ಕರ್ನಾಟಕ

karnataka

ETV Bharat / state

ಗುಂಡಿನ ಬೆದರಿಕೆಗೆ ಹೆದರುವ ರಕ್ತ ಡಿ ಕೆ ಸುರೇಶ್ ಮೈಯಲ್ಲಿ ಹರಿಯುತ್ತಿಲ್ಲ: ಡಿಸಿಎಂ ಡಿ ಕೆ ಶಿವಕುಮಾರ್

ನಮ್ಮ ವಿಚಾರಕ್ಕೆ ಬಂದವರಿಗೆ ಒಂದೊಂದೇ ಹಂತದಲ್ಲಿ ಸೆಟ್ಲಮೆಂಟ್ ಆಗಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್​ ಅವರು ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

Etv Bharatdcm-dk-sivakumar-reaction-on-eshwarappa-statement
ಗುಂಡಿನ ಬೆದರಿಕೆಗೆ ಹೆದರುವ ರಕ್ತ ಡಿ ಕೆ ಸುರೇಶ್ ಮೈಯಲ್ಲಿ ಹರಿಯುತ್ತಿಲ್ಲ: ಡಿಸಿಎಂ ಡಿ ಕೆ ಶಿವಕುಮಾರ್

By ETV Bharat Karnataka Team

Published : Feb 10, 2024, 3:37 PM IST

ಡಿಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: "ಈಶ್ವರಪ್ಪನವರ ಗುಂಡಿನ ಬೆದರಿಕೆಗೆ ಹೆದರುವ ರಕ್ತ ಡಿ ಕೆ ಸುರೇಶ್ ಅವರ ಮೈಯಲ್ಲಿ ಹರಿಯುತ್ತಿಲ್ಲ" ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು. ನಗರದ ಖಾಸಗಿ ಹೋಟೆಲ್​ನಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸಮಿತಿ ಸಭೆ ಸಂದರ್ಭದಲ್ಲಿ ಮಾಧ್ಯಮಗಳು, ಸಂಸದ ಡಿ ಕೆ ಸುರೇಶ್ ಅವರಂತೆ ದೇಶವಿಭಜನೆಯ ಹೇಳಿಕೆ ನೀಡುವವರಿಗೆ ಗುಂಡಿಕ್ಕುವ ಕಾನೂನು ತರಬೇಕೆಂದು ತಾವು ನೀಡಿದ್ದ ಹೇಳಿಕೆಗೆ ಕ್ಷಮೆ ಕೇಳುವುದಿಲ್ಲ ಎಂಬ ಈಶ್ವರಪ್ಪ ಅವರ ಮಾತಿನ ಬಗ್ಗೆ ಪ್ರತಿಕ್ರಿಯಿಸಿದರು. "ಅವರಿಗೆ ಕ್ಷಮೆ ಕೇಳಿ ಎಂದು ಯಾರೂ ಹೇಳಿಲ್ಲ. ಸದನದಲ್ಲಿ ನಮ್ಮ ತಂದೆ ಬಗ್ಗೆಯೂ ಮಾತನಾಡಿದ್ದರು. ಅದಕ್ಕೆ ಒಂದು ಸುತ್ತಿನ ಸೆಟ್ಲಮೆಂಟ್ ಮಾಡಿದ್ದೇವೆ. ಈಶ್ವರಪ್ಪ ಈಗ ಎಲ್ಲಿದ್ದಾರೆ? ನಮ್ಮ ವಿಚಾರಕ್ಕೆ ಬಂದವರಿಗೆ ಒಂದೊಂದೇ ಹಂತದಲ್ಲಿ ಸೆಟ್ಲಮೆಂಟ್ ಆಗಿದೆ" ಎಂದರು.

"ಈಶ್ವರಪ್ಪ ಗುಂಡಿಟ್ಟು ಕೊಲ್ಲುವುದಾದರೆ ಕೊಲ್ಲಲಿ. ಅವರ ಹೇಳಿಕೆಗೆ ನಡುಗುವ ರಕ್ತ ಡಿ ಕೆ ಸುರೇಶ್ ಮೈಯಲ್ಲಿ ಹರಿಯುತ್ತಿಲ್ಲ. ನಮ್ಮ ಪೂರ್ವಜರಾದ ಕೆಂಪೇಗೌಡರ ಇತಿಹಾಸ ಗೊತ್ತಿದೆಯೇ?. ನಮಗೆ ನಮ್ಮದೇ ಆದ ಇತಿಹಾಸವಿದೆ. ನಾವು ಕಿವಿ ಮೇಲೆ ಹೂವು ಇಟ್ಟುಕೊಂಡು ರಾಜಕಾರಣ ಮಾಡಲು ಬಂದಿಲ್ಲ" ಎಂದು ಹೇಳಿದರು.

ಜನರ ಅಭಿಪ್ರಾಯ ಸಂಗ್ರಹಿಸಲು ಪ್ರಣಾಳಿಕೆ ಸಮಿತಿ ಸಭೆ: "ಇಂದು ಕಾಂಗ್ರೆಸ್ ಪಕ್ಷದ ಕೇಂದ್ರ ಪ್ರಣಾಳಿಕೆ ಸಮಿತಿ ಸಭೆ ನಡೆಯುತ್ತಿದೆ. ನಮ್ಮ ಮುಖ್ಯಮಂತ್ರಿಗಳು ಈ ಸಮಿತಿ ಸದಸ್ಯರಾಗಿದ್ದಾರೆ. ಈಗಾಗಲೇ ಈ ಸಮಿತಿ ಅನೇಕ ಸಭೆಗಳನ್ನು ಮಾಡಿದ್ದು, ಇಲ್ಲಿನ ಜನರು ಹಾಗೂ ಸಂಘ, ಸಂಸ್ಥೆಗಳ ಅಭಿಪ್ರಾಯ ಸಂಗ್ರಹಿಸಲು ಇಂದು ಸಭೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾದ ಪಿ. ಚಿದಂಬರಂ ಅವರು ಕೂಡ ಇಂದಿನ ಸಭೆಗೆ ಆಗಮಿಸಬೇಕಿತ್ತು" ಎಂದರು.

"ಇಂದಿನ ಸಭೆಗೆ ಸುಮಾರು 150 ಜನರು ಹಾಗೂ ಸಂಘ ಸಂಸ್ಥೆಗಳಿಗೆ ಆಹ್ವಾನ ನೀಡಿದ್ದೆವು. ಬಹುತೇಕ ಎಲ್ಲರೂ ಸಭೆಗೆ ಆಗಮಿಸಿ ತಮ್ಮ ಸಲಹೆ ನೀಡುತ್ತಿದ್ದಾರೆ. ನಾವು ರಾಷ್ಟ್ರದ ಭದ್ರತೆ, ಎಲ್ಲಾ ವರ್ಗದ ಜನರಿಗೆ ಅನುಕೂಲ ಮಾಡಿಕೊಡುವುದನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ಮಾಡುತ್ತೇವೆ. ಈ ಹಿಂದೆ ನಾವು ಮಾಡಿದ ಗ್ಯಾರಂಟಿ ಪ್ರಣಾಳಿಕೆ ದೇಶಕ್ಕೆ ಮಾದರಿಯಾಗಿತ್ತು. ಅದನ್ನು ನಾವು ಕಾರ್ಯರೂಪಕ್ಕೆ ತಂದಿದ್ದೇವೆ. ನಾವು ಕಾರ್ಯರೂಪಕ್ಕೆ ತರಲು ಸಾಧ್ಯವಾಗುವ ಕಾರ್ಯಕ್ರಮಗಳನ್ನು ಮಾತ್ರ ಘೋಷಣೆ ಮಾಡುತ್ತೇವೆ" ಎಂದು ಹೇಳಿದರು.

"ಇಂಡಿಯಾ ಒಕ್ಕೂಟ ಕೂಡ ಸಭೆ ನಡೆಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಲಿದೆ. ಎಲ್ಲರೂ ಒಟ್ಟಾಗಿ ದೇಶದಲ್ಲಿ ಬದಲಾವಣೆ, ಕ್ರಾಂತಿ ತರಲು ಹೋರಾಟ ಮಾಡುತ್ತೇವೆ. ಜನರು ನೆಮ್ಮದಿಯ ಬದುಕು ಸಾಗಿಸಿಕೊಂಡು ಹೋಗುವಂತೆ ಮಾಡಲು ನಾವು ಬದ್ಧರಿದ್ದೇವೆ" ಎಂದು ತಿಳಿಸಿದರು.

ಇದನ್ನೂ ಓದಿ:ಈಶ್ವರಪ್ಪ ಅವರ ಮನೆಗೆ ನಾನೇ ಹೋಗ್ತೀನಿ, ಅವರೇ ನನಗೆ ಗುಂಡು ಹೊಡೆಯಲಿ: ಡಿಕೆ ಸುರೇಶ್

ABOUT THE AUTHOR

...view details