ಕರ್ನಾಟಕ

karnataka

ETV Bharat / state

ಚುನಾವಣೆ ಬಳಿಕ ಗುರು ರಾಘವೇಂದ್ರ ಬ್ಯಾಂಕ್ ಹಗರಣ ತನಿಖೆಗೆ ಎಸ್​​ಐಟಿ ರಚನೆ ಬಗ್ಗೆ ನಿರ್ಧಾರ: ಡಿಸಿಎಂ - GURU RAGHAVENDRA BANK SCAM - GURU RAGHAVENDRA BANK SCAM

ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಹಗರಣದ ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ತನಿಖೆಗೆ ಎಸ್​ಐಟಿ ತಂಡ ರಚನೆ ಮಾಡುವ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.‌

d-k-shivakumar
ಚುನಾವಣೆ ಬಳಿಕ ಗುರು ರಾಘವೇಂದ್ರ ಬ್ಯಾಂಕ್ ಹಗರಣ ತನಿಖೆಗೆ ಎಸ್​​ಐಟಿ ರಚನೆ ಬಗ್ಗೆ ನಿರ್ಧಾರ: ಡಿಸಿಎಂ

By ETV Bharat Karnataka Team

Published : Apr 24, 2024, 3:10 PM IST

Updated : Apr 24, 2024, 3:32 PM IST

ಬೆಂಗಳೂರು: ಚುನಾವಣೆ ಬಳಿಕ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಹಗರಣದ ತನಿಖೆಯನ್ನು ಎಸ್​​ಐಟಿಗೆ ವಹಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಿಳಿಸಿದರು.‌

ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, 2,500 ಕೋಟಿ ರೂ. ಅಕ್ರಮ ಹಾಗೂ 6 ಲಕ್ಷ ರೂ. ಠೇವಣಿದಾರರಿದ್ದ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಹಗರಣದ ತನಿಖೆ ಬಗ್ಗೆ ಎಸ್​​ಐಟಿ ರಚನೆ ಮಾಡುವಂತೆ ಪ್ರಿಯಾಂಕಾ ಗಾಂಧಿ ಅವರು ಸಿಎಂ ಸಿದ್ದರಾಮಯ್ಯಗೆ ಸಲಹೆ ನೀಡಿದ್ದಾರೆ. ರಾಜ್ಯಕ್ಕೆ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಹಾಗೂ ಸಂತ್ರಸ್ತರ ಪರವಾಗಿ ಹೋರಾಟ ಮಾಡುತ್ತಿರುವ ಹೋರಾಟಗಾರರ ನಿಯೋಗವು ಭೇಟಿ ಮಾಡಿ ಮನವಿ ಸಲ್ಲಿಸಿದೆ ಎಂದರು.

ನಿಯೋಗವು ನ್ಯಾಯ ಕೊಡಿಸುವ ನಿಟ್ಟಿನಲ್ಲಿ ತಮ್ಮ ಪರವಾಗಿ ಧ್ವನಿ ಎತ್ತುವಂತೆ ಮನವಿ ಮಾಡಿದೆ. ಇದಕ್ಕೆ ಸ್ಪಂದಿಸಿದ ಪ್ರಿಯಾಂಕಾ ಗಾಂಧಿ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಎಸ್​​ಐಟಿ ರಚನೆ ಮಾಡುವಂತೆ ಸಲಹೆ ಕೊಡುವುದಾಗಿ ತಿಳಿಸಿದ್ದಾರೆ. ಸಿಬಿಐಗೆ ಕೊಡ್ತೇವೆ ಅಂತ ಅಸೆಂಬ್ಲಿಯಲ್ಲಿ ಅಂದಿದ್ದರು. ಸಿಬಿಐಗೆ ಕೊಟ್ಟರೂ ಕೂಡ ತನಿಖೆ ಪ್ರಾರಂಭವಾಗಿಲ್ಲ. ಈ ಹಗರಣದಲ್ಲಿ ಬಿಜೆಪಿ ನಾಯಕರೇ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ. ಹಾಗಾಗಿ, ಪ್ರಕರಣದ ತನಿಖೆಯನ್ನು ಕೈಗೊಂಡಿಲ್ಲ. ಇದರಿಂದಾಗಿ ಲಕ್ಷಾಂತರ ಮಂದಿ ಠೇವಣಿದಾರರು ಬೀದಿಗೆ ಬಿದ್ದಿದ್ದಾರೆ. ಅವರಿಗೆ ನ್ಯಾಯ ಸಿಗಬೇಕಿದೆ ಎಂದು ತಿಳಿಸಿದರು.

ಕೆ.ಪಿ. ನಂಜುಂಡಿ ಕಾಂಗ್ರೆಸ್ ಸೇರ್ಪಡೆ:ವಿಶ್ವಕರ್ಮ ಸಮುದಾಯದ ಪ್ರಬಲ ಮುಖಂಡ ಕೆ.ಪಿ. ನಂಜುಂಡಿ ಅವರು ಬಿಜೆಪಿ ಮತ್ತು ವಿಧಾನಪರಿಷತ್ ಸ್ಥಾನ ತೊರೆದು, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಮ್ಮುಖದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ವಿಧಾನಪರಿಷತ್​​ ಮುಖ್ಯ ಸಚೇತಕ ಸಲೀಂ ಅಹ್ಮದ್, ವಿಧಾನಪರಿಷತ್​​ ಸದಸ್ಯ ದಿನೇಶ್ ಗೂಳಿಗೌಡ, ಬೆಂಗಳೂರು ದಕ್ಷಿಣ ಲೋಕಸಭಾ ಅಭ್ಯರ್ಥಿ ಸೌಮ್ಯ ರೆಡ್ಡಿ ಉಪಸ್ಥಿತರಿದ್ದರು.

ಕೆ.ಪಿ.ನಂಜುಂಡಿ ಕಾಂಗ್ರೆಸ್ ಸೇರ್ಪಡೆ

ಇದೇ ವೇಳೆ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲಾ, ಇಂದು ಶ್ರಮಿಕ ವರ್ಗದ ಜನರು ಸಂಭ್ರಮಿಸುವ ದಿನ. ನಮ್ಮ ಹಿಂದುಳಿದ ವರ್ಗದ ನಾಯಕರಾದ ಕೆ.ಜಿ. ನಂಜುಂಡಿ ಅವರು ಮನೆಗೆ ಮರಳಿದ್ದಾರೆ. ಅವರಿಗೆ ನನ್ನ ಹೃತ್ಪೂರ್ವಕ ಸ್ವಾಗತ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರ ಪರವಾಗಿ ಸ್ವಾಗತ ಕೋರುತ್ತೇನೆ. ಇಂದು ಭಾರತದ ಸಂವಿಧಾನ ದಾಳಿಗೊಳಗಾಗುತ್ತಿರುವ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿ ಹೋರಾಟ ಮಾಡಬೇಕಾಗಿದೆ. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ವ್ಯವಸ್ಥಿತವಾಗಿ ನಾಶ ಮಾಡಲಾಗುತ್ತಿದೆ. ಒಂದು ಕಡೆ ಬಿಜೆಪಿಯ ನಾಯಕರಾದ ಅನಂತ ಕುಮಾರ್ ಹೆಗಡೆ, ಅರುಣ್ ಗೋಯಲ್, ಲಲ್ಲು ಸಿಂಗ್, ಜ್ಯೋತಿ ಮಿರ್ಬೆನ್ ಅವರು ಬಹಿರಂಗವಾಗಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡಲಿದೆ ಎಂದು ಹೇಳುತ್ತಿದ್ದಾರೆ ಎಂದು ದೂರಿದರು.

ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಶೋಷಿತ, ಹಿಂದುಳಿದ ಸಮುದಾಯಗಳ ರಕ್ಷಣೆಗೆ ಮುಂದಾಗಬೇಕು. ನಂಜುಂಡಿ ಅವರು ಕೇವಲ ವಿಶ್ವಕರ್ಮ ಸಮಾಜ ಮಾತ್ರವಲ್ಲ, ಹಿಂದುಳಿದ ವರ್ಗಗಳ ಧ್ವನಿಯಾಗಿದ್ದಾರೆ? ಪರಿಶ್ರಮದ ದೇವರು ವಿಶ್ವಕರ್ಮ ಆಗಿದ್ದಾರೆ. ಜಗತ್ತಿನಲ್ಲಿ ಪರಿಶ್ರಮ ಇಲ್ಲದೆ ಏನಾದರೂ ಸಾಧನೆ ಮಾಡಲು ಸಾಧ್ಯವೇ ಇಲ್ಲ ಎಂದರು.

ಇದನ್ನೂ ಓದಿ:ದೇಶಭಕ್ತಿ ಗುತ್ತಿಗೆ ತೆಗೆದುಕೊಂಡ ಹಾಗೆ ಬಿಜೆಪಿಯವರು ಮಾತನಾಡುತ್ತಾರೆ: ಮಾಜಿ ಡಿಸಿಎಂ ಸವದಿ ಗುಡುಗು

Last Updated : Apr 24, 2024, 3:32 PM IST

ABOUT THE AUTHOR

...view details