ಬೆಂಗಳೂರು :ಬರ ಪರಿಹಾರದ ವಿಚಾರದಲ್ಲಿ ದೆಹಲಿಯಲ್ಲಿ ಪ್ರತಿಭಟನೆ ಮಾಡುವ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ ಕೇವಲ ರಾಜಕೀಯ ಸ್ಟಂಟ್ ಆಗಿದೆ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆ ಇಂತಹ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಟೀಕಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ಪರಿಹಾರದ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಗೆ ಹೋಗಿ ಪ್ರತಿಭಟನೆ ಮಾಡುವುದಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಬರ ಪರಿಹಾರದ ವಿಚಾರದಲ್ಲಿ ಹಿಂದೆ ಯಾವಾಗ ಎಷ್ಟು ಬಿಡುಗಡೆ ಆಗಿತ್ತು ಎಂದು ಅವರು ಹೇಳಬೇಕು ಎಂದಿದ್ದಾರೆ.
ಈಗ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಹಾಗಾಗಿ ಇದು ಕೇವಲ ರಾಜಕೀಯ ಸ್ಟಂಟ್ ಅಷ್ಟೇ. ರಾಜ್ಯದ ರೈತರಿಗೆ ಒಂದು ನಯಾಪೈಸೆ ಬಿಡುಗಡೆ ಮಾಡಿಲ್ಲ. ಸದನದಲ್ಲೇ ಎರಡು ಸಾವಿರ ಪರಿಹಾರ ಕೊಡುವುದಾಗಿ ಹೇಳಿದ್ದರೂ ಹಣ ಬಿಡುಗಡೆ ಮಾಡಿಲ್ಲ. ಇದಕ್ಕೆ ಅವರು ಮೊದಲು ಉತ್ತರ ಕೊಡಲಿ. ರೈತರೇ ಸರ್ಕಾರಕ್ಕೆ ಎರಡು ಸಾವಿರ ರೂ. ಚೆಕ್ ಕೊಡುತ್ತಿದ್ದಾರೆ. ಇದು ನಾಚಿಕೆಗೇಡಿನ ಸರ್ಕಾರ. ಭ್ರಷ್ಟಾಚಾರ ಬಿಟ್ಟು ಬೇರೇನೂ ಮಾಡುತ್ತಿಲ್ಲ ಎಂದು ಟೀಕಿಸಿದ್ದಾರೆ.
ಯಡಿಯೂರಪ್ಪ ಸಿಎಂ ಆಗಿದ್ದಾಗ, ನಾನು ಸಿಎಂ ಆಗಿದ್ದಾಗ ಕೇಂದ್ರ ಸರ್ಕಾರವನ್ನು ಕಾಯದೇ ನಾವೇ ಹಿಂದೆ ಪರಿಹಾರ ಕೊಟ್ಟಿದ್ದೇವೆ. ಈ ರೀತಿಯ ಬೇಕಾದಷ್ಟು ಉದಾಹರಣೆ ಇದೆ. ಅತಿ ಹೆಚ್ಚು ಬಜೆಟ್ ಮಂಡಿಸಿರುವ ಸಿಎಂ ಎರಡು ಮೂರು ಸಾವಿರ ಕೋಟಿ ರೈತರಿಗೆ ಮೀಸಲಿಡ ಬಹುದಿತ್ತು ಎಂದರು.
ನಮ್ಮ ಮೇಲೆ 40 ಪರ್ಸೆಂಟ್ ಕಮೀಷನ್ ಆರೋಪ ಮಾಡಿದ್ದರು. ಆದರೆ, ಈಗ ಅವರ ಮೇಲೆಯೇ ಆರೋಪ ಬಂದಿದೆ.
ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ, ಕಾಂಗ್ರೆಸ್, ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಇಡೀ ದೇಶಕ್ಕೆ ಎಟಿಎಂ ಆಗಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ದುರ್ಬಳಕೆ ಮಾಡಲಾಗುತ್ತಿದೆ. ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಟೀಕಿಸಿದ್ದಾರೆ.
ಚುನಾವಣೆಯಲ್ಲಿ ಬಿಜೆಪಿಗೆ ಸೋಲಾದ ಹಿನ್ನೆಲೆ ನಾನು ಮಾತನಾಡುವ ನೈತಿಕತೆ ಇಲ್ಲ ಎಂದು ಎಂ ಬಿ ಪಾಟೀಲ್ ಹೇಳಿದ್ದಾರೆ. ಆದರೆ ನನ್ನ ನೈತಿಕತೆ ತೆಗೆದುಕೊಂಡು ಅವರೇನು ಮಾಡುತ್ತಾರೆ. ಕಾಂಗ್ರೆಸ್ ಶಾಸಕರೇ ನೈತಿಕವಾದ ಬೆಂಬಲವನ್ನು ವಾಪಸ್ ಪಡೆಯುವ ಕಾಲ ಬರಲಿದೆ ಎಂದರು.
ಡಿ.ಕೆ ಸುರೇಶ್, ವೀರಪ್ಪ ಮೊಯಿಲಿಯವರು ದೇಶದ ಕ್ಷಮೆ ಕೇಳಬೇಕು- ಪಿ.ರಾಜೀವ್ : ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಅವರ ದೇಶವಿರೋಧಿ ಹೇಳಿಕೆ ಖಂಡನೀಯವಾಗಿದೆ. ಅವರು ತಮ್ಮ ಹೇಳಿಕೆ ಸಂಬಂಧ ದೇಶದ ಮುಂದೆ ಕ್ಷಮೆ ಕೇಳಬೇಕು. ವೀರಪ್ಪ ಮೊಯಿಲಿ ಅವರು ಪ್ರಧಾನಿಯವರನ್ನು ಜಾತಿಗೆ ಜೋಡಿಸಿ (ಟ್ಯಾಗ್ ಮಾಡಿ) ಮಾತನಾಡಿದ್ದಕ್ಕೆ ಈ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ಒತ್ತಾಯಿಸಿದ್ದಾರೆ.