ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಮೃತ ಪ್ರಾಣಿಗಳ‌ ಅಂತ್ಯ ಸಂಸ್ಕಾರ ‌ಘಟಕ: ಇದು ರಾಜ್ಯದಲ್ಲಿಯೇ ಪ್ರಥಮ - DEAD ANIMAL CREMATION UNIT

ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಮೃತ ಪ್ರಾಣಿಗಳ ಅಂತ್ಯಸಂಸ್ಕಾರಕ್ಕೆ ಘಟಕಗಳನ್ನ ಪ್ರಾರಂಭಿಸುತ್ತಿದೆ. ಈ ಬಗ್ಗೆ 'ಈಟಿವಿ ಭಾರತ'ದ ಹುಬ್ಬಳ್ಳಿ ಪ್ರತಿನಿಧಿ ಹೆಚ್.ಬಿ.ಗಡ್ಡದ ಅವರ ವಿಶೇಷ ವರದಿ ಇಲ್ಲಿದೆ.

dead-animal-cremation-unit-started-in-dharwad
ಮೃತ ಪ್ರಾಣಿಗಳ‌ ಅಂತ್ಯ ಸಂಸ್ಕಾರ ‌ಘಟಕ (ETV Bharat)

By ETV Bharat Karnataka Team

Published : Nov 28, 2024, 6:29 PM IST

ಹುಬ್ಬಳ್ಳಿ :ಮನುಷ್ಯರ ಶವಸಂಸ್ಕಾರಕ್ಕೆ ಯಂತ್ರಗಳಿವೆ‌.‌ ಅದರಂತೆ ಮೃತ ಪ್ರಾಣಿಗಳ ಅಂತ್ಯಸಂಸ್ಕಾರಕ್ಕೂ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಘಟಕಗಳನ್ನ ಪ್ರಾರಂಭಿಸುತ್ತಿದೆ. ರಾಜ್ಯದಲ್ಲಿಯೇ ಪ್ರಥಮವಾಗಿ ಪ್ರಾಣಿಗಳ ಅಂತ್ಯಕ್ರಿಯೆ ಘಟಕ ಸ್ಥಾಪನೆ ಮಾಡಿದ್ದು, ಪ್ರಾಯೋಗಿಕ ಹಂತ ಮಾತ್ರ ಬಾಕಿ ಉಳಿದುಕೊಂಡಿದೆ.

ಇನ್ಮುಂದೆ ಸತ್ತ ಪ್ರಾಣಿಗಳ ದಹನವೂ (ಸುಡುವುದು) ಆಗಲಿದೆ. ಇದಕ್ಕಾಗಿ ಹು - ಧಾ ಮಹಾನಗರ ಪಾಲಿಕೆ ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ಎರಡು ಘಟಕಗಳ ಕಾಮಗಾರಿ ಮುಗಿಸಿದೆ. ಇದಕ್ಕೆ ಒಟ್ಟು 1.6 ಕೋಟಿ ರೂ. ಖರ್ಚಾಗಿದೆ. 15 ನೇ ಹಣಕಾಸು ಆಯೋಗದಡಿ ಅನುದಾನವನ್ನು ಮಹಾನಗರ ಪಾಲಿಕೆ ಬಿಡುಗಡೆಗೊಳಿಸಿದೆ. ಹುಬ್ಬಳ್ಳಿಯ ಕಾರವಾರ ರಸ್ತೆಯ ತ್ಯಾಜ್ಯ ಸಂಸ್ಕರಣಾ ಘಟಕ ಹಾಗೂ ಧಾರವಾಡ ಹೊಸಯಲ್ಲಾಪುರ ಬಳಿಯ ತ್ಯಾಜ್ಯ ಸಂಸ್ಕರಣಾ ಘಟಕದ ಬಳಿ ಪ್ರಾಣಿಗಳ ದಹನ ಘಟಕ ತೆರೆಯಲಾಗಿದೆ.

ಅವಳಿ ನಗರದಲ್ಲಿ ಸಾಕು ಪ್ರಾಣಿಗಳನ್ನು ಹೂಳಲು ಅಥವಾ ಸುಡಲು ನಿಗದಿತ ಸ್ಥಳ ಇರಲಿಲ್ಲ. ಮೃತ ಪ್ರಾಣಿಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದರು. ಇದರಿಂದ ಕೊಳೆತ ವಾಸನೆಯಿಂದ ಸಾರ್ವಜನಿಕರು ‌ಕಿರಿಕಿರಿ ಅನುಭವಿಸುತ್ತಿದ್ದರು. ಸಾಕುಪ್ರಾಣಿ ಮಾಲೀಕರಿಗೆ ಎರಡು ಆಯ್ಕೆಗಳಿದ್ದವು. ತಮ್ಮ ಸಾಕು ಪ್ರಾಣಿಗಳನ್ನು ತಮ್ಮ ಹಿತ್ತಲಿನಲ್ಲಿ ಹೂತು ಹಾಕುವುದು ಅಥವಾ ಪಾಲಿಕೆ ವಾಹನಗಳಿಗೆ ಹಸ್ತಾಂತರ ಮಾಡುವುದಾಗಿತ್ತು. ಆದರೀಗ, ಸಾಕಷ್ಟು ಜನರು ಮಹಾನಗರ ಪಾಲಿಕೆ ನಿಯಂತ್ರಣಾ ಕೊಠಡಿಗೆ ಕರೆ ಮಾಡುತ್ತಿದ್ದು, ಸಾಕು ಪ್ರಾಣಿಗಳ ಸ್ಮಶಾನ ಘಟಕ ಸ್ಥಾಪಿಸಲು ಒತ್ತಾಯ ಕೇಳಿ ಬಂದಿದ್ದವು.

ಹು-ಧಾ ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಇಂಜಿನಿಯರ್ ಆರ್ ವಿಜಯಕುಮಾರ್ ಮಾತನಾಡಿದ್ದಾರೆ (ETV Bharat)

ದೂರುಗಳ ಆಧಾರದ ಮೇಲೆ ಕ್ಯಾಟ್ ವ್ಹೇಹಿಕಲ್​ಗಳು ಸತ್ತ ಪ್ರಾಣಿಗಳನ್ನು ತ್ಯಾಜ್ಯ ಘಟಕಗಳಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿತ್ತು. ಅದು ವೈಜ್ಞಾನಿಕವಾಗಿರಲಿಲ್ಲ. ಮಹಾನಗರ‌ ಪಾಲಿಕೆ ವೈಜ್ಞಾನಿಕವಾಗಿ ಪ್ರಾಣಿಗಳನ್ನು ಅಂತ್ಯಕ್ರಿಯೆ ಮಾಡುವುದರ ಜೊತೆಗೆ ಪ್ರಾಣಿಗಳೂ ಕೂಡ ಮನುಷ್ಯನಂತೆ ಎಂಬ ಭಾವನೆಯಿಂದ ಪ್ರಾಣಿಗಳ ದಹನ ಘಟಕ ಸ್ಥಾಪಿಸುತ್ತಿದೆ.

ಯಾವುದೇ ಪ್ರಾಣಿಗಳ ಅಂತ್ಯಕ್ರಿಯೆ : ಈ ಕುರಿತಂತೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಇಂಜಿನಿಯರ್ ಆರ್. ವಿಜಯಕುಮಾರ್ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, ''ಪ್ರಾಣಿಗಳನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ‌ಮಾಡುವ ಉದ್ದೇಶದಿಂದ ಎರಡು ಘಟಕ ಸ್ಥಾಪನೆ ಮಾಡಲಾಗಿದೆ. ಬೀದಿ‌ನಾಯಿಗಳು, ಸಾಕು ಪ್ರಾಣಿಗಳು ಸೇರಿದಂತೆ ಯಾವುದೇ ಪ್ರಾಣಿಗಳನ್ನು ಅಂತ್ಯಕ್ರಿಯೆ ಮಾಡಲಾಗುತ್ತದೆ. ಪ್ರಾಣಿಗಳು ಸತ್ತ ಕೂಡಲೇ ಹುಬ್ಬಳ್ಳಿ- ಧಾರವಾಡ ಸಹಾಯವಾಣಿಗೆ ಕರೆ ಮಾಡಿದ್ರೆ ಪಾಲಿಕೆ ಸಿಬ್ಬಂದಿ ಸತ್ತ ಪ್ರಾಣಿಗಳನ್ನು ತೆಗೆದುಕೊಂಡು ಬಂದು ಗೌರವಯುತವಾಗಿ ಅಂತ್ಯಕ್ರಿಯೆ ‌ಮಾಡುತ್ತಾರೆ. ಸಾರ್ವಜನಿಕರು‌ ಕೂಡ ತಾವೇ ಬಂದು ಅಂತ್ಯಕ್ರಿಯೆ ಮಾಡಬಹುದು'' ಎಂದರು.

30 ಮೀಟರ್ ಎತ್ತರದ ಚಿಮಣಿ : ''ಒಂದು ತಾಸಿಗೆ 80-100 ಕೆಜಿ ತೂಕದ ಪ್ರಾಣಿಗಳನ್ನು ಇದರಲ್ಲಿ ದಹನ ಮಾಡಬಹುದು. ದಹನ ಯಂತ್ರಕ್ಕೆ ಸಂಬಂಧಿಸಿದಂತೆ ಸಿವಿಲ್‌ ಕಾಮಗಾರಿ ಮುಗಿದೆ. ಇನ್ನಷ್ಟು ತಾಂತ್ರಿಕ ಕಾಮಗಾರಿಗಳು ಬಾಕಿ ಉಳಿದಿವೆ. ಸದ್ಯಕ್ಕೆ ಸ್ಪಾರ್ಕ್ ಹಾಗೂ ಕೆಲ ಸಾಮಗ್ರಿಗಳ ಜೋಡಣೆ ಉಳಿದುಕೊಂಡಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಸಂಪರ್ಕ ಕಲ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ. 30 ಮೀಟರ್ ಎತ್ತರದ ಚಿಮಣಿ ನಿರ್ಮಿಸಿದ್ದು, ಯಾವುದೇ ಮಾಲಿನ್ಯ ಉಂಟಾಗದಂತೆ ತಡೆಯಲಿದೆ'' ಎಂದು ಹೇಳಿದ್ದಾರೆ.

ಕೆಲ ಉಪಕರಣಗಳ ಜೋಡಣೆ ಮಾತ್ರ ಬಾಕಿ: ಈ‌ ಹಿಂದಿನ‌ ಅಂಕಿ - ಅಂಶಗಳ ಪ್ರಕಾರ, ಪ್ರತಿ ತಿಂಗಳು 250-300 ದೂರುಗಳು ಸಹಾಯವಾಣಿಗೆ ಬರುತ್ತಿವೆ. ಸಣ್ಣ ಹೆಗ್ಗಣದಿಂದ ಹಿಡಿದು ದನಕರುಗಳವರೆಗೆ ದೂರುಗಳು ಬರುತ್ತವೆ. ಯಥಾಪ್ರಕಾರ ದೂರುಗಳ ಆಧಾರದ ಮೇಲೆ ಸತ್ತ ಪ್ರಾಣಿಗಳನ್ನು ವಾಹನಗಳ ಮೂಲಕ ಸಾಗಿಸಿ ತ್ಯಾಜ್ಯ ಘಟಕಗಳಲ್ಲಿ ಹೂಳಲಾಗುತ್ತಿತ್ತು.‌ ಈಗ ಎರಡು ಘಟಕಗಳು ಸಿದ್ದವಾಗಿವೆ. ಕಾರ್ಯಾಚರಣೆ ಹಂತಕ್ಕೆ ಬಂದಿದ್ದು, ವೈಜ್ಞಾನಿಕವಾಗಿ ಅಂತ್ಯಕ್ರಿಯೆ ಮಾಡಲಾಗುವುದು.‌ ಸ್ಪಾರ್ಕ್ ಮತ್ತು ಪುಣೆಯಿಂದ ಬರುವ ಕೆಲ ಉಪಕರಣಗಳ ಜೋಡಣೆ ಮಾತ್ರ ಬಾಕಿ ಇದೆ ಎಂದಿದ್ದಾರೆ.

ಅಂತ್ಯಸಂಸ್ಕಾರಕ್ಕೆ ಪ್ರತ್ಯೇಕ ಘಟಕಗಳು ಇಲ್ಲ: ಇನ್ನು ಕೆಲವೇ ದಿನಗಳಲ್ಲಿ ಪ್ರಾಯೋಗಿಕ‌ ಪರೀಕ್ಷೆ ಮಾಡಲಾಗುತ್ತಿದೆ. ಅದಾದ ನಂತರ ಗ್ಯಾಸ್ ಸಂಪರ್ಕ ಕಲ್ಪಿಸಿ 15-20 ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ. ಸದ್ಯಕ್ಕೆ ವಾಣಿಜ್ಯ ಬಳಕೆಯ ಗ್ಯಾಸ್​ ಬಳಕೆ ಮಾಡಲಾಗುತ್ತಿದೆ‌. ನಂತರ ಅದಾನಿ‌ ಕಂಪನಿಯ ವಾಣಿಜ್ಯ ಬಳಕೆ ಗ್ಯಾಸ್ ಸಂಪರ್ಕ ಪಡೆದು ಕಾರ್ಯಾರಂಭ ಮಾಡಲಾಗುತ್ತದೆ. ರಾಜ್ಯದಲ್ಲಿ ಇಲ್ಲಿಯವರೆಗೂ ಸತ್ತ ಪ್ರಾಣಿಗಳ ಅಂತ್ಯಸಂಸ್ಕಾರಕ್ಕೆ ಪ್ರತ್ಯೇಕ ಘಟಕಗಳು ಇಲ್ಲ. ರಾಜ್ಯದಲ್ಲಿ ‌ಇದೇ ಪ್ರಥಮ ಎಂದು ಮಾಹಿತಿ ‌ನೀಡಿದರು.

ಒಂದು ವರ್ಷದಲ್ಲಿ 1,336 ದೂರು ಸ್ವೀಕಾರ :ಮಹಾನಗರ ಪಾಲಿಕೆ ನಿಯಂತ್ರಣಾ ಕೊಠಡಿಗೆ ಸತ್ತ ಪ್ರಾಣಿಗಳ ಬಗ್ಗೆ ಪ್ರತಿ ದಿನ 3 ರಿಂದ 4 ದೂರುಗಳು ಬರುತ್ತವೆ. ಕಳೆದ ಒಂದು ವರ್ಷದಲ್ಲಿ ಸತ್ತ 6 ಪ್ರಾಣಿಗಳಿಗೆ ಸಂಬಂಧಿಸಿದಂತೆ ಹುಬ್ಬಳ್ಳಿಯಿಂದ 936, ಧಾರವಾಡದಿಂದ 430 ಸೇರಿ ಒಟ್ಟು 1,336 ದೂರುಗಳನ್ನು ಸ್ವೀಕರಿಸಲಾಗಿದೆ.

ನಗರಾಭಿವೃದ್ಧಿ ಇಲಾಖೆ ನಿರ್ದೇಶನ :ಸಾಕು ಪ್ರಾಣಿಗಳಿಗೆ ಸ್ಮಶಾನ ಇಲ್ಲದಿರುವ ಕುರಿತು ಜನರು ಪ್ರಾಣಿ ಕಲ್ಯಾಣ ಮಂಡಳಿಗೆ ದೂರು ನೀಡಿದ್ದರು. ಈ ನಿಟ್ಟಿನಲ್ಲಿ 2021ರಲ್ಲಿ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಪಿ. ಮಣಿವಣ್ಣನ್ ಅವರು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು. ಹು-ಧಾ ಅವಳಿನಗರದಲ್ಲಿ ಪ್ರಾಣಿಗಳ ಚಿತಾಗಾರ ಸ್ಥಾಪಿಸುವುದರ ಅಗತ್ಯತೆ ವಿವರಿಸಿದ್ದರು. ಇದರ ಆಧಾರದ ಮೇಲೆಯೇ ಪ್ರಾಣಿಗಳಿಗೆ ಸ್ಮಶಾನ ಸ್ಥಾಪಿಸಲು ನಗರಾಭಿವೃದ್ಧಿ ಇಲಾಖೆಯು ಮಹಾನಗರ ಪಾಲಿಕೆಗೆ ನಿರ್ದೇಶನ ನೀಡಿತ್ತು.

ಪ್ರಾಣಿ ಪ್ರಿಯರಿಂದ ಮೆಚ್ಚುಗೆ : ಪ್ರಾಣಿಗಳ ಅಂತ್ಯಕ್ರಿಯೆಗೆ ಪ್ರತ್ಯೇಕ ಘಟಕ ಸ್ಥಾಪನೆ ಮಾಡಿದ್ದಕ್ಕೆ ಪ್ರಾಣಿಪ್ರಿಯ ಈರಪ್ಪ ನಾಯ್ಕರ್ ಹರ್ಷ ವ್ಯಕ್ತಪಡಿಸಿದ್ದಾರೆ. 'ನಾವು ಪ್ರೀತಿಯಿಂದ ಸಾಕಿದ ನಾಯಿ, ಬೆಕ್ಕು ಸತ್ತ ಮೇಲೆ ಎಲ್ಲಿ ಅಂತ್ಯಕ್ರಿಯೆ ‌ಮಾಡಬೇಕು ಎಂಬ ಚಿಂತೆ ಕಾಡುತ್ತಿದೆ. ಸ್ವಂತ ಜಾಗವಿದ್ದವರು ತಮ್ಮ ಜಾಗದಲ್ಲಿ ಅಂತ್ಯಕ್ರಿಯೆ ‌ಮಾಡುತ್ತಾರೆ. ಇಲ್ಲದವರು ಸಾಕಷ್ಟು ಪರದಾಡುವ ಸ್ಥಿತಿ‌ ಇತ್ತು. ಮೂಕ ಪ್ರಾಣಿಗಳಿಗೂ ಕೂಡ ಗೌರವಯುತವಾಗಿ ಅಂತ್ಯಕ್ರಿಯೆ ‌ಮಾಡಲು ಮಹಾನಗರ ‌ಪಾಲಿಕೆ ತೆಗೆದುಕೊಂಡ ಕಾರ್ಯ ಶ್ಲಾಘನೀಯವಾಗಿದೆ' ಎಂದು ಹೇಳಿದ್ದಾರೆ.

ಇದನ್ನೂ ಓದಿ :ಹುಬ್ಬಳ್ಳಿಯಲ್ಲಿ ಮೃತ ಪ್ರಾಣಿಗಳ ಅಂತ್ಯಕ್ರಿಯೆಗೆ ವಿದ್ಯುತ್‌ ಚಿತಾಗಾರ; ಪ್ರಾಣಿಪ್ರಿಯರ ಮೆಚ್ಚುಗೆ

ABOUT THE AUTHOR

...view details