ಬೆಂಗಳೂರು:ಜಗದೀಶ್ಶೆಟ್ಟರ್ ಪಕ್ಷ ಬಿಟ್ಟಿರುವುದಕ್ಕೆ ನಮ್ಮ ಪಕ್ಷದ ಕಾರ್ಯಕರ್ತರು ಬಹಳ ಸಂಭ್ರಮಪಟ್ಟಿದ್ದಾರೆ. ಅವರಿಂದ ತೆರವಾದ ಎಂಎಲ್‌ಸಿ ಸ್ಥಾನವನ್ನು ನಿಷ್ಠಾವಂತ ಕಾರ್ಯಕರ್ತರಿಗೆ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ಮಾತನಾಡಿದ ಅವರು, ''ಜಗದೀಶ್ ಶೆಟ್ಟರ್ ಹೋಗಿದ್ದು ಪಕ್ಷ ಕಟ್ಟಲು ಒಳ್ಳೆಯದಾಯಿತು. ಅವರು ಇದ್ದುದರಿಂದ ಮುಜುಗರ ಆಗುತ್ತಿತ್ತು. ಈಗ ಹೋಗಿದ್ದರಿಂದ ಮುಜುಗರ ತಪ್ಪಿದೆ. ಅಲ್ಪಸಂಖ್ಯಾತರು, ಹಿಂದುಳಿದವರು ಅವರನ್ನು ಒಪ್ಪುತ್ತಿರಲಿಲ್ಲ ಎಂದು ಸ್ಥಳೀಯರೇ ಹೇಳಿದ್ದಾರೆ'' ಎಂದರು.
''ಬಹಳ ದೂರದೃಷ್ಟಿಯಿಂದ ಶೆಟ್ಟರ್ ಅವರಿಗೆ ಅವಕಾಶ ಕೊಟ್ಟಿದ್ದೆವು. ಬಿಜೆಪಿ ವಿರುದ್ಧ ಅವರು ಕೊಟ್ಟ ಹೇಳಿಕೆಗಳಿಗೆ ಅವರೇ ಉತ್ತರ ಕೊಡಬೇಕು. ನಾವೇನೂ ಉತ್ತರ ಕೊಡುವ ಅಗತ್ಯ ಇಲ್ಲ. ಶೆಟ್ಟರ್ ಬಿಟ್ಟು ಒಂದು ದಿನ ಆಯ್ತು. ಒಂದು ದಿನ ಸೂರ್ಯ ಹುಟ್ಟಿತು, ಒಂದು ದಿನ ಮುಳುಗಿತು ಅಂದುಕೊಂಡು ಮರೆಯಬೇಕು. ಅವರಿಂದ ತೆರವಾದ ಸ್ಥಾನವನ್ನು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಕೊಡಲಿದ್ದೇವೆ'' ಎಂದು ತಿಳಿಸಿದರು.
''ಜಗದೀಶ ಶೆಟ್ಟರ್ ನಮ್ಮ ಪಕ್ಷಕ್ಕೆ ಸೇರಿದ್ದರು. ಚುನಾವಣೆಯಲ್ಲಿ 35,000 ಅಂತರದಲ್ಲಿ ಸೋತರು. ಬಿಜೆಪಿ ವಿರುದ್ಧ ದೊಡ್ಡ ದೊಡ್ಡ ಆರೋಪ ಮಾಡುತ್ತಾರೆ ಎಂದು ಸೇರಿದರು. ನಾನೇ ಇದೇ ವೇದಿಕೆಯಲ್ಲಿ ಅವರನ್ನು ಸೇರಿಸಿದ್ದೆ. ಅವರ ಹಿರಿತನಕ್ಕೆ ಗೌರವ ಕೊಟ್ಟು ಎಂಎಲ್‌ಸಿ ಮಾಡಿದ್ದೆವು. ಎರಡು ಮೂರು ತಿಂಗಳಲ್ಲಿ ಬಿಜೆಪಿಯವರು ಅವರ ಸಂಪರ್ಕದಲ್ಲಿದ್ದು ಗೊತ್ತಿತ್ತು. ಅವರು ಅನೇಕರನ್ನು ಬಿಜೆಪಿಯಿಂದ ಕಾಂಗ್ರೆಸ್ಗೆ ಸೇರಿಸಲು ಪಟ್ಟಿಯನ್ನು ಕೊಟ್ಟಿದ್ದರು. ಕೆಲವರನ್ನು ಕಾಂಗ್ರೆಸ್ಗೆ ಸೇರಿಸಿದ್ದರು. ಈಗ ಏಕಾಏಕಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ'' ಎಂದು ಮಾಹಿತಿ ನೀಡಿದ್ದಾರೆ.
''ನಮ್ಮ ಪಕ್ಷ ದೊಡ್ಡ ಸಮುದ್ರ ಇದ್ದ ಹಾಗೆ. ನೂರಾರು ಜನ ಬೇಕಾದರೂ ಬರಬಹುದು, ಹೋಗಬಹುದು. ಯಾರಿಂದಲೂ ಏನು ಮಾಡುವುದಕ್ಕೆ ಆಗಲ್ಲ. ಕಾಂಗ್ರೆಸ್ ದೊಡ್ಡ ಶಕ್ತಿ. ಬಹಳಷ್ಟು ಜನ ನಮ್ಮತ್ತ ಬರಲು ಸಿದ್ದರಿದ್ದಾರೆ. ಆದರೆ, ಅವರ ಹೆಸರು ಹೇಳಲು ಬಯಸಲ್ಲ. ನಾವು ಸಿದ್ಧಾಂತದ ಮೇಲೆ ರಾಜಕಾರಣ ಮಾಡುತ್ತೇವೆ'' ಎಂದು ಅವರು ತಿಳಿಸಿದರು.
ಕುಮಾರಸ್ವಾಮಿ ಬಿಜೆಪಿ ವಕ್ತಾರ:''ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ನಾವು ಹಿಂದೆ ಬಿಜೆಪಿಯವರನ್ನು ದೂರ ಇಡಬೇಕೆಂದು ಕುಮಾರಸ್ವಾಮಿಯವರನ್ನು ಸಿಎಂ ಮಾಡಿದ್ದೆವು. ಷರತ್ತು ಇಲ್ಲದೇ ಬೆಂಬಲ ನೀಡಿದ್ದೆವು. ಬಳಿಕ ಆಪರೇಷನ್ ಕಮಲ ಮಾಡಿ ಸರ್ಕಾರವನ್ನು ಪತನಗೊಳಿಸಿದರು. ಸರ್ಕಾರ ತೆಗೆದವನ ಜೊತೆನೇ ನಂಟಸ್ತನ ಬೆಳೆಸಿದ್ದಾರೆ'' ಎಂದು ದೂರಿದರು.
''ಜೆಡಿಎಸ್ ಬಿಜೆಪಿಯ ವಕ್ತಾರ ಆಗಿದ್ದಾರೆ. ಕುಮಾರಸ್ವಾಮಿ ಬಿಜೆಪಿಯ ವಕ್ತಾರರಾಗಿದ್ದಾರೆ. ಅವರನ್ನು ತೆಗೆದವರ ಜೊತೆನೇ ಬೆಳಗ್ಗೆ ಸಾಯಂಕಾಲ ತಬ್ಬಿಕೊಂಡು, ನೆಂಟಸ್ತಿಕೆ ಬೆಳೆಸಿದ್ದಾರೆ. ಅವತ್ತು ತಮ್ಮನ್ನು ತೆಗೆದ ಬಿಜೆಪಿಯವರ ವಿರುದ್ಧ ಏನೇನು ಮಾತನಾಡಿದ್ದಾರೆ. ಆ ಮಾತುಗಳಿಗೆ ಅವರೇ ಉತ್ತರ ಕೊಡಬೇಕು. ದೇವೇಗೌಡರು ಬಿಜೆಪಿ ವಿರುದ್ಧ ಏನು ಹೇಳಿದ್ದರು. ಅದಕ್ಕೆ ಅವರೇ ಉತ್ತರ ಕೊಡಬೇಕು'' ಎಂದು ಕಿಡಿಕಾರಿದರು.
ಸವದಿ ನಮ್ಮ ಪಕ್ಷದ ನಾಯಕ:ಲಕ್ಷ್ಮಣ್ ಸವದಿ ಸ್ಪಷ್ಟವಾಗಿ ಹೇಳಿದ್ದಾರೆ. ನಾವು ಒಗ್ಗಟ್ಟಾಗಿ ಹೋಗೋಣ ಎಂದಿದ್ದಾರೆ. ಅವರು ಪಕ್ಷದ ಆಸ್ತಿಯಾಗಿರಲಿದ್ದಾರೆ. ಅವರು ನಮ್ಮ ನಾಯಕರು ಎಂದು ಇದೇ ವೇಳೆ ತಿಳಿಸಿದರು. ನಮಗೂ ಆ ತರ ಮಾಡಲು ಗೊತ್ತು. ನಾವು ಸುಮ್ಮನೆ ಇದ್ದೇವೆ. ಇಲ್ಲದಿದ್ದರೆ ಎಷ್ಟೋ ಮನೆಗಳು ಖಾಲಿ ಆಗುತ್ತಿತ್ತು. ನಾನು ಬಿಜೆಪಿಯವರ ಸಂಪರ್ಕದಲ್ಲಿದ್ದೇನೆ. ನಾನು ಪಟ್ಟಿ ಹೇಳಬೇಕಾ? ಎಂದು ಇದೇ ವೇಳೆ ಆಪರೇಷನ್ ಹಸ್ತದ ಸುಳಿವು ಕೊಟ್ಟರು.