಲಿ ನೀರಿನ ಮಟ್ಟ 100 ಅಡಿ ದಾಟಿದೆ. ಸಾಮಾನ್ಯವಾಗಿ ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ನೀರು ಬಿಡುವುದು ಆರಂಭವಾಗುತ್ತದೆ. ಈ ಬಾರಿ ಮಾರ್ಚ್-ಏಪ್ರಿಲ್ನಲ್ಲಿ ನೀರು ಬಿಡಲು ಸಾಧ್ಯವಾಗದ ಕಾರಣ ಕೆರೆಗಳು ಬತ್ತಿ ಹೋಗಿದ್ದವು. ಹೀಗಾಗಿ ಕೆರೆಗಳಿಗೆ ನೀರು ತುಂಬಿಸಲು ಶಾಸಕರು ಒತ್ತಡ ತಂದಿದ್ದರು".
"ಜು. 8ರ ಸಾಯಂಕಾಲದಿಂದ 15 ದಿನ ನೀರು ಬಿಡುಗಡೆ ಮಾಡಲು ತೀರ್ಮಾನ ಮಾಡಲಾಗಿದೆ. ಟೇಲ್ ಎಂಡ್ಗೆ ಹೋಗಬೇಕು. ಮಂಡ್ಯ ಜಿಲ್ಲೆಯ ಎಲ್ಲಾ ಶಾಸಕರ ಒತ್ತಡದ ಹಿನ್ನೆಲೆ ನೀರು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. 10 ದಿನ ಆದ ಮೇಲೆ ಮತ್ತೆ ನೀರು ಬಿಡುಗಡೆ ಸಂಬಂಧ ತೀರ್ಮಾನ ಮಾಡುತ್ತೇವೆ. ಈ ನೀರನ್ನು ಕುಡಿಯುವ ನೀರು, ಕೆರೆ ಕಟ್ಟೆ ತುಂಬಿಸಲು ಮಾತ್ರ ಬಳಕೆ ಮಾಡಲಾಗುತ್ತದೆ. ಯಾವುದೇ ಕೃಷಿ ಚಟುವಟಿಕೆಗಳಿಗೆ ಬಳಸುವಂತಿಲ್ಲ. ಜುಲೈ ವೇಳೆಗೆ ನೀರು ಬಿಡಲು ಮತ್ತೆ ನಿರ್ಧಾರ ಮಾಡುತ್ತೇವೆ" ಎಂದು ಸಚಿವರು ತಿಳಿಸಿದ್ದಾರೆ.
"ನಾಲೆಯಲ್ಲಿ ಸುಮಾರು 30 ಕಿ.ಮೀ ಕಾಮಗಾರಿ ಪೂರ್ಣ ಆಗಿದೆ. 16 ಕಿ.ಮೀ. ಕಾಮಗಾರಿ ಬಾಕಿ ಇದೆ. ನಾಲೆಗಳಿಗೆ ನೀರು ಹರಿಸಲು ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲಾಗಿದೆ. ಅದನ್ನು ನೋಡಿಕೊಂಡು ನೀರು ಬಿಡಲು ನಿರ್ಧರಿಸಲಾಗಿದೆ. ಸುಮಾರು 3000 ಕ್ಯೂಸೆಕ್ಸ್ ನೀರು ಬಿಡುಗಡೆಗೆ ತೀರ್ಮಾನಿಸಲಾಗಿದೆ" ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಹೆಚ್ಡಿಕೆ ರಾಜಕಾರಣ ಮಾಡುವುದು ಬಿಡಲಿ ಎಂದ ಸಚಿವರು:ಮಂಡ್ಯದಲ್ಲಿ ಹೆಚ್ಡಿಕೆ ಜನತಾ ದರ್ಶನ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಚಲುವರಾಯಸ್ವಾಮಿ 'ರಾಷ್ಟ್ರದಲ್ಲಿ ಕೈತುಂಬಾ ಕೆಲಸ ಇವೆ, ಅದನ್ನು ಮಾಡಲಿ ರಾಜಕಾರಣ ಮಾಡೋದು ಬಿಡಲಿ' ಎಂದು ತಿರುಗೇಟು ನೀಡಿದ್ದಾರೆ. ನನ್ನ ಜೊತೆಯೂ ಅಧಿಕಾರಿಗಳು ನಿಂತುಕೊಳ್ಳಬೇಕು ಎಂದು ಹೆಚ್ಡಿಕೆ ಅಂದುಕೊಳ್ಳುವುದು ಸರಿಯಲ್ಲ. ರಾಜಕಾರಣ ಮಾಡುವುದು ನನಗೂ ಗೊತ್ತಿದೆ. ರಾಷ್ಟ್ರ ತುಂಬಾ ಕೆಲಸ ಕೊಟ್ಟಿದ್ದರೂ ರಾಜ್ಯದಲ್ಲಿ ಯಾಕೆ ರಾಜಕಾರಣ ಮಾಡುತ್ತಿದ್ದಾರೆ ಅಂತಾ ಗೊತ್ತಿಲ್ಲ. ಮೈಸೂರು ಹಾಗೂ ರಾಮನಗರ ಜಿಲ್ಲೆಯಿಂದಲೂ ಜನ ಬಂದಿದ್ದರು. ತಪ್ಪೇನಿಲ್ಲ ನಾಯಕರು ಜನತಾದರ್ಶನ ಮಾಡುವಾಗ ಜನ ಬರುತ್ತಾರೆ. ಕೇಂದ್ರದಿಂದ ಬರಬೇಕಾದ ಯೋಜನೆಗಳನ್ನು ಕೊಡಿಸಲಿ. ಶಾಸಕರು ಹಾಗೂ ಸಿಎಂ ಮಾಡುವ ಕೆಲಸವನ್ನು ಹೆಚ್ಡಿಕೆ ಯಾಕೆ ಮಾಡುತ್ತಾರೆ?. ಲೋಕಸಭೆ ಸದಸ್ಯರಿಗೆ ಆಸಕ್ತಿ ಇದ್ದರೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಸಭೆ ನಡೆಸಿ ಮಾಹಿತಿ ಪಡೆಯಲಿ" ಎಂದು ತಿಳಿಸಿದ್ದಾರೆ.