ಬೆಂಗಳೂರು: ಪೆನ್ ಡ್ರೈವ್ ಪ್ರಕರಣದ ಷಡ್ಯಂತ್ರದಲ್ಲಿ ಡಿಸಿಎಂ ಇದ್ದಾರೆ. ಇದಕ್ಕೆ ದೇವರಾಜೇಗೌಡ, ಶಿವರಾಮೇಗೌಡರ ಸಂಭಾಷಣೆಯಲ್ಲಿ ಕೇಳಿ ಬಂದ ಆಡಿಯೋ ಸಾಕ್ಷಿಯಾಗಿದ್ದು, ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ರಾಜೀನಾಮೆ ಕೊಡಬೇಕು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಜೆಪಿ ನಗರ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ರಾಜೀನಾಮೆ ಕುರಿತು ಈಗಾಗಲೇ ನಾವು ಹೇಳಿ ಆಯ್ತು. ಇಷ್ಟೆಲ್ಲ ಪ್ರಕರಣದಲ್ಲಿ ಭಾಗಿಯಾದ ಮೇಲೂ ಅವರನ್ನು ಮುಂದುವರೆಸಿರೋದು ನೋಡಿದರೆ ಇಂತಹವರಿಗೆ, ತಪ್ಪಿತಸ್ಥರಿಗೆ ರಕ್ಷಣೆ ಕೊಡೋಕೆ ಈ ಸರ್ಕಾರ ಇರೋದು ಅಂತ ಸ್ಪಷ್ಟವಾಗಿದೆ. ಡಿಕೆ ಶಿವಕುಮಾರ್ ಇದರಲ್ಲಿ ಏನು ಮಾಡಿದ್ದಾರೆ ಅನ್ನೋದು ಜಗಜ್ಜಾಹಿರಾಗಿದೆ. ಆದರೂ ಡಿಕೆ ಶಿವಕುಮಾರ್ ಅವರನ್ನು ರಕ್ಷಣೆ ಮಾಡೋ ಕೆಲಸ ಮಾಡ್ತಿದ್ದಾರೆ. ಸರ್ಕಾರ ಮುಂದೆ ಇದಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಈ ನೆಲದ ಕಾನೂನಿನಲ್ಲಿ ಯಾರೇ ಇದ್ದರೂ ತಲೆಬಾಗಲೇಬೇಕು. ನಿತ್ಯ ಹಣದ, ಅಧಿಕಾರದ ದುರುಪಯೋಗ ಪಡಿಸಿಕೊಂಡು ಬಹಳ ದಿನ ಉಳಿಯೋದಕ್ಕೆ ಆಗೋದಿಲ್ಲ. ಅದಕ್ಕೂ ಅಂತಿಮ ದಿನಗಳು ಬರುತ್ತವೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು.
ಸಾಕ್ಷಿ ಕೇಳುವ ಸಿಎಂಗೆ ಆಡಿಯೋ ಕಾಣ್ತಿಲ್ವ?:ಸಿಎಂ ಸಿದ್ದರಾಮಯ್ಯ ಅವರ ಪ್ರತಿಕ್ರಿಯೆ ಗಮನಿಸಿದ್ದೇನೆ. ಸಿಎಂ ಸಾಕ್ಷಿ ಕೇಳುತ್ತಿದ್ದಾರೆ. ಮಾಧ್ಯಮಗಳಿಗೆ ಬಿಡುಗಡೆ ಆಗಿರುವ ದೇವರಾಜೇಗೌಡ, ಶಿವರಾಮೇಗೌಡರ ಸಂಭಾಷಣೆಯನ್ನು ಡಿಕೆ ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ಅರ್ಧ ನಿಮಿಷ ಮಾತನಾಡಿದ್ದೆ ಅಂತ ಹೇಳ್ತಾರೆ. ಯಾರು ಯಾರೋ ಬರುತ್ತಿರುತ್ತಾರೆ, ಕೆಟ್ಟವರು ಬರುತ್ತಾರೆ, ಒಳ್ಳೆಯವರು ಬರುತ್ತಾರೆ ಅಂತ ಹೇಳಿದ್ದಾರೆ. ಅರ್ಧ ನಿಮಿಷ ಮಾತನಾಡಿರುವುದೋ ಪ್ರಮುಖವಾದ ಅಂಶ ಅಲ್ಲವೇ? ಸಾಕ್ಷಿ ಕೊಡಿ ಅಂತ ಸಿಎಂ ಹೇಳ್ತಾರೆ. ಇವತ್ತು ಎಸ್ಐಟಿ ಅವರು 7 ಜನರನ್ನ ಬಂಧನ ಮಾಡಿ ಕರೆ ತಂದಿದ್ದಾರಲ್ಲ, ಯಾವ ಸಾಕ್ಷಿ ಮೇಲೆ ಬಂಧನ ಮಾಡಿ ಕರೆ ತಂದಿದ್ದಾರೆ? ಹಲವಾರು ಜನರನ್ನ ನಿತ್ಯ ಕರೆದು ಕಿರುಕುಳ ನೀಡುತ್ತಿದ್ದಾರೆ, ಅವರಿಗೂ ಇವರಿಗೂ ಈ ಒಂದು ಪ್ರಕರಣಕ್ಕೂ ಏನೂ ಸಂಬಂಧ ಇದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಆಡಿಯೋದಲ್ಲಿ ಸ್ಪಷ್ಟವಾಗಿ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಮಾಹಿತಿ ಏನಿದೆಯೋ ಅದನ್ನು ಕೊಡಿ ಅಂತ ಡಿಕೆ ಶಿವಕುಮಾರ್ ಕೇಳುತ್ತಾರೆ. ದೂರನ್ನ ಬಹಳ ಕಷ್ಟ ಪಟ್ಟು ಕೊಡಿಸಿದ್ದೇವೆ ಅಂತಲೂ ಹೇಳುತ್ತಾರೆ. ಇದಕ್ಕಿಂತಲೂ ಸಿಎಂ ಅವರಿಗೆ ಸಾಕ್ಷಿ ಬೇಕಾ? ಎಂದು ಮಾಜಿ ಸಿಎಂ ಪ್ರಶ್ನಿಸಿದರು.
ಪ್ರಜ್ವಲ್ ಆರೋಪಿಯಷ್ಟೇ ಅಪರಾಧಿಯಲ್ಲ:ಪ್ರಕರಣ ಸಂಬಂಧ 6 ಪ್ರಶ್ನೆ ಇಟ್ಟಿದ್ದಾರಂತೆ, ಬಿಜೆಪಿಯವರಿಗೆ ಏನೋ ಪತ್ರ ಬರೆದಿದ್ದರಂತೆ, ಗೊತ್ತಿದ್ದು ಪ್ರಜ್ವಲ್‌ಗೆ ಏಕೆ ಟಿಕೆಟ್ ಕೊಟ್ರಿ ಅಂತ ಕೇಳ್ತಿದ್ದಾರೆ. ಜೆಡಿಎಸ್ ಪ್ರಜ್ವಲ್ ಅವರನ್ನ ಸಸ್ಪಂಡ್ ಏಕೆ ಮಾಡಿತು? ಅಂತಲೂ ಪ್ರಶ್ನೆ ಮಾಡಿದ್ದಾರೆ. ಈ ಸಂಬಂಧ ಸಿಎಂ ಹೇಳಿಕೆ ನೋಡಿದೆ ಅವರ ಹೇಳಿಕೆಯಲ್ಲಿ ಆರೋಪಿಯನ್ನ ಅಪರಾಧಿ ಅಂತ ಮಾಡಿದ್ದಾರೆ. ಪ್ರಜ್ವಲ್ ಇನ್ನು ಆರೋಪಿ ಸ್ಥಾನದಲ್ಲಿ ಇದ್ದಾನೆ. ಅಪರಾಧಿ ಅನ್ನುವುದನ್ನ ಎಲ್ಲಿ ಸಾಬೀತು ಮಾಡಿದ್ದಾರೆ? ನಿಮ್ಮ ಎಸ್ಐಟಿ ಅವರೇ ವಿಡಿಯೋದಲ್ಲಿ ಪುರುಷರ ಮುಖವೇ ಇಲ್ಲ ಅಂತ ಹೇಳುತ್ತಿದ್ದಾರೆ. ಹಾಗಾದರೆ ಅಪರಾಧಿ ಸ್ಥಾನದಲ್ಲಿ ಏಕೆ ನಿಲ್ಲಿಸುತ್ತಾರೆ. ನಾವು ನೈತಿಕತೆ ಉಳಿಸಿಕೊಳ್ಳಲು ಈ ಆರೋಪ ಕೇಳಿ ಬಂದ ಮೇಲೆ ಪ್ರಜ್ವಲ್ ಅವರನ್ನು ಸಸ್ಪೆಂಡ್ ಮಾಡಿದ್ದೇವೆ ಎಂದು ಅಮಾನತು ಆರೋಪವನ್ನು ಕುಮಾರಸ್ವಾಮಿ ಸಮರ್ಥನೆ ಮಾಡಿಕೊಂಡರು.
ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ: ಒಬ್ಬ ಡಿಸಿಎಂ ಅಷ್ಟು ಸ್ಪಷ್ಟವಾಗಿ ಮಾತನಾಡುತ್ತಿರೋದು ಕಣ್ಣು ಮುಂದೆ ಇದೆ. ಆ ವ್ಯಕ್ತಿಗಳನ್ನ ಇಷ್ಟಾದರೂ ಕರೆದುಕೊಂಡು ಬಂದು ದೂರು ಕೊಡಿಸಿದ್ದೇವೆ ಅಂತ ನಿಮ್ಮ ಮಹಾನುಭಾವ ಹೇಳಿದ್ದಾರೆ ಅಲ್ವಾ? ಅದಕ್ಕಿಂತ ಸಾಕ್ಷಿ ಬೇಕಾ ನಿಮಗೆ? ಇಂತಹವರನ್ನ ಇಟ್ಟುಕೊಂಡು ರಾಜ್ಯ ಕಟ್ಟುತ್ತಿರಾ ನೀವು? ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧವೂ ಹರಿಹಾಯ್ದರು.