ಹಾಸನ: ಉಪ ಚುನಾವಣೆಯ ಬ್ಯುಸಿ ನಡುವೆಯೂ ಶುಕ್ರವಾರ ರಾತ್ರಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕುಟುಂಬ ಸಮೇತರಾಗಿ ಹಾಸನಾಂಬೆ ದೇವಿ ದರ್ಶನ ಪಡೆದರು.
ದೇವಿ ದರ್ಶನದ ಬಳಿಕ ಮಾತನಾಡಿದ ಅವರು, ಶುಭ ಶುಕ್ರವಾರ ತಾಯಿ ಹಾಸನಾಂಬೆ ದರ್ಶನಕ್ಕೆ ನಾನು ನನ್ನ ಕುಟುಂಬ ಸಮೇತ ಆಗಮಿಸಿರುವೆ. ಕಣ್ತುಂಬ ದೇವಿಯ ದರ್ಶನವಾಯಿತು. ಈ ಬಾರಿ ಒಳ್ಳೆಯ ಮಳೆ ಬಂದು ಶಾಂತಿ, ನೆಮ್ಮದಿಯನ್ನು ತಾಯಿ ಕರುಣಿಸಿದ್ದಾಳೆ. ಮೈಸೂರು ದಸರಾವನ್ನೂ ಈ ಬಾರಿ ಬಹಳ ವಿಜೃಂಭಣೆಯಿಂದ ಮಾಡಿದ್ದೇವೆ. ಅಂತೆಯೇ ಹಾಸನದಲ್ಲೂ ಉತ್ತಮವಾಗಿ ಹಾಸನಾಂಬೆ ದೇವಿ ಉತ್ಸವ ಹಿನ್ನೆಲೆಯಲ್ಲಿ ಆಕರ್ಷಕ ರೀತಿಯಲ್ಲಿ ಅಲಂಕಾರ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಯಿ ರಾಜ್ಯದ ಜನತೆಗೆ ನೆಮ್ಮದಿ, ಸುಖ, ಶಾಂತಿ ಕೊಡಲೆಂದು ಸರ್ಕಾರದಿಂದ ಪ್ರಾರ್ಥನೆ ಮಾಡಿದ್ದೇನೆ. ಹಿಂದೆಯೂ ಹಾಸನಾಂಬೆ ದೇವಿ ದರ್ಶನಕ್ಕೆ ಬಂದಿದ್ದೆ. ಹಾಗೆಯೇ ಇವತ್ತೂ ಕೂಡ ಬಂದಿದ್ದೇನೆ. ರಾಜ್ಯದ ಜನತೆಗೆ ಒಳ್ಳೆಯದಾಗಲಿ, ಐಶ್ವರ್ಯ, ವ್ಯವಸಾಯ - ವ್ಯಾಪಾರದಲ್ಲಿ ಸಮೃದ್ಧಿ ಕೊಡಲಿ. 3 ಕ್ಷೇತ್ರಗಳ ಉಪ ಚುನಾವಣೆ ಬಗ್ಗೆ ಈಗ ಮಾತನಾಡಲ್ಲ ಎಂದು ಹೇಳಿದರು.
ಡಿಕೆ ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ಅವರನ್ನು, ನೂತನ ಸಂಸದ ಶ್ರೇಯಸ್ ಪಟೇಲ್, ಅರಸೀಕೆರೆ ಶಾಸಕ ಹಾಗೂ ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಎಸ್ಪಿ ಮಹಮದ್ ಸುಜೀತಾ ಮೊದಲಾದವರು ಛತ್ರಿ - ಚಾಮರ, ಕೊಂಬು-ಕಹಳೆ, ಮಂಗಳವಾದ್ಯ ಹಾಗೂ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಂಡರು. ಮಾಜಿ ಎಂಎಲ್ಸಿ ಎಂ.ಎ. ಗೋಪಾಲಸ್ವಾಮಿ ಸೇರಿದಂತೆ ಕಾಂಗ್ರೆಸ್ನ ಹಲವು ಮುಖಂಡರು ಈ ವೇಳೆ ಹಾಜರಿದ್ದರು.
ಇದನ್ನೂ ಓದಿ:ಗರ್ಭ ಗುಡಿ ಬಾಗಿಲು ಓಪನ್ ; 9 ದಿನ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ
ಮೊದಲ ಬಾರಿ ದೇವಿಯ ದರ್ಶನ:ಮಾಜಿ ಸಚಿವ ಎನ್. ಮಹೇಶ್ ಕೂಡ ಹಾಸನಾಂಬೆ ದೇವಿಯ ದರ್ಶನ ಪಡೆದರು. ಬಳಿಕ ಮಾತನಾಡಿದ ಅವರು, ದೇವಿಯ ದರ್ಶನ ಮಾಡಬೇಕೆಂಬುದು ಹಲವು ವರ್ಷಗಳ ಬಯಕೆ ಇತ್ತು. ನಾನು ಶಾಸಕ, ಸಚಿವನಾಗಿದ್ದಾಗ ಅವಕಾಶ ಸಿಕ್ಕಿರಲಿಲ್ಲ. ಇವತ್ತು ತಾಯಿ ದರ್ಶನ ಮಾಡುವ ಸೌಭಾಗ್ಯ ಸಿಕ್ಕಿದೆ. ಈ ವರ್ಷ ಒಳ್ಳೆಯ ಮಳೆಯಾಗಿದೆ. ಬೆಂಗಳೂರು ಮತ್ತು ಕೆಲವು ಕಡೆ ಅನಾಹುತ ಕೂಡ ಆಗಿದೆ. ಮಳೆ, ಬೆಳೆ ಚೆನ್ನಾಗಿ ಆಗಿದೆ, ರಾಜ್ಯದ ಯಾವ ಮೂಲೆಯಲ್ಲಿ ಅನಾಹುತ ಆಗುವುದು ಬೇಡ ಎಂದು ತಾಯಿಯಲ್ಲಿ ಬೇಡಿದ್ದೇನೆ. ಇದೊಂದು ಬಹಳ ವಿಶೇಷವಾದ ಶಕ್ತಿಪೀಠವಾಗಿದೆ. ದೇವಿಯನ್ನು ಹತ್ತಿರದಲ್ಲಿ ನೋಡುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ ಎಂದರು.
ಮಾಜಿ ಸಚಿವ ಎನ್. ಮಹೇಶ್ (ETV Bharat) ಮೂರು ಕಡೆ ಉಪವಚುನಾವಣೆ ನಡೆಯುತ್ತಿದ್ದು, ಎರಡು ಕಡೆ ಬಿಜೆಪಿ, ಒಂದು ಕಡೆ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಇದ್ದಾರೆ. ಈ ಮೂರು ಜನರ ಗೆಲುವಿಗೆ ತಾಯಿ ಆಶೀರ್ವಾದ ಮಾಡು ಎಂದು ಕೇಳಿಕೊಳ್ಳುತ್ತೇನೆ. ಮೂರು ಕಡೆ ಗೆಲ್ಲುವ ವಿಶ್ವಾಸ ಇದೆ. ಈ ಚುನಾವಣೆ ಸಾರ್ವತ್ರಿಕ ಚುನಾವಣೆ ಅಲ್ಲ, ಇದು ಉಪಚುನಾವಣೆ. ಈ ಮೂರು ಕ್ಷೇತ್ರದ ಮತದಾರರು ಪ್ರಜ್ಞಾವಂತಿಕೆಯಿಂದ ಮತ ಹಾಕಬೇಕು. ಒಂದೂವರೆ ವರ್ಷ ಕಾಂಗ್ರೆಸ್ ದುರಾಡಳಿತವನ್ನು ಜನ ನೋಡಿದ್ದಾರೆ. ಇನ್ನೂ ಮೂರುವರೆ ವರ್ಷ ಈ ದುರಾಡಳಿತ ನಡೆಯಬಾರದೆಂದರೆ ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು ಎಂದರು.
ಇದನ್ನೂ ಓದಿ:ಗುರುವಾರ ಹಾಸನಾಂಬೆ ಗರ್ಭಗುಡಿ ಬಾಗಿಲು ಓಪನ್: 9 ದಿನ ದೇವಿ ದರ್ಶನ ಭಾಗ್ಯ, ಆನ್ಲೈನ್ನಲ್ಲೂ ಬುಕ್ಕಿಂಗ್ ವ್ಯವಸ್ಥೆ