ಬೆಂಗಳೂರು:ನನಗೆ ಚನ್ನಪಟ್ಟಣ ಒಂದೇ ಕ್ಷೇತ್ರದಲ್ಲಿ ಜನರು 10,000 ಅಹವಾಲು ಅರ್ಜಿಗಳನ್ನು ಕೊಟ್ಟಿದ್ದಾರೆ. ಅಂದರೆ, ಹೆಚ್.ಡಿ.ಕುಮಾರಸ್ವಾಮಿ ಕೆಲಸ ಮಾಡಿಲ್ಲ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ ಎಂದು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.
ರಾಜ್ಯ ಸರ್ಕಾರ ಏನು ಕೆಲಸ ಮಾಡುತ್ತಿಲ್ಲ ಮತ್ತು ಅದಕ್ಕಾಗಿ ನನಗೆ 3 ಸಾವಿರ ಅಹವಾಲು ಅರ್ಜಿಗಳು ಬಂದಿದೆ ಎಂಬ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ''ಅವರು ಹೇಳೋದು ಸರಿ ಇದೆ. ನನಗೆ ಚನ್ನಪಟ್ಟಣ ಒಂದೇ ಕ್ಷೇತ್ರದಲ್ಲಿ ಜನತೆ 10,000 ಅರ್ಜಿ ಕೊಟ್ಟಿದ್ದಾರೆ. ಅರ್ಜಿ ಕೊಟ್ಟವರ ಫೋನ್ ಸಂಖ್ಯೆ ಮತ್ತು ಅರ್ಜಿ ಇದೆ. ಆ ಅರ್ಜಿಗಳನ್ನೆಲ್ಲಾ ಕೌಂಟರ್ನಲ್ಲಿ ಸ್ವೀಕಾರ ಮಾಡಿದ್ದೇವೆ. ಹೆಚ್ಡಿಕೆ ಏನು ಕೆಲಸ ಮಾಡಿಲ್ಲ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ?. ಅವರು ಮಾತ್ರ ರಾಜಕಾರಣ ಮಾಡುತ್ತಾರಾ?, ನಮಗೆ ರಾಜಕಾರಣ ಮಾಡಲು ಬರುತ್ತೆ. ಆದರೆ, ನಮಗೆ ರಾಜಕಾರಣ ಮುಖ್ಯ ಅಲ್ಲ. ಜನರ ಸೇವೆ ಮಾಡಬೇಕು ಎಂಬುದು ನಮಗೆ ಮುಖ್ಯ'' ಎಂದು ತಿಳಿಸಿದರು.
ಮುಡಾ ನಿವೇಶನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ''ಆಸ್ತಿ ಕಳೆದಕೊಂಡಿರುವವರು ಅರ್ಜಿ ಸಲ್ಲಿಸಿ ಪರಿಹಾರ ಕೇಳಿದ್ದಾರೆ. ಮುಡಾ ನಿಯಮದ ಪ್ರಕಾರ, ನಿವೇಶನ ಹಂಚಿಕೆ ಮಾಡಲಾಗಿದೆ. ಎಲ್ಲ ಕಡೆ ಈ ತರ ನಿವೇಶನ ಹಂಚಿಕೆ ಮಾಡುವ ಅವಕಾಶ ಇದೆ. ಅದರ ಪ್ರಕಾರ ಮುಡಾದವರು ಪರಿಹಾರ ಕೊಟ್ಟಿದ್ದಾರೆ. ಸಿಎಂ ಕೂಡ ತಮ್ಮ ಅಫಿಡವಿಟ್ನಲ್ಲಿ ತಮ್ಮ ಪತ್ನಿಗೆ ಈ ರೀತಿ ಆಸ್ತಿ ಬಂದಿದೆ ಎಂಬುವುದಾಗಿ ಉಲ್ಲೇಖಿಸಿದ್ದಾರೆ'' ಎಂದು ಹೇಳಿದರು.