ಮಂಗಳೂರು:ಭಾನುವಾರ ಮುಂಜಾನೆ ಕೂಳೂರು ಸೇತುವೆ ಬಳಿ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದ ಉದ್ಯಮಿ ಮುಮ್ತಾಜ್ ಅಲಿ ಅವರ ಮೃತದೇಹ ಕೂಳೂರಿನ ಫಲ್ಗುಣಿ ನದಿಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದೆ. ಮೃತದೇಹ ಪತ್ತೆಯಾದ ಕೂಡಲೇ ಅದನ್ನು ಮರಣೋತ್ತರ ಪರೀಕ್ಷೆಗೆ ನಗರದ ಎಜೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ.
ಭಾನುವಾರ ಬೆಳಗ್ಗೆ ಉಡುಪಿ- ಮಂಗಳೂರಿನ ಕೂಳೂರು ಸೇತುವೆಯ ಮೇಲೆ ಮುಮ್ತಾಜ್ ಅವರ ಕಾರು ಪತ್ತೆಯಾಗಿತ್ತು. ಅಲ್ಲದೆ, ಕಾರಿನ ಮುಂಭಾಗದ ಬಲಬದಿ ಅಪಘಾತದಿಂದ ಹಾನಿಯಾಗಿತ್ತು. ನಿನ್ನೆ ಮುಂಜಾನೆ 3 ಗಂಟೆ ಸುಮಾರಿಗೆ ಮುಮ್ತಾಜ್ ಅಲಿ ತನ್ನ ಕಾರಿನಲ್ಲಿ ಮನೆಯಿಂದ ಹೊರಟು ನಗರದೆಲ್ಲೆಡೆ ಸುತ್ತಾಡಿದ್ದು, 5 ಗಂಟೆ ಸುಮಾರಿಗೆ ಕೂಳೂರು ಸೇತುವೆ ಬಳಿ ಕಾರನ್ನು ನಿಲ್ಲಿಸಿದ್ದಾರೆ. ಆ ಬಳಿಕ ನದಿಗೆ ಹಾರಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಆರು ಮಂದಿ ವಿರುದ್ಧ ಪ್ರಕರಣ:ಮುಮ್ತಾಜ್ ಅಲಿ ಅವರನ್ನು ನಿರಂತರವಾಗಿ ಬೆದರಿಸಿ, ಬ್ಲ್ಯಾಕ್ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಹಣವನ್ನು ಕಿತ್ತುಕೊಂಡು ಮತ್ತಷ್ಟು ಹಣಕ್ಕೆ ಬೆದರಿಕೆಯಿಟ್ಟ ಆರೋಪದಲ್ಲಿ ಮಹಿಳೆ ಸೇರಿದಂತೆ 6 ಮಂದಿ ಆರೋಪಿಗಳ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ (BNSS) 173ರ ಅಡಿ ಎಫ್ಐಆರ್ ದಾಖಲಾಗಿದೆ.
ಮಹಿಳೆಯನ್ನು ಬಳಸಿಕೊಂಡು ದುರುದ್ದೇಶದಿಂದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ರೆಹಮತ್, ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶುಐಬ್, ಸತ್ತಾರ್ ಅವರ ಕಾರು ಚಾಲಕ ಸಿರಾಜ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
"ನನ್ನ ಸಹೋದರ ಮುಮ್ತಾಜ್ ಅಲಿ ಸಮಾಜದಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿದ್ದು, ಕಳೆದ 30 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿದ್ದರು. ಸಮಾಜ ಸೇವೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಹಲವು ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರಾಗಿದ್ದರು. ಅವರ ಪ್ರಸಿದ್ಧಿಯನ್ನು ಹಾಳು ಮಾಡುವ ಉದ್ದೇಶದಿಂದ ಆರೋಪಿಗಳೆಲ್ಲರೂ ಸೇರಿಕೊಂಡು ಅವರು ಆತ್ಮಹತ್ಯೆಗೆ ಶರಣಾಗುವಂತೆ ಪ್ರಚೋದನೆ ನೀಡಿದ್ದಾರೆ" ಎಂದು ದೂರಿನಲ್ಲಿ ಮೃತ ಮುಮ್ತಾಜ್ ಅಲಿ ಸಹೋದರ ಹೈದರ್ ಅಲಿ ತಿಳಿಸಿದ್ದಾರೆ.
ಎಫ್ಐಆರ್ನಲ್ಲಿ ಏನಿದೆ?ಬಿ.ಎಂ ಮುಮ್ರಾಜ್ ಆಲಿ ಅವರು ಅಕ್ಟೋಬರ್ 06 ರಂದು ಬೆಳಿಗ್ಗೆ 4 ಗಂಟೆಗೆ ಕೂಳೂರು ಬಳಿ ಇರುವ ಸೇತುವೆಯ ಬಳಿ ಕಾರನ್ನು ನಿಲ್ಲಿಸಿ ಆರೋಪಿತರ ಪ್ರಚೋದನೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿರುವ ಬಗ್ಗೆ ಅನುಮಾನವಿದೆ. ನಮ್ಮ ಸಹೋದರನಿಗೆ 2024 ನೇ ಜುಲೈ ತಿಂಗಳಿನಿಂದ ಇಲ್ಲಿಯವರೆಗೆ ಬ್ಲಾಕ್ ಮೇಲ್ ಮಾಡಿ ನಿರಂತರ ಬೆದರಿಸಿ ಲಕ್ಷಾಂತರ ರೂಪಾಯಿ ಹಣವನ್ನು ಕಿತ್ತುಕೊಂಡು ಮತ್ತಷ್ಟು ಹಣಕ್ಕೆ ಬೆದರಿಕೆ ನೀಡಿದ ಆರೋಪಿಗಳಾದ ರೆಹಮತ್ ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶೋಯಬ್, ಸಿರಾಜ್ (ಅಬ್ದುಲ್ ಸತ್ತಾರ ಕಾರು ಚಾಲಕ) ವಿರುದ್ಧ ಕ್ರಮ ಜರುಗಿಸುವಂತೆ ಉದ್ಯಮಿಯ ಸಹೋದರ ಹೈದರ್ ಅಲಿ ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದರು.
ಸಹೋದರ ಮುಮ್ತಾಜ್ ಗೌರವಾನ್ವಿತ ವ್ಯಕ್ತಿಯಾಗಿದ್ದು, ಕಳೆದ 30 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಸಮಾಜ ಸೇವೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಅಲ್ಲದೇ ಹಲವು ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರಾಗಿದ್ದು, ಅವರ ಪ್ರಸಿದ್ಧಿಯನ್ನು ಹಾಳು ಮಾಡುವ ಉದ್ದೇಶದಿಂದ ಆರೋಪಿತಗಳು ಸೇರಿಕೊಂಡು ಷಡ್ಯಂತ್ರ ರೂಪಿಸಿದ್ದರು. ಸತ್ತಾರ್ ಎಂಬಾತ ಅಣ್ಣನ ರಾಜಕೀಯ ವಿರೋಧಿಯಾಗಿದ್ದು, ಸಂಚು ರೂಪಿಸಿದ್ದರು. ಅಲ್ಲದೇ ಹಲವು ಬಾರಿ ದೈಹಿಕವಾಗಿ ಅಣ್ಣನ ಮೇಲೆ ಹಲ್ಲೆ ಮಾಡಿದ್ದಾರೆ. ಅಕ್ರಮ ಸಂಬಂಧದ ಬಗ್ಗೆ ಸುಳ್ಳು ಪ್ರಚಾರ ಮಾಡಿ ಹೆಸರನ್ನು ಹಾಳು ಮಾಡುತ್ತೇನೆ ಎಂದು ಹೆದರಿಸಿ ಈಗಾಗಲೇ 50 ಲಕ್ಷಕ್ಕಿಂತಲೂ ಅಧಿಕ ಮೊತ್ತವನ್ನು ಪಡೆದಿದ್ದರು. ಅಲ್ಲದೇ 25 ಲಕ್ಷ ರೂ.ನ ಚೆಕ್ಅನ್ನು ಬ್ಲಾಕ್ ಮೇಲ್ ಮಾಡಿ ಪಡೆದು ಹಣ ಪಡೆದಿರುತ್ತಾರೆ. ಮತ್ತೆ 50 ಲಕ್ಷ ಹಣ ಕೊಡಬೇಕೆಂದು ಆರೋಪಿಗಳು ನಿರಂತರ ಬೆದರಿಕೆ ಹಾಕಿದ ವಿಚಾರವನ್ನು ನಮ್ಮ ಅಣ್ಣ ತಿಳಿಸಿದ್ದರು ಎಂದು ಹೈದರ್ ಅಲಿ ದೂರಿನಲ್ಲಿ ದಾಖಲಿಸಿದ್ದಾರೆ.
ಇದನ್ನೂ ಓದಿ:ಮಾಜಿ ಶಾಸಕ ಮೊಯ್ದಿನ್ ಬಾವ ಸಹೋದರ ನಾಪತ್ತೆ: ಕೂಳೂರು ಸೇತುವೆ ಮೇಲೆ ಕಾರು ಪತ್ತೆ - Moidin Bava Brother Missing